ಕಡೆಕಾರ್ ಗ್ರಾಮ ಪಂಚಾಯತ್ : ರಸ್ತೆಬದಿ ಕಸ ಎಸೆಯುವುವರ ವಿರುದ್ಧ ಕ್ರಮ- ಹತ್ತು ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ
ಉಡುಪಿ: ಕಡೆಕಾರ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಸ್ತೆ ಬದಿ ಕಸ ಎಸೆಯುವುದರ ವಿರುದ್ಧ ವಿಶೇಷ ಕಾರ್ಯಪಡೆ ರಚಿಸಲಾಗಿದ್ದು ಈಗಾಗಲೇ ನಿಯಮ ಉಲ್ಲಂಘಿಸಿದವರ ವಿರುದ್ಧ ಸ್ಥಳದಲ್ಲೇ ದಂಡ ವಸೂಲಿ ಮಾಡಲಾಗಿದೆ ಹಾಗೂ ದಂಡ ಕಟ್ಟಲು ಒಪ್ಪದವರ ವಿರುದ್ಧ ಪೊಲೀಸ್ ಕ್ರಮ ಕೈಗೊಳ್ಳಲು ಶಿಫಾರಸು ಮಾಡಲಾಗಿದೆ.
ಈಗಾಗಲೇ ಪ್ರಮುಖ ಹತ್ತು ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದ್ದು ಕಟ್ಟು ನಿಟ್ಟಿನ ನಿಗಾ ವಹಿಸಲಾಗಿದೆ.
ಕಡೆಕಾರ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಕಡೆಕಾರ್ ,ಕನ್ನರಪಾಡಿ ,ಕುತ್ಪಾಡಿ ಮುಂತಾದ ಗ್ರಾಮಗಳಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆಯುವುದರ ವಿರುದ್ಧ ಆಂದೋಲನ ಮಾದರಿಯಲ್ಲಿ ಕ್ರಮ ಕೈಗೊಳ್ಳಲಾಗಿದ್ದು ಸಾರ್ವಜನಿಕ ವಲಯದಲ್ಲಿ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ.
ಮುಂದಿನ ದಿನಗಳಲ್ಲಿ ಸಾರ್ವಜನಿಕರು ಗ್ರಾಮದ ಮತ್ತು ಪರಿಸರದ ಸ್ವಚ್ಛತೆ ಕಾಪಾಡುವಲ್ಲಿ ಗ್ರಾಮ ಪಂಚಾಯತ್ ಜೊತೆ ಸಹಕರಿಸಬೇಕೆಂದು ಕಡೆಕಾರ್ ಗ್ರಾಮ ಪಂಚಾಯತ್ ನ ಅಭಿವೃದ್ಧಿ ಅಧಿಕಾರಿ ಮತ್ತು ಆಡಳಿತ ಅಧಿಕಾರಿ ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿದ್ದಾರೆ.





