ಇಂಧನ ಬೆಲೆ ಸತತ ಏರಿಕೆ-ಜೂ.8ರಿಂದ ಖಾಸಗಿ ಬಸ್ ದರ ಏರಿಕೆ

ಉಡುಪಿ: ಇಂಧನಗಳ ಬೆಲೆ ನಿರಂತರ ಏರಿಕೆ, ವಾಹನಗಳ ಬಿಡಿ ಭಾಗ, ಕಾರ್ಮಿಕರ ವೇತನ, ವಿಮೆ ಹಾಗೂ ತೆರಿಗೆಗಳ ಏರಿಕೆ ಸೇರಿದಂತೆ ವಿವಿಧ ವೆಚ್ಚಗಳ ಸತತ ಏರಿಕೆಯ ಪರಿಣಾಮವಾಗಿ ಖಾಸಗಿ ಬಸ್‌ಗಳ ಟಿಕೆಟ್ ದರವನ್ನು ರಾಜ್ಯಾದ್ಯಂತ ಶೇ.5-8ರಷ್ಟು ಏರಿಕೆ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ಮಜಲು ವಾಹನ ಬಸ್ ಮಾಲಕರ ಸಂಘಗಳ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.

ಉಡುಪಿಯ ಡಯಾನ ಹೊಟೇಲ್‌ನಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರದ ಒಂದು ವರ್ಷದ ಹಿಂದೆ 3ರೂ. ಹಾಗೂ ಕೇಂದ್ರ ಸರಕಾರ ನಾಲ್ಕು ಬಾರಿ 8.17ರೂ. ಡಿಸೇಲ್ ದರವನ್ನು ಮತ್ತು ವಾಹನದ ಬಿಡಿಭಾಗಗಳ ದರ, ಟೈರ್-ಟೈರ್ ರಿಸೋಲಿಂಗ್ ದರ, ಟೋಲ್ ದರ, ನೌಕರರ ವೇತನ, ಸರಕಾರದ ಟ್ಯಾಕ್ಸ್, ಇನ್‌ಶ್ಯೂರೆಮನ್ಸ್ ದರ ಸೇರಿದಂತೆ ವಿವಿಧ ವೆಚ್ಚಗಳಲ್ಲಿ ತೀರಾ ಏರಿಕೆಯಾಗಿದೆ. ಈ ಪರಿಣಾಮ ಬಸ್ ಟಿಕೆಟ್ ದರವನ್ನು ಕರ್ನಾಟಕ ರಾಜ್ಯ ಖಾಸಗಿ ಬಸ್ ಮಾಲಕರ ಸಂಘಗಳ ಒಕ್ಕೂಟ ನಿರ್ಧರಿಸಿದೆ ಎಂದರು.

ರಾಜ್ಯ ಸರಕಾರದ ಅಧಿಸೂಚನೆ ಸಂಖ್ಯೆ ಟಿಡಿ 81 ಟಿಡಿಂ 2020ರ ಪ್ರಕಾರ ಪ್ರತಿ ಪ್ರಯಾಣಿಕರಿಗೆ 4ಪೈಸೆಯಂತೆ ಪ್ರತಿ ಕಿ.ಮೀ.ಗೆ ಕನಿಷ್ಠ 0.25ಪೈಸೆಯ ವರೆಗೆ ಸೆಸ್ ಹಾಕಲು ಅವಕಾಶ ಇದ್ದು, ಅದರ ಪ್ರಕಾರ ಹಾಲಿ ದರದ ಮೇಲೆ ಶೇ.5ರಿಂದ ಶೇ.8ರವರೆಗೆ ದರ ಪರಿಷ್ಕರಣೆ ಮಾಡಲಾಗಿದೆ. ಪರಿಷ್ಕೃತ ದರವು ಜೂ.8ರಿಂದ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಾರಿ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಅದೇ ರೀತಿ ಅವಿಭಜಿತ ದ.ಕ. ಜಿಲ್ಲೆಯ ಖಾಸಗಿ ಬಸ್‌ಗಳ ಪ್ರಯಾಣ ದರವು ಸರಾಸರಿ ಶೇ.5ರಷ್ಟು ಏರಿಕೆಯಾಗಿದ್ದು, ಅದರಂತೆ ಉಡುಪಿ- ಮಂಗಳೂರು 100ರೂ.(ಹಳೆದರ 95ರೂ.), ಉಡುಪಿ-ಕುಂದಾಪುರ 63ರೂ.(60ರೂ.), ಉಡುಪಿ -ಕಾರ್ಕಳ 60ರೂ.(58ರೂ.), ಕುಂದಾಪುರ- ಮಂಗಳೂರು 153ರೂ.(145ರೂ.) ಹಾಗೂ ಉಡುಪಿ -ಮಣಿಪಾಲ ಸಿಟಿಬಸ್ 15ರೂ. ದರವನ್ನು ನಿಗದಿ ಪಡಿಸಲಾಗಿದೆ. ಕನಿಷ್ಠ ದರವನ್ನು 12ರೂ.ನಿಂದ 13ರೂ.ಗೆ ಹೆಚ್ಚಿಸಲಾಗಿದೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬಸ್ ಮಾಲಕರ ಸಂಘದ ಮುಖಂಡರಾದ ರಾಜವರ್ಮ ಬಲ್ಲಾಳ್, ಸದಾನಂದ ಛಾತ್ರ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!