ಸತತ ನಾಲ್ಕನೇ ಬಾರಿ ಅವಕಾಶ ವಂಚಿತ ಪ್ರಮೋದ್ ಮಧ್ವರಾಜ್- ರಾಜ್ಯಸಭಾ ಟಿಕೆಟ್‌ಗೂ ನಿರಾಸೆ!

ಉಡುಪಿ, ಜೂನ್ 8: ಕಾಂಗ್ರೆಸ್ ತೊರೆದು 2022ರಲ್ಲಿ ಬಿಜೆಪಿ ಸೇರಿದ್ದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರಿಗೆ ಪಕ್ಷದಲ್ಲಿ ನಿರೀಕ್ಷಿತ ರಾಜಕೀಯ ಅವಕಾಶಗಳು ಇನ್ನೂ ದೊರೆಯದಿರುವುದು ಚರ್ಚೆಗೆ ಗ್ರಾಸವಾಗಿದೆ. 2023ರ ವಿಧಾನಸಭೆ ಚುನಾವಣೆ, 2024ರ ಲೋಕಸಭೆ ಚುನಾವಣೆ, ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆ ಬಳಿಕ ಇದೀಗ ರಾಜ್ಯಸಭಾ ಟಿಕೆಟ್‌ ಕೂಡ ಕೈತಪ್ಪಿರುವುದು ಅವರ ಬೆಂಬಲಿಗರಲ್ಲಿ ಅಸಮಾಧಾನ ಮೂಡಿಸಿದೆ.

ಉಡುಪಿ ಜಿಲ್ಲೆಯ ಪ್ರಭಾವಿ ನಾಯಕ ಹಾಗೂ ಮಾಜಿ ಸಚಿವರಾಗಿರುವ ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರ್ಪಡೆಯಾದ ಬಳಿಕ ಪಕ್ಷದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರೂ, ಯಾವುದೇ ಚುನಾವಣಾ ಟಿಕೆಟ್ ದೊರೆಯಲಿಲ್ಲ. ಈ ಬಾರಿ ರಾಜ್ಯಸಭಾ ಸದಸ್ಯತ್ವದ ಮೂಲಕ ಅವರಿಗೆ ಅವಕಾಶ ಸಿಗಬಹುದು ಎಂಬ ನಿರೀಕ್ಷೆ ಬಲವಾಗಿತ್ತು. ಆದರೆ ಬಿಜೆಪಿ ಹೈಕಮಾಂಡ್ ಪ್ರೊ. ಡಾ. ಎಂ. ನಾಗರಾಜ ಅವರ ಹೆಸರನ್ನು ಅಂತಿಮಗೊಳಿಸುವ ಮೂಲಕ ಪ್ರಮೋದ್ ಅವರ ಆಸೆಗೆ ಮತ್ತೆ ತಣ್ಣೀರು ಎರಚಿದೆ.

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿಯೂ ಪ್ರಮೋದ್ ಮಧ್ವರಾಜ್ ಅವರಿಗೆ ನಿರೀಕ್ಷಿತ ಪ್ರಾಮುಖ್ಯತೆ ಸಿಗಲಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಪ್ರಧಾನಿ ಭಾಗವಹಿಸಿದ್ದ ಮುಖ್ಯ ವೇದಿಕೆಯಲ್ಲಿ ಸ್ಥಾನ ದೊರೆಯದಿರುವುದು ಮಾತ್ರವಲ್ಲದೆ, ಕನಕನ ಕಿಂಡಿಗೆ ತನ್ನ ಸ್ವಂತ ಖರ್ಚಿನಲ್ಲಿ ಚಿನ್ನದ ಹೊದಿಕೆಯ ಸಮರ್ಪಣೆ ನೀಡಿದ್ದರು. ಈ ಸಂದರ್ಭದಲ್ಲಿಯೂ ಅವರಿಗೆ ಅವಕಾಶ ನಿರಾಕರಿಸಲಾಗಿದೆ ಎಂಬ ಅಸಮಾಧಾನ ಅವರ ಬೆಂಬಲಿಗರ ವಲಯದಲ್ಲಿ ವ್ಯಕ್ತವಾಗಿತ್ತು.

ಬಿಜೆಪಿ ಸೇರ್ಪಡೆಯಾದ ಬಳಿಕ ನಿರಂತರವಾಗಿ ಪಕ್ಷದ ಪರವಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಮೋದ್ ಮಧ್ವರಾಜ್ ಅವರಿಗೆ ಸತತವಾಗಿ ಅವಕಾಶ ವಂಚಿತವಾಗುತ್ತಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಕರಾವಳಿ ಭಾಗದ ಪ್ರಮುಖ ಮೊಗವೀರ ಸಮುದಾಯದ ನಾಯಕನಾಗಿರುವ ಅವರಿಗೆ ಮುಂದಿನ ದಿನಗಳಲ್ಲಿ ಪಕ್ಷ ಯಾವ ರೀತಿಯ ರಾಜಕೀಯ ಹೊಣೆಗಾರಿಕೆ ನೀಡಲಿದೆ ಎಂಬುದು ಈಗ ಚರ್ಚೆಯ ವಿಷಯವಾಗಿದೆ.

ರಾಜ್ಯಸಭಾ ಟಿಕೆಟ್ ಕೈತಪ್ಪಿರುವ ಹಿನ್ನೆಲೆಯಲ್ಲಿ ಪ್ರಮೋದ್ ಮಧ್ವರಾಜ್ ಅವರ ಮುಂದಿನ ರಾಜಕೀಯ ನಡೆ ಏನಿರಬಹುದು ಎಂಬ ಪ್ರಶ್ನೆಯೂ ರಾಜಕೀಯ ವಲಯದಲ್ಲಿ ಚರ್ಚೆಯ ವಿಷುವಾಗಿದೆ. ಮತ್ತೆ ಮಾತೃ ಪಕ್ಷಕ್ಕೆ ಮರಳುವ ಸಾಧ್ಯತೆ ಬಗ್ಗೆ ರಾಜ್ಯ ರಾಜಾಧಾನಿಯಿಂದ ಗುಸುಗುಸು ಸುದ್ದಿ ಕೂಡ ಹರಡುತ್ತಿದೆ. ಈ ಬಗ್ಗೆ ಅವರ ಪ್ರತಿಕ್ರಿಯೆಗೆ “ಉಡುಪಿ ಟೈಮ್ಸ್” ಪ್ರಯತ್ನಿಸಿದ್ದು ಅವರು ಯಾವುದೇ ಫೋನ್‌ ಕರೆಯನ್ನು ಸ್ವೀಕರಿಸದೆ ಸಂಪರ್ಕಕ್ಕೆ ಸಿಗಲಿಲ್ಲ.

Leave a Reply

Your email address will not be published. Required fields are marked *

error: Content is protected !!