ನೀಟ್ ಮರು ಪರೀಕ್ಷೆ: ಅಭ್ಯರ್ಥಿ ತಡವಾಗಿ ಪರೀಕ್ಷಾ ಕೇಂದ್ರ ತಲುಪಿದ್ದಕ್ಕೆ ಟ್ರಾಫಿಕ್ ಸಮಸ್ಯೆ ಕಾರಣವಲ್ಲ!

ಬೆಂಗಳೂರು: ತಡವಾಗಿ ಪರೀಕ್ಷಾ ಕೇಂದ್ರ ತಲುಪಿದ ಕಾರಣಕ್ಕೆ ವಿದ್ಯಾರ್ಥಿಯೊಬ್ಬ ನೀಟ್ (NEET) ಮರು ಪರೀಕ್ಷೆ ಬರೆಯುವ ಅವಕಾಶದಿಂದ ವಂಚಿತರಾದ ವಿಚಾರಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಎದ್ದಿದ್ದ ವದಂತಿಗಳಿಗೆ ಬೆಂಗಳೂರು ನಗರ ಪೊಲೀಸ್ (BCP) ಹಾಗೂ ಬೆಂಗಳೂರು ಸಂಚಾರ ಪೊಲೀಸ್ (BTP) ಜಂಟಿಯಾಗಿ ಸ್ಪಷ್ಟನೆ ನೀಡಿವೆ.

ನಗರದಲ್ಲಿ ಅಂದು ನಡೆದ ಸಾರ್ವಜನಿಕ ಕಾರ್ಯಕ್ರಮದ ಕಾರಣ ಕಾಣಿಸಿಕೊಂಡ ಟ್ರಾಫಿಕ್ ಜಾಮ್ ನಿಂದ ಅಭ್ಯರ್ಥಿ ಪರೀಕ್ಷಾ ಕೇಂದ್ರ ತಲುಪಲು ತಡವಾಯಿತು ಎಂಬ ಆರೋಪವನ್ನು ಪೊಲೀಸರು ನಿರಾಕರಿಸಿದ್ದಾರೆ.

ಈ ಬಗ್ಗೆ ‘ಎಕ್ಸ್’ನಲ್ಲಿ ಪೋಸ್ಟ್ ವೊಂದನ್ನು ಹಾಕಿರುವ ಪೊಲೀಸರು ಅಂದಿನ ಸಿಸಿಟಿವಿ ದೃಶ್ಯಾವಳಿಗಳು, ಅಭ್ಯರ್ಥಿ ಮತ್ತು ಪೋಷಕರೊಂದಿಗಿನ ಸಂಭಾಷಣೆ ಹಾಗೂ ಮಾರ್ಗ ವಿಶ್ಲೇಷಣೆಯ ಆಧಾರದ ಮೇಲೆ ಅಧಿಕೃತ ಫ್ಯಾಕ್ಟ್ ಚೆಕ್ (Fact Check) ವರದಿಯನ್ನು ಬಿಡುಗಡೆ ಮಾಡಿದ್ದಾರೆ.

‘ಸಿಸಿಟಿವಿ ಪರಿಶೀಲನೆ ಮತ್ತು ಮಾರ್ಗ ವಿಶ್ಲೇಷಣೆಯಿಂದ ನೀಟ್ (NEET) ಮರು ಪರಿಕ್ಷೆಯ ಅಭ್ಯರ್ಥಿ ನಿಗದಿಪಡಿಸಿದ ಸಮಯ ಮುಗಿದ ನಂತರವೇ ಪರೀಕ್ಷಾ ಕೇಂದ್ರವನ್ನು ತಲುಪಿರುವುದು ದೃಢಪಟ್ಟಿದೆ. ಆದರೆ ಸಮಯದಲ್ಲಿ ಸಂಚಾರ ದಟ್ಟಣೆ ಸಹಜ ಸ್ಥಿತಿಯಲ್ಲಿತ್ತು. ಅಗತ್ಯವಿದ್ದೆಡೆ ಸಂಚಾರಿ ಪೊಲೀಸರು ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದ್ದರು. ಅಭ್ಯರ್ಥಿ ಮನೆಯಿಂದ ತಡವಾಗಿ ಹೊರಟಿರುವುದು ಮತ್ತು ಮಾರ್ಗ ಆಯ್ಕೆಯಲ್ಲಿನ ತಪ್ಪೇ ವಿಳಂಬಕ್ಕೆ ಪ್ರಮುಖ ಕಾರಣ” ಪೊಲೀಸರು ತಿಳಿಸಿದ್ದಾರೆ.

ಸಿಸಿಟಿವಿ ದಾಖಲೆಗಳ ಪ್ರಕಾರ ಅಭ್ಯರ್ಥಿಯು ಮಧ್ಯಾಹ್ನ 12:57ಕ್ಕೆ ಆರ್.ಟಿ. ನಗರದಲ್ಲಿರುವ (R.T. Nagar) ತನ್ನ ಮನೆಯಿಂದ ಹೊರಟಿದ್ದಾರೆ. ಮಧ್ಯಾಹ್ನ 01:33ಕ್ಕೆ ಅಭ್ಯರ್ಥಿಯು ಪರೀಕ್ಷಾ ಕೇಂದ್ರದ ಆವರಣ ತಲುಪಿದ್ದಾರೆ. ಅಂದರೆ ಪರೀಕ್ಷಾ ಕೇಂದ್ರ ಪ್ರವೇಶಿಸಲು ನಿಗದಿತಪಡಿಸಿರುವ ಅವಧಿಗಿಂತ 3 ನಿಮಿಷ ತಡವಾಗಿತ್ತು.

ಪೊಲೀಸರು ಹೇಳಿದ್ದೇನು….?

ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಪರೀಕ್ಷಾ ಕೇಂದ್ರದ ಪ್ರವೇಶದ ಕೊನೆಯ ಅವಧಿಗಿಂತ (Cut-off time) ಕೇವಲ 33 ನಿಮಿಷಗಳು ಬಾಕಿ ಇರುವಾಗ ಅಭ್ಯರ್ಥಿ ಮನೆಯಿಂದ ಹೊರಟಿದ್ದಾನೆ.

ಕಡಿಮೆ ಸಮಯದಲ್ಲಿ ತಲುಪಬಹುದಾದ ಸುಲಭ ಹಾಗೂ ಹತ್ತಿರದ ರಸ್ತೆಗಳು ಲಭ್ಯವಿದ್ದರೂ, ಅಭ್ಯರ್ಥಿಯು ಹೆಚ್ಚು ಸಮಯ ತೆಗೆದುಕೊಳ್ಳುವ ಸುದೀರ್ಘ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದಾನೆ.

ಅಂದು ರಸ್ತೆಗಳಲ್ಲಿ ಟ್ರಾಫಿಕ್ ಪರಿಸ್ಥಿತಿ ಸಾಮಾನ್ಯವಾಗಿತ್ತು. ನಗರದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಿಂದಾಗಿ ಯಾವುದೇ ರೀತಿಯ ಅಸಹಜವಾದ ಸಂಚಾರ ದಟ್ಟಣೆ ಉಂಟಾಗಿರಲಿಲ್ಲ. ಅಭ್ಯರ್ಥಿ ಸಂಚರಿಸುತ್ತಿದ್ದ ರಸ್ತೆಯಲ್ಲಿ ನಿಯೋಜನೆಗೊಂಡಿದ್ದ ಸಂಚಾರ ಪೊಲೀಸ್ ಸಿಬ್ಬಂದಿ, ಅಭ್ಯರ್ಥಿಯ ವಾಹನ ಸುಲಭವಾಗಿ ಸಾಗಲು ಅಗತ್ಯವಿದ್ದ ಕಡೆಗಳಲ್ಲಿ ನೆರವು ನೀಡಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಲಭ್ಯವಿರುವ ಎಲ್ಲ ತಾಂತ್ರಿಕ ಸಾಕ್ಷ್ಯಗಳನ್ನು ಪರಿಶೀಲಿಸಿದಾಗ ಸಾರ್ವಜನಿಕ ಕಾರ್ಯಕ್ರಮದ ಟ್ರಾಫಿಕ್ನಿಂದಾಗಿ ಅಭ್ಯರ್ಥಿಯು ಪರೀಕ್ಷಾ ಕೇಂದ್ರವನ್ನು ತಡವಾಗಿ ತಲುಪಲು ಕಾರಣವಾಯಿತು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಪರೀಕ್ಷಾ ಸಮಯಕ್ಕಿಂತ ಕೇವಲ 33 ನಿಮಿಷ ಮುಂಚಿತವಾಗಿ ಮನೆಯಿಂದ ಹೊರಟಿರುವುದು ಮತ್ತು ಸಂಚಾರಕ್ಕೆ ತಪ್ಪಾದ ರಸ್ತೆಯನ್ನು ಆಯ್ಕೆ ಮಾಡಿಕೊಂಡಿದ್ದೇ ಅಭ್ಯರ್ಥಿ ಪರೀಕ್ಷೆಗೆ ತಡವಾಗಿ ಬರಲು ಮುಖ್ಯ ಕಾರಣ ಎಂದು ಹೇಳಿದೆ.

ಜೂನ್ 21ರಂದು ಅರಮನೆ ಮೈದಾನದಲ್ಲಿ ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಆಯ್ಕೆ ಬಿ.ಕೆ.ಹರಿಪ್ರಸಾದ್ ಪದಗ್ರಹಣ ಸಮಾರಂಭ ಆಯೋಜನೆಗೊಂಡಿತ್ತು. ಈ ಕಾರ್ಯಕ್ರಮದಿಂದಾಗಿ ನೀಟ್ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ ಎಂದು ಬಿಜೆಪಿ ಆರೋಪಿಸಿತ್ತು.

Leave a Reply

Your email address will not be published. Required fields are marked *

error: Content is protected !!