ಉದ್ಯಮಿಗೆ 2.66 ಕೋಟಿ ವಂಚನೆ- ಬ್ಯಾಂಕ್ ಮ್ಯಾನೇಜರ್ ಬಂಧನ
ಉದ್ಯಮಿಯೊಬ್ಬರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪ ಸಂಬಂಧ ಬೆಂಗಳೂರಿನ ಬಾಗಲಗುಂಟೆ ಶಾಖೆಯ ಆಕ್ಸಿಸ್ ಬ್ಯಾಂಕ್‌ನ ಮ್ಯಾನೇಜರ್ ವಿನೋದ್ ಕುಮಾರ್, ಅರುಣ್ ಕುಮಾರ್ ಮತ್ತು ಕಿರಣ್ ಎಂಬಾತನನ್ನು ಬೆಂಗಳೂರಿನ ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ.
ಟ್ರಾನ್ಸ್‌ಪೋರ್ಟ್ ಹಾಗೂ ಮ್ಯಾನ್‌ಪವರ್ ಏಜೆನ್ಸಿ ನಡೆಸುತ್ತಿದ್ದ ಉದ್ಯಮಿ ಸುಬ್ರಮಣಿ ಅವರು, ತಿಂಗಳಿಗೆ ಹತ್ತು ಕೋಟಿಗೂ ಅಧಿಕ ಹಣದ ವಹಿವಾಟು ನಡೆಸುತ್ತಿದ್ದರು. ಈ ಹಣದ ಮೇಲೆ ಕಣ್ಣು ಹಾಕಿದ್ದ ಮ್ಯಾನೇಜರ್ ವಿನೋದ್, ಉದ್ಯಮಿಗೆ ವಂಚಿಸಲು ಪ್ಲಾನ್ ಮಾಡಿದ್ದು ಬೇರೆಯವರ ಹೆಸರಲ್ಲಿ ನಕಲಿ ಸಿಮ್ ಕಾರ್ಡ್ ಪಡೆದುಕೊಂಡಿದ್ದನು.ಕೂಲಿ ಕಾರ್ಮಿಕರ ಹೆಸರಿನಲ್ಲಿ ತಮ್ಮದೇ ಶಾಖೆಯಲ್ಲಿ ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದ ವಿನೋದ್ ನಂತರ ಉದ್ಯಮಿ ಸುಬ್ರಮಣಿಗೆ ವಾಟ್ಸಾಪ್ ಕರೆ ಮಾಡಿ, ತನಗೆ ದೊಡ್ಡ ಮಟ್ಟದ ಪ್ರಭಾವವಿದ್ದು, ಸುಮಾರು 30 ಕೋಟಿ ರೂ. ಮೌಲ್ಯದ ಕಾಂಟ್ರಾಕ್ಟ್ ಕೊಡಿಸುವುದಾಗಿ ನಂಬಿಸಿದ್ದನು. ಇದಕ್ಕೆ ಪ್ರತಿಯಾಗಿ ಶೇಕಡ 10ರಷ್ಟು ಕಮಿಷನ್ ಬರೋಬ್ಬರಿ 2 ಕೋಟಿ 66 ಲಕ್ಷ ರೂಪಾಯಿ ಹಣವನ್ನು ಆರ್ಟಿಜಿಎಸ್ ಮೂಲಕ ತಾನು ಸೃಷ್ಟಿಸಿದ್ದ ನಕಲಿ ಖಾತೆಗಳಿಗೆ ವರ್ಗಾಯಿಸಿಕೊಂಡ ವಿನೋದ್ ನಂತರ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದನು.
ಇದರಿಂದ ಅನುಮಾನಗೊಂಡ ಸುಬ್ರಮಣಿ ವಂಚನೆ ಕುರಿತಂತೆ ಬಾಗಲಗುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಬಾಗಲಗುಂಟೆ ಪೊಲೀಸರು ತಾಂತ್ರಿಕ ಸುಳಿವುಗಳ ಆಧಾರದ ಮೇಲೆ ಬ್ಯಾಂಕ್ ಮ್ಯಾನೇಜರ್ ವಿನೋದ್ ಮತ್ತು ಆತನ ಸಹಚರರನ್ನು ಬಂಧಿಸಿದ್ದಾರೆ.





