ಉಡುಪಿ: ಅಕ್ರಮವಾಗಿ ಶಿಶು ಮಾರಾಟ ಆರೋಪ- ಖ್ಯಾತ ವೈದ್ಯ ಸೇರಿ ಇಬ್ಬರ ಬಂಧನ

ನೇಜಾರಿನಲ್ಲಿ 1 ತಿಂಗಳ ಹೆಣ್ಣು ಮಗು ಸಾಕುತ್ತಿದ್ದ ದಂಪತಿ ವಿರುದ್ಧ ಪ್ರಕರಣ

ಉಡುಪಿ, ಜೂನ್ 22: ಅಕ್ರಮವಾಗಿ ಶಿಶುವನ್ನು ದತ್ತು ಪಡೆದು ಸಾಕುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಖ್ಯಾತ ವೈದ್ಯರು ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ.

ಬ್ರಹ್ಮಾವರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ ವಲಯ ಮೇಲ್ವಿಚಾರಕರು ಮಕ್ಕಳ ರಕ್ಷಣಾ ಘಟಕಕ್ಕೆ ನೀಡಿದ ಮಾಹಿತಿಯಂತೆ, ಉಡುಪಿ ತಾಲೂಕಿನ ಸಂತೆಕಟ್ಟೆ-ನೇಜಾರು ನಿವಾಸಿಗಳಾದ ಪ್ರಕಾಶ್ ಹಾಗೂ ಪೂರ್ಣಿಮಾ ದಂಪತಿ ಸುಮಾರು ಒಂದು ತಿಂಗಳ ಹೆಣ್ಣು ಮಗುವನ್ನು ಯಾವುದೇ ಕಾನೂನುಬದ್ಧ ಪ್ರಕ್ರಿಯೆಗಳಿಲ್ಲದೆ ಸಾಕುತ್ತಿರುವುದು ಬೆಳಕಿಗೆ ಬಂದಿದೆ.

ಈ ಮಾಹಿತಿ ಆಧರಿಸಿ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಹಾಗೂ ಶಿಶು ಅಭಿವೃದ್ಧಿ ಯೋಜನೆಯ ಅಧಿಕಾರಿಗಳು ಜೂನ್ 19ರಂದು ಸಂತೆಕಟ್ಟೆಯ ಸುಬ್ರಹ್ಮಣ್ಯನಗರದಲ್ಲಿರುವ ದಂಪತಿಯ ಮನೆಗೆ ಭೇಟಿ ನೀಡಿದರು. ಈ ವೇಳೆ ದಂಪತಿ ಹಾಗೂ ಮಗುವಿನ ಬಗ್ಗೆ ವಿಚಾರಣೆ ನಡೆಸಿದಾಗ ಅನುಮಾನಾಸ್ಪದ ಮಾಹಿತಿ ಲಭ್ಯವಾಗಿದೆ.

ವಿಚಾರಣೆಯಲ್ಲಿ, ಪ್ರಕಾಶ್ ಮತ್ತು ಪೂರ್ಣಿಮಾ ದಂಪತಿಗೆ ವಿವಾಹವಾಗಿ 11 ವರ್ಷಗಳಾದರೂ ಮಕ್ಕಳಾಗದೇ ಇದ್ದ ಕಾರಣ ಉಡುಪಿಯ ಕಾಮತ್ ನರ್ಸಿಂಗ್ ಹೋಂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂಬುದು ತಿಳಿದುಬಂದಿದೆ. ಈ ಸಂದರ್ಭದಲ್ಲಿ ಪೂರ್ಣಿಮಾ ಅವರ ಅಕ್ಕ ಲಕ್ಷ್ಮಿ ಮೂಲಕ ಆಸ್ಪತ್ರೆಯಲ್ಲಿ ಮಗು ಇರುವ ವಿಚಾರ ತಿಳಿದು, ವೈದ್ಯ ಡಾ. ಕೆ. ಸುರೇಂದ್ರ ಕಾಮತ್ ಅವರನ್ನು ಸಂಪರ್ಕಿಸಿ ಮಗುವನ್ನು ನೀಡುವಂತೆ ಮನವಿ ಮಾಡಿದ್ದರು ಎನ್ನಲಾಗಿದೆ.

ಆರೋಪದ ಪ್ರಕಾರ, ಡಾ. ಸುರೇಂದ್ರ ಕಾಮತ್ ದಂಪತಿಗೆ ಸುಮಾರು ಒಂದು ತಿಂಗಳ ಹಿಂದೆ ಹೆಣ್ಣು ಮಗುವನ್ನು ನೀಡಿದ್ದು, ಬಳಿಕ ಮಗುವಿನ ಹೆಸರಿನಲ್ಲಿ ಜನನ ಪ್ರಮಾಣ ಪತ್ರವನ್ನೂ ಮಾಡಿಕೊಟ್ಟಿದ್ದಾರೆ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ. ಮಗುವಿನ ಜೈವಿಕ ಪೋಷಕರು ಯಾರು ಎಂಬ ಮಾಹಿತಿ ದಂಪತಿಗೆ ತಿಳಿದಿಲ್ಲ ಎಂದು ಅಧಿಕಾರಿಗಳ ಮುಂದೆ ಹೇಳಿಕೆ ನೀಡಲಾಗಿದೆ.

ಪ್ರಾಥಮಿಕ ತನಿಖೆಯಲ್ಲಿ ಆರೋಪಿತರು ಅಕ್ರಮ ಲಾಭ ಗಳಿಸುವ ಉದ್ದೇಶದಿಂದ ಒಳಸಂಚು ರೂಪಿಸಿ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಶಿಶು ಕಳ್ಳಸಾಗಣೆ ಹಾಗೂ ಮಾರಾಟದ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.

ಈ ಹಿನ್ನೆಲೆಯಲ್ಲಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 41/2026 ದಾಖಲಿಸಲಾಗಿದ್ದು, ಭಾರತೀಯ ನ್ಯಾಯ ಸಂಹಿತೆ (BNS) ಕಲಂ 143(4), 61, 318(2) ಹಾಗೂ 3(5) ಮತ್ತು ಜುವೆನೈಲ್ ಜಸ್ಟಿಸ್ ಕಾಯ್ದೆ (JJ Act) ಕಲಂ 81ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪ್ರಕರಣ ಸಂಬಂಧ ಉಡುಪಿಯ ಬನ್ನಂಜೆ ನಿವಾಸಿ, ಕಾಮತ್ ನರ್ಸಿಂಗ್ ಹೋಂನ ವೈದ್ಯ ಡಾ. ಕೆ. ಸುರೇಂದ್ರ ಕಾಮತ್ (76) ಹಾಗೂ ನೇಜಾರು ಸಂತೆಕಟ್ಟೆಯ ಎಸ್. ಪ್ರಕಾಶ್ (50) ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನಿಬ್ಬರು ಆರೋಪಿಗಳ ಬಂಧನಕ್ಕೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

Leave a Reply

Your email address will not be published. Required fields are marked *

error: Content is protected !!