ಮಳೆಗಾಲ ಪೂರ್ವ ಸಿದ್ಧತೆಯಲ್ಲಿ ಉಡುಪಿ ನಗರಸಭೆ ಸಂಪೂರ್ಣ ವಿಫಲ: ಬಿಜೆಪಿ ಆರೋಪ

ವಾರದೊಳಗೆ ಸಮಸ್ಯೆ ಬಗೆಹರಿಯದಿದ್ದರೆ ನಗರಸಭೆಗೆ ಮುತ್ತಿಗೆ- ದಿನೇಶ್ ಅಮೀನ್ ಎಚ್ಚರಿಕೆ

ಉಡುಪಿ: ಮಳೆಗಾಲದ ಪೂರ್ವ ತಯಾರಿ ಕಾಮಗಾರಿಗಳನ್ನು ಸಮರ್ಪಕವಾಗಿ ಕೈಗೊಳ್ಳುವಲ್ಲಿ ಉಡುಪಿ ನಗರಸಭೆ ಸಂಪೂರ್ಣ ವಿಫಲವಾಗಿದೆ ಎಂದು ಉಡುಪಿ ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್ ಆರೋಪಿಸಿದರು.

ಉಡುಪಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿನ ರಾಜಕಾಲುವೆ, ಸಣ್ಣ ಕಾಲುವೆ ಹಾಗೂ ಮಳೆ ನೀರು ಹರಿಯುವ ಚರಂಡಿಗಳ ಹೂಳೆತ್ತುವ ಕಾಮಗಾರಿಗಳು ಇನ್ನೂ ಆರಂಭವಾಗಿಲ್ಲ. ಮಳೆ ಆರಂಭವಾದರೆ ನಗರದಲ್ಲಿ ನೀರು ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗುವ ಭೀತಿ ಇದೆ ಎಂದು ಹೇಳಿದರು.
ಬನ್ನಂಜೆ ಪ್ರದೇಶದಲ್ಲಿಯೂ ಚರಂಡಿ ಸ್ವಚ್ಛತಾ ಕಾರ್ಯ ಪ್ರಾರಂಭವಾಗಿಲ್ಲ. ವಾರದೊಳಗೆ ಹೂಳೆತ್ತುವ ಕಾಮಗಾರಿ ಪೂರ್ಣಗೊಳಿಸದಿದ್ದರೆ ನಗರಸಭೆಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.

ನಗರಸಭೆ ಮಾಜಿ ಅಧ್ಯಕ್ಷ ಪ್ರಭಾಕರ್ ಪೂಜಾರಿ ಮಾತನಾಡಿ, ನಗರಸಭೆ ಕೌನ್ಸಿಲ್‌ ಅವಧಿ ಕಳೆದ ಅಕ್ಟೋಬರ್‌ನಲ್ಲೇ ಮುಕ್ತಾಯ ಗೊಂಡಿದೆ. ಬಳಿಕ ಶಾಸಕರ ನೇತೃತ್ವದಲ್ಲಿ ಮಳೆಗಾಲದ ಪೂರ್ವ ಸಿದ್ಧತೆ ಕುರಿತು ಸಭೆ ನಡೆಸಿ, ಚರಂಡಿ ಹೂಳೆತ್ತುವ ಕಾಮಗಾರಿಯ ನ್ನು ಕೈಗೊಳ್ಳುವಂತೆ ಅಧಿಕಾರಿಗಳ ಗಮನಕ್ಕೆ ಹಲವು ಬಾರಿ ತರಲಾಗಿದೆ. ಕಾರ್ಮಿಕರನ್ನು ನೇಮಿಸಲು ಟೆಂಡರ್‌ ಕರೆಯಲಾಗಿದ್ದರೂ, ಕೆಲಸ ಆರಂಭಿಸಲು ಆದೇಶ ಮಾತ್ರ ಇನ್ನೂ ನೀಡಿಲ್ಲ ಎಂದು ದೂರಿದರು.

ನಗರದ ಬಹುತೇಕ ಚರಂಡಿಗಳು ಮುಚ್ಚಿಹೋಗಿದ್ದು, ಮಳೆ ನೀರು ರಸ್ತೆಗಳಲ್ಲಿ ಹರಿದು ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ. ನಗರಸಭೆಯಲ್ಲಿ ಸಿಬ್ಬಂದಿ ಸಮಯಕ್ಕೆ ಲಭ್ಯವಿರುವುದಿಲ್ಲ. ಕಚೇರಿ ಬಹುತೇಕ ಖಾಲಿಯಾಗಿರುತ್ತದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕಿರಣ್ ಕುಮಾರ್ ಬೈಲೂರು ಮಾತನಾಡಿ, ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ನಗರಸಭೆಯಲ್ಲಿ ಅವ್ಯವಸ್ಥೆ ನಿರ್ಮಾಣವಾಗಿದೆ. ಕಸ ವಿಲೇವಾರಿಯಲ್ಲೂ ಸಂಪೂರ್ಣ ಅಸಡ್ಡೆ ವಹಿಸಲಾಗುತ್ತಿದೆ. ವಾರದೊಳಗೆ ಸಮಸ್ಯೆ ಪರಿಹಾರವಾಗದಿದ್ದರೆ ನಗರಸಭೆ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಜಗದೀಶ್ ಆಚಾರ್ ಹಾಗೂ ರಶ್ಮಿಕಾ ಶೆಟ್ಟಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!