ಶ್ರೀಮಹಾಲಕ್ಷ್ಮಿ ಕೋ ಆ.ಕ್ರೆಡಿಟ್ ಅರ್ಬನ್ ಬ್ಯಾಂಕ್ ಲೈಸೆನ್ಸ್ ರದ್ದುಗೊಳಿಸಿದ ರಿಸರ್ವ್ ಬ್ಯಾಂಕ್!

ಬೆಳಗಾವಿ: ರಾಜ್ಯದ ಬೆಳಗಾವಿ ಜಿಲ್ಲೆಯ ಗೋಕಾಕ್’ನಲ್ಲಿರುವ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕಿನ, ಆರ್ಥಿಕ ಬಿಕ್ಕಟ್ಟಿನ ಹಿನ್ನಲೆಯಲ್ಲಿ, ಅದರ ಪರವಾನಿಗೆಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ, ಭಾರತೀಯ ರಿಸರ್ವ್ ಬ್ಯಾಂಕ್ ರದ್ದು ಮಾಡಿದೆ. ಜೂನ್ 18ರಿಂದ ಯಾವುದೇ ವಹಿವಾಟು ನಡೆಸದಂತೆ ನಿರ್ಬಂಧ ಹೇರಿದೆ.

ಗೋಕಾಕ್ ನಲ್ಲಿರುವ ಶ್ರೀ ಮಹಾಲಕ್ಷ್ಮಿ ಅರ್ಬನ್ ಕೋ ಆಪರೇಟಿವ್ ಕ್ರೆಡಿಟ್ ಬ್ಯಾಂಕ್ ಲೈಸೆನ್ಸ್ ಅನ್ನು ಆರ್‌ಬಿಐ ರದ್ದುಗೊಳಿಸಿದೆ. ಬ್ಯಾಂಕಿನ ಆರ್ಥಿಕ ಪರಿಸ್ಥಿತಿ ಹದೆಗೆಟ್ಟ ಹಿನ್ನಲೆಯಲ್ಲಿ, ರಿಸರ್ವ್ ಬ್ಯಾಂಕ್ ಈ ನಿರ್ಧಾರ ತೆಗೆದುಕೊಂಡಿದೆ. ಬ್ಯಾಂಕ್ ವಹಿವಾಟು ಮುಕ್ತಾಯಗೊಳಿಸಲು, ಲಿಕ್ವಿಡೇಟರ್ ನೇಮಿಸಲು ಆದೇಶ ಹೊರಡಿಸುವಂತೆ, ಕರ್ನಾಟಕ ಸಹಕಾರ ಸಂಘಗಳ ರಿಜಿಸ್ಟ್ರಾರ್ ರಿಸರ್ವ್ ಬ್ಯಾಂಕಿಗೆ ಮನವಿಯನ್ನು ಮಾಡಿದೆ.

ಭವಿಷ್ಯದಲ್ಲಿ ಲಾಭದತ್ತ ಹೊರಳುವ ಆಶಾಭಾವನೆ ಇಲ್ಲದಿರುವ ಹಿನ್ನಲೆಯಲ್ಲಿ ಲೈಸೆನ್ಸ್ ರದ್ದು

ಶ್ರೀ ಮಹಾಲಕ್ಷ್ಮಿ ಅರ್ಬನ್ ಕೋ ಆಪರೇಟಿವ್ ಕ್ರೆಡಿಟ್ ಬ್ಯಾಂಕಿನ ಹಣಕಾಸು ಪರಿಸ್ಥಿತಿ ತೀವ್ರವಾಗಿ ಹದೆಗೆಡುತ್ತಿರುವ ಹಿನ್ನಲೆಯಲ್ಲಿ ಬ್ಯಾಂಕಿಂಗ್ ಪರವಾನಿಗೆ ರದ್ದುಗೊಂಡಿದೆ. ಬ್ಯಾಂಕ್ ತನ್ನ ಗ್ರಾಹಕರಿಗೆ ಹಣ ಪಾವತಿಸಲು ಅಸಮರ್ಥವಾಗಿರುವುದು, ಬ್ಯಾಂಕಿನಲ್ಲಿ ಸಾಕಷ್ಟು ಬಂಡವಾಳ ಇಲ್ಲದೇ ಇರುವುದು, ಭವಿಷ್ಯದಲ್ಲಿ ಲಾಭದತ್ತ ಹೊರಳುವ ಯಾವ ಆಶಾಭಾವನೆಯೂ ಇಲ್ಲದ ಇರುವ ಹಿನ್ನಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್, ಲೈಸೆನ್ಸ್ ರದ್ದು ಮಾಡುವ ನಿರ್ಧಾರಕ್ಕೆ ಬಂದಿದೆ.

ಬ್ಯಾಂಕ್ ಹೀಗೇ ಮುಂದುವರಿದರೆ ಡೆಪಾಸಿಟ್ ಇಟ್ಟವರಿಗೆ ರಿಸ್ಕ್

ಶ್ರೀ ಮಹಾಲಕ್ಷ್ಮಿ ಅರ್ಬನ್ ಕೋ ಆಪರೇಟಿವ್ ಕ್ರೆಡಿಟ್ ಬ್ಯಾಂಕ್, ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ 1949ರ ಪ್ರಕಾರ, ರಿಸರ್ವ್ ಬ್ಯಾಂಕಿನ ನಿಬಂಧನೆಗಳನ್ನು ಅನುಸರಿಸಿರಲಿಲ್ಲ ಎಂದು ಹೇಳಲಾಗುತ್ತಿದೆ. ಬ್ಯಾಂಕಿನ ಸದ್ಯದ ಹಣಕಾಸು ಪರಿಸ್ಥಿತಿ, ಠೇವಣಿದಾರರಿಗೆ ಹಣವನ್ನು ಹಿಂದಿರುಗಿಸುವ ಸ್ಥಿತಿಯಲ್ಲಿಲ್ಲ. ಹಾಗಾಗಿ, ಬ್ಯಾಂಕ್ ವಹಿವಾಟನ್ನು ಹೀಗೇ ಮುಂದುವರಿಸಿದರೆ, ಠೇವಣಿದಾರರ ಹಿತಾಸಕ್ತಿಗೆ ಧಕ್ಕೆ ತರುತ್ತದೆ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ.

Leave a Reply

Your email address will not be published. Required fields are marked *

error: Content is protected !!