ಉಡುಪಿ: ದತ್ತು ಪ್ರಕ್ರಿಯೆ ಮೂಲಕ ತಾಯಿ ಮಡಿಲು ಸೇರಿದ 72 ಮಕ್ಕಳು!

ಉಡುಪಿ, ಜೂ.7: ಪೋಷಕರ ಆರೈಕೆಯಿಂದ ವಂಚಿತರಾದ ಮಕ್ಕಳಿಗೆ ದತ್ತು ಸ್ವೀಕಾರ ಎಂಬುದು ಹೊಸ ಕುಟುಂಬ, ಪ್ರೀತಿ, ಭದ್ರತೆ ಮತ್ತು ಉತ್ತಮ ಭವಿಷ್ಯವನ್ನು ನೀಡುವ ಸಾಮಾಜಿಕ ವ್ಯವಸ್ಥೆಯಾಗಿದೆ. ಅದೇ ರೀತಿ ಮಕ್ಕಳಿಲ್ಲದ ದಂಪತಿ ಪಾಲಿಗೆ ಈ ಪ್ರಕ್ರಿಯೆ ಬದುಕಿನ ಆಶಾಕಿರಣವಾಗಿದೆ. ಈ ರೀತಿ ಉಡುಪಿ ಜಿಲ್ಲೆಯಲ್ಲಿ ಕಳೆದ 10 ವರ್ಷಗಳಲ್ಲಿ ಕಾನೂನುಬದ್ಧ ದತ್ತು ಸ್ವೀಕಾರದ ಮೂಲಕ ಒಟ್ಟು 72 ಅನಾಥ ಮಕ್ಕಳು ತಾಯಿಯ ಮಡಿಲು ಸೇರಿದ್ದಾರೆ.

ಉಡುಪಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಅಧೀನದಲ್ಲಿರುವ ಅನುದಾನಿತ ದತ್ತುಕೇಂದ್ರ ಸಂತೆಕಟ್ಟೆಯ ಶ್ರೀಕೃಷ್ಣಾನುಗ್ರಹ ಪಾಲನಾ ಕೇಂದ್ರದಿಂದ ವಿವಿಧ ಜಿಲ್ಲೆ, ರಾಜ್ಯ, ದೇಶಗಳ ಪೋಷಕರು 10 ವರ್ಷಗಳಲ್ಲಿ ಒಟ್ಟು 72 ಮಕ್ಕಳನ್ನು ದತ್ತು ಪಡೆದಿದ್ದು, ಇನ್ನೂ 373 ಮಂದಿ ಮಕ್ಕಳಿಗಾಗಿ ಅರ್ಜಿ ಸಲ್ಲಿಸಿದ್ದಾರೆ.

ಜಿಲ್ಲೆಯಲ್ಲಿ 3 ಸರಕಾರಿ ಸಹಿತ ಒಟ್ಟು 26 ಮಕ್ಕಳ ಪಾಲನಾ ಕೇಂದ್ರಗಳಿದ್ದು, ಅದರಲ್ಲಿ ಶ್ರೀಕೃಷ್ಣಾನುಗ್ರಹ ಸಂಸ್ಥೆ ಜಿಲ್ಲೆಯ ಏಕೈಕ ಅನುದಾನಿತ ದತ್ತು ಕೇಂದ್ರ. ಇಲ್ಲಿ 2015-16ರಿಂದ ಈವರೆಗೆ ಒಟ್ಟು 82 ಮಕ್ಕಳು ದಾಖಲಾಗಿದ್ದು, ಅದರಲ್ಲಿ ಭಾರತದಲ್ಲಿ 66 ಮಕ್ಕಳು ಮತ್ತು ವಿದೇಶಕ್ಕೆ 6 ಮಕ್ಕಳನ್ನು ದತ್ತು ಸ್ವೀಕರಿಸಲಾಗಿದೆ. ಈ ಮೂಲಕ ಒಟ್ಟು 72 ಮಕ್ಕಳು ಹೊಸ ಕುಟುಂಬ ವ್ಯವಸ್ಥೆಯನ್ನು ಸೇರಿಕೊಂಡಿದ್ದಾರೆ.

ವಿದೇಶಿ ದಂಪತಿಗಳಿಂದ ದತ್ತು: ದತ್ತು ಸ್ವೀಕರಿಸಿದ ಮಕ್ಕಳ ಪೈಕಿ ಕರ್ನಾಟಕ ರಾಜ್ಯದಲ್ಲಿ 47 ಮಕ್ಕಳು, ತಮಿಳುನಾಡು ರಾಜ್ಯಕ್ಕೆ 6 ಮಕ್ಕಳು, ತೆಲಂಗಾಣ ರಾಜ್ಯಕ್ಕೆ 3 ಮಕ್ಕಳು, ಮಹಾರಾಷ್ಟ್ರ ರಾಜ್ಯಕ್ಕೆ 4 ಮಕ್ಕಳು, ಕೇರಳ ರಾಜ್ಯಕ್ಕೆ 3 ಮಕ್ಕಳು, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ ಹಾಗೂ ಛತ್ತೀಸ್‌ಗಢ ರಾಜ್ಯಗಳಿಗೆ ತಲಾ ಒಬ್ಬರು ಮಕ್ಕಳು ದತ್ತು ಮೂಲಕ ಹೋಗಿದ್ದಾರೆ.

ದಕ್ಷಿಣ ಭಾರತದ ಇತರ ರಾಜ್ಯಗಳಾದ ತಮಿಳುನಾಡು ಮತ್ತು ತೆಲಂಗಾಣದ ದಂಪತಿ ಮಕ್ಕಳನ್ನು ದತ್ತು ಪಡೆಯು ವಲ್ಲಿ ಹೆಚ್ಚಿನ ಆಸಕ್ತಿ ತೋರಿಸಿರುವುದು ಈ ಅಂಕಿಅಂಶಗಳಿಂದ ಕಂಡುಬರುತ್ತದೆ. ಅದೇ ರೀತಿ 6 ಮಕ್ಕಳು ವಿದೇಶಿ ದಂಪತಿಯ ಕೈ ಸೇರಿದ್ದು, ಸಪ್ತಸಾಗರದಾಚೆಗೂ ಹೊಸ ಬದುಕು ಕಂಡುಕೊಂಡಿದ್ದಾರೆ.

2022-23ನೇ ಸಾಲಿನಲ್ಲಿ ಅತಿ ಹೆಚ್ಚು ಅಂದರೆ 14 ಮಕ್ಕಳನ್ನು ದತ್ತು ನೀಡಲಾಗಿದೆ. ಕೋವಿಡ್ ಸಾಂಕ್ರಾಮಿಕ ಕಾರಣಕ್ಕಾಗಿ 2020-21ರಲ್ಲಿ ದತ್ತು ಪ್ರಕ್ರಿಯೆ ಸಂಪೂರ್ಣ ಸ್ಥಗಿತಗೊಂಡಿತ್ತು. 2025-26ರಲ್ಲಿ 7 ಮತ್ತು ಪ್ರಸಕ್ತ ವರ್ಷದ ಮೊದಲ ತಿಂಗಳಲ್ಲಿ 3 ಮಕ್ಕಳು ಹೊಸ ಕುಟುಂಬಗಳನ್ನು ಸೇರಿಕೊಂಡಿದ್ದಾರೆ. ಕೇಂದ್ರದಲ್ಲಿ ಪ್ರತಿ ವರ್ಷ ಸರಾಸರಿ 7 ರಿಂದ 10 ಮಕ್ಕಳು ಆಸರೆ ಪಡೆಯುತ್ತಿದ್ದಾರೆ. 2020-21ರಲ್ಲಿ ಅತಿ ಹೆಚ್ಚು ಅಂದರೆ 21 ಮಕ್ಕಳು ದಾಖಲಾಗಿದ್ದರು. ಪ್ರಸ್ತುತ 7 ಮಂದಿ ವಿಶೇಷ ಮಕ್ಕಳ ಸಹಿತ 10 ಮಂದಿ ವಾಸಿಸುತ್ತಿದ್ದಾರೆ ಎಂದು ಕೇಂದ್ರ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ.

ದತ್ತು ಸ್ವೀಕಾರ 3-4 ವರ್ಷಗಳ ಪ್ರಕ್ರಿಯೆ!

ದತ್ತು ಪಡೆಯಲು ಇಚ್ಛಿಸುವ ಪೋಷಕರು ಮೊದಲು (https://cara.wcd.gov.in) ಪೋರ್ಟಲ್‌ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ನೋಂದಣಿಯಾದ ನಂತರ, ಅಧಿಕತ ದತ್ತು ಸಂಸ್ಥೆಯು ಪೋಷಕರ ಮನೆಗೆ ಭೇಟಿ ನೀಡಿ ಅವರ ಆರ್ಥಿಕ ಮತ್ತು ಸಾವಾಜಿಕ ಸ್ಥಿತಿಗತಿಯ ಬಗ್ಗೆ ವರದಿ ಸಿದ್ಧಪಡಿಸುತ್ತದೆ.

ಲಭ್ಯವಿರುವ ಮಕ್ಕಳ ಪಟ್ಟಿಯನ್ನು ಪೋಷಕರಿಗೆ ತೋರಿಸಲಾಗುತ್ತದೆ. ಪೋಷಕರು ಮಗುವನ್ನು ಆಯ್ಕೆ ವಾಡಿದ ನಂತರ, ಮಗು ಮತ್ತು ಪೋಷಕರ ನಡುವೆ ಹೊಂದಾಣಿಕೆ ಇದೆಯೇ ಎಂದು ನೋಡಲಾಗುತ್ತದೆ. ದತ್ತು ಪೂರ್ವ ಪಾಲನೆಗಾಗಿ ಮಗುವನ್ನು ತಾತ್ಕಾಲಿಕವಾಗಿ ಪೋಷಕರ ವಶಕ್ಕೆ ನೀಡಲಾಗುತ್ತದೆ.

ನಂತರ ಸಂಬಂಧಪಟ್ಟ ಪ್ರಾಧಿಕಾರವು ದತ್ತು ಪ್ರಕ್ರಿಯೆಯನ್ನು ಅಧಿಕೃತಗೊಳಿಸಿ ಆದೇಶ ನೀಡುತ್ತದೆ. ದತ್ತು ಪ್ರಕ್ರಿಯೆ ಮುಗಿದ ನಂತರವೂ ಕನಿಷ್ಠ 2 ವರ್ಷಗಳ ಕಾಲ ಸಂಸ್ಥೆಯು ಮಗುವಿನ ಯೋಗಕ್ಷೇಮವನ್ನು ಅಧಿಕಾರಿಗಳು ಪೋಷಕರ ಮನೆಗೆ ಭೇಟಿ ನೀಡುತ್ತಾರೆ. ದತ್ತು ಸ್ವೀಕಾರ 3 ರಿಂದ 4 ವರ್ಷಗಳ ಸುದೀರ್ಘ ಪ್ರಕ್ರಿಯೆಯಾಗಿದೆ ಎಂದು ಮಕ್ಕಳ ರಕ್ಷಣಾಧಿಕಾರಿ ನಾಗರತ್ನ ನಾಯಕ್ ಮಾಹಿತಿ ನೀಡಿದ್ದಾರೆ.

ಪೋಷಕರಿಗೆ ಮಕ್ಕಳನ್ನು ಬೇಡವಾದರೆ ಶಿಶುಗಳನ್ನು ಎಲ್ಲೆಂದರಲ್ಲಿ ಎಸೆದು ಹೋಗುವುದು ಕಾನೂನು ಪ್ರಕಾರ ಅಪರಾಧ. ಆದುದರಿಂದ ಪೋಷಕರು ತಮಗೆ ಬೇಡವಾದ ಮಕ್ಕಳನ್ನು ಮಕ್ಕಳ ರಕ್ಷಣಾ ಘಟಕಕ್ಕೆ ಒಪ್ಪಿಸಬಹುದು. 1098ಕ್ಕೆ ಕರೆ ಮಾಡಿದರೆ ಮಗು ಇರುವಲ್ಲಿಗೆ ಅಧಿಕಾರಿಗಳು ಬಂದು ಮಗುವನ್ನು ಸ್ವೀಕರಿಸಲು ಕೂಡ ಅವಕಾಶ ಇದೆ. ಈ ವಿಷಯದಲ್ಲಿ ಗೌಪ್ಯತೆಯನ್ನು ಕಾಪಾಡಲಾಗುತ್ತದೆ’-ನಾಗರತ್ನ ನಾಯಕ್, ಮಕ್ಕಳ ರಕ್ಷಣಾಧಿಕಾರಿ, ಉಡುಪಿ ಜಿಲ್ಲೆ.

Leave a Reply

Your email address will not be published. Required fields are marked *

error: Content is protected !!