ಕೆಡಿಬಿ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಲಕ್ಷ್ಮೀ ಹೆಬ್ಬಾಳ್ಕರ್ ಗರಂ- ಮುಂದೆಯೂ ಇದೇ ರೀತಿಯಾದ್ರೆ ಸಸ್ಪೆಂಡ್ ಮಾಡ್ತೀನಿ..!
ಉಡುಪಿ, ಮೇ 16: ಶಿಷ್ಟಾಚಾರ ಪ್ರಕಾರ ಅಧಿಕಾರಿಗಳು ಶಾಸಕರಿಗೆ ಗೌರವ ಕೊಡುವುದನ್ನು ಕೊಡಬೇಕು. ಪ್ರತಿ ಬಾರಿ ಕರ್ತವ್ಯ ಉಲ್ಲಂಘನೆ, ಅಸಡ್ಡೆ ತೋರುವುದನ್ನು ಸಹಿಸಲ್ಲ. ಇದು ಎಲ್ಲ ಅಧಿಕಾರಿಗಳಿಗೂ ಕಡೆಯ ವಾರ್ನಿಂಗ್, ಮುಂದಿನ ಬಾರಿ ಇಂತಹ ನಿರ್ಲಕ್ಷ್ಯ ಮರುಕಳಿಸಿದರೆ ಸಸ್ಪೆಂಡ್ ಮಾಡ್ತೀನಿ ಎಂದು ಉಡುಪಿ ಜಿಲ್ಲೆಯ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಾರ್ನಿಂಗ್ ಮಾಡಿದ್ದಾರೆ,
ಜಿಪಂ ಸಭಾಂಗಣದಲ್ಲಿ ಸಭೆ ಆರಂಭದಲ್ಲೇ ಬಿಜೆಪಿ ಶಾಸಕ ಸುನಿಲ್ ಕುಮಾರ್ ಫೋಟೋ ಒಂದನ್ನು ತೋರಿಸಿ ಪಕ್ಷದ ಕಚೇರಿಯಲ್ಲಿ ಹಕ್ಕುಪತ್ರ ನೀಡಿದ್ದಾರೆ, ಕ್ಷೇತ್ರದ ಶಾಸಕರಿಗೆ ತಿಳಿಸದೆ ಯಾವುದೋ ಪಕ್ಷದ ಕಚೇರಿಯಲ್ಲಿ ಹಕ್ಕುಪತ್ರ ನೀಡಿದ್ದು ಹೇಗೆ, ಇದಕ್ಕೆ ಅಧಿಕಾರಿಗಳು ಹೇಗೆ ಅವಕಾಶ ಕೊಟ್ಟಿದ್ದಾರೆ, ಇದು ಶಿಷ್ಟಾಚಾರ ಉಲ್ಲಂಘನೆಯೆಂದು ಆಕ್ಷೇಪಿಸಿದರು. ಅಲ್ಲದೆ, ಕನ್ನಡ ಸಂಸ್ಕೃತಿ ಇಲಾಖೆಯಿಂದ ಪ್ರಕಟಿತ ಪುಸ್ತಕ ಒಂದರಲ್ಲಿ ಶಿಷ್ಟಾಚಾರಕ್ಕೂ ಶಾಸಕರ ಹೆಸರನ್ನೂ, ಜಿಲ್ಲಾ ಉಸ್ತುವಾರಿ ಸಚಿವರ, ಸಂಸದರ ಹೆಸರನ್ನೂ ಹಾಕಿಲ್ಲ. ಇಂತಹ ಪ್ರಮಾದ ಪ್ರತಿ ಬಾರಿ ನಡೆಯುತ್ತದೆ. ಇವರ ಮೇಲೆ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಕಾರ್ಕಳ ತಹಸೀಲ್ದಾರ್ ಪ್ರದೀಪ್ ಅವರನ್ನು ತರಾಟೆಗೆ ತೆಗೆದುಕೊಂಡ ಸಚಿವರು, ನೀವು ಹಕ್ಕುಪತ್ರ ಕೊಟ್ಟಿದ್ದೋ, ಅವರೇ ಪಕ್ಷದ ಕಚೇರಿಯಲ್ಲಿ ಫೋಟೋ ತೆಗೆಸಿಕೊಂಡಿದ್ದೋ ಹೇಳಿ ಎಂದು ಕೇಳಿದರು. ಅರ್ಜೆಂಟ್ ಬೇಕೆಂದು ಕೇಳಿದ್ದಕ್ಕೆ ನಾನೇ ಹಕ್ಕುಪತ್ರ ಕೊಟ್ಟಿದ್ದೆ ಎಂದಾಗ, ಸೌಜನ್ಯಕ್ಕಾದ್ರೂ ಕ್ಷೇತ್ರದ ಶಾಸಕರಿಗೆ ಹೇಳಬಹುದಿತ್ತಲ್ಲವೇ ಎಂದು ಬಿಜೆಪಿ ಶಾಸಕರು ಪ್ರಶ್ನಿಸಿದರು, ಕನ್ನಡ ಸಂಸ್ಕೃತಿ ಇಲಾಖೆಯ ಪ್ರತಿನಿಧಿಗಳು ತಮ್ಮಿಂದಾದ ತಪ್ಪನ್ನು ಒಪ್ಪಿಕೊಂಡರು. ಈ ವೇಳೆ, ಸಚಿವೆ ಹೆಬ್ಬಾಳ್ಕರ್ ಅವರು ತರಾಟೆಗೆತ್ತಿಕೊಂಡು ಇಬ್ಬರಿಗೂ ನೋಟೀಸ್ ಜಾರಿ ಮಾಡಲು ಜಿಲ್ಲಾಧಿಕಾರಿಗೆ ಸೂಚಿಸಿದರು. ಏನ್ರೀ ಮಾಡ್ತೀರಾ.. ಸಣ್ಣ ವಿಷಯ ಇಟ್ಕೊಂಡು ನಾವಿಲ್ಲಿ ಅನುಭವಿಸಬೇಕಾ.. ಇದು ಲಾಸ್ಟ್ ವಾರ್ನಿಂಗ್,ಮುಂದೆ ಸಸ್ಪೆಂಡ್ ಮಾಡ್ತೀನಿ ಎಂದು ಗರಂ ಆದರು.
ಉಡುಪಿ ಬಡಗಬೆಟ್ಟುವಿನಲ್ಲಿ ಕಂಬಳ ನಡೆಸಲು ಅವಕಾಶ ಕೊಟ್ಟು ಕೊನೆಯ ಕ್ಷಣದಲ್ಲಿ ಜಿಲ್ಲಾಡಳಿತ ನಿರಾಕರಿಸಿದ್ದಕ್ಕೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಆಕ್ಷೇಪಿಸಿದರು. ಸಚಿವರು ಪ್ರತಿಕ್ರಿಯಿಸಿ, ಕಂಬಳ ನಮ್ಮ ಸಂಸ್ಕೃತಿ, ಆಚರಣೆ. ಜಿಲ್ಲಾಡಳಿತದಿಂದ ಕಂಬಳ ಮಾಡುವುದಕ್ಕೆ ನಮ್ಮ ಅಡ್ಡಿ ಇಲ್ಲ. ಅಂದು ಪರ- ವಿರೋಧ ವ್ಯಕ್ತವಾಗಿದ್ದರಿಂದ ಸಮಸ್ಯೆ ಆಗಿ ನಿಲ್ಲಿಸಲಾಗಿತ್ತು. ಮುಂದಿನ ವರ್ಷ ಕಂಬಳ ಜಿಲ್ಲಾಡಳಿತದಿಂದಲೇ ಮಾಡೋಣ ಎಂದರು.
ಕಾರ್ಕಳ ಆರೋಗ್ಯ ಕೇಂದ್ರದಲ್ಲಿ ವೈದ್ಯರೇ ಇಲ್ಲ, ಗೈನಕಾಲಜಿಸ್ಟ್ ಇಲ್ಲ. ಸುಸಜ್ಜಿತ ಕಟ್ಟಡ ಇದ್ದರೂ ಏನು ಪ್ರಯೋಜನ ಎಂದು ಶಾಸಕ ಸುನಿಲ್ ಕುಮಾರ್ ಪ್ರಶ್ನಿಸಿದರು, ವೈದ್ಯರು ಬರ್ತಾ ಇಲ್ಲವೆಂದು ಡಿಎಚ್ಓ ಬಸವರಾಜ್ ಅಸಹಾಯಕತೆ ವ್ಯಕ್ತಪಡಿಸಿದಾಗ, ಪರ್ಯಾಯ ವ್ಯವಸ್ಥೆ ಏನಾದ್ರೂ ಮಾಡಿ, ವೈದ್ಯರನ್ನು ಕೊಡಬೇಕಲ್ವಾ.. ಬಡಜನರು ಏನು ಮಾಡಬೇಕು ಎಂದು ಶಾಸಕರು ಹೇಳಿದರು. ವೈದ್ಯರು ಬರ್ತಾ ಇಲ್ಲ ಅಂದ್ರೆ ಪರ್ಯಾಯ ವ್ಯವಸ್ಥೆ ಮಾಡಿ ಎಂದು ಸಚಿವರು ಡಿಎಚ್ ಓಗೆ ಸೂಚಿಸಿದರು. ಈ ವೇಳೆ, ಶ್ರೀನಿವಾಸ ಮೆಡಿಕಲ್ ಕಾಲೇಜಿನವರು ಪ್ರಸ್ತಾಪ ಇಟ್ಟಿದ್ದಾರೆ ಎಂದು ಡಿಎಚ್ಓ ಹೇಳಿದಾಗ, ಜನರಿಗೆ ಸಮಸ್ಯೆ ಆಗದಂತೆ ಒಪ್ಪಂದ ಮಾಡಿಕೊಳ್ಳಿ ಎಂದು ಸಚಿವರು ಒಪ್ಪಿಗೆ ಸೂಚಿಸಿದರು.
ಇದೇ ವೇಳೆ, ಶಾಸಕ ಗುರುರಾಜ ಗಂಟಿಹೊಳೆ ಜಿಲ್ಲೆಯಲ್ಲಿ 108 ಆಂಬುಲೆನ್ಸ್ ಸರಿಯಾಗಿಲ್ಲ, ಚಾಲಕರೂ ಇಲ್ಲ. ಜೀವ ಉಳಿಸುವ ಆಂಬುಲೆನ್ಸ್ ಅಗತ್ಯಕ್ಕೆ ಸಿಗುತ್ತಿಲ್ಲ ಎಂದು ಆಕ್ಷೇಪಿಸಿದರು. ಇದಕ್ಕೆ ಡಿಎಚ್ಓ ಪ್ರತಿಕ್ರಿಯಿಸಿ 108 ಸಮಸ್ಯೆ ಇಡೀ ರಾಜ್ಯದಲ್ಲಿದೆ ಎಂದಾಗ ಸಚಿವರು ಗರಂ ಆಗಿ ಏನ್ರೀ ಮಾತಾಡ್ತಿದೀರಾ, ಇಲಾಖೆಯ ಮರ್ಯಾದೆ ತೆಗೀತೀರಾ ಎಂದು ಪ್ರಶ್ನಿಸಿದರು. ಚಾಲಕರು ಇಲ್ಲ ಅಂದ್ರೆ ಅದಕ್ಕೆ ವ್ಯವಸ್ಥೆ ಮಾಡಿ ಎಂದು ಸೂಚಿಸಿದರು.
ಪ್ರತಿ ಪ್ರಶ್ನೆಗೂ ಡಿಎಚ್ ಓ ಸರಿಯಾದ ಉತ್ತರ ನೀಡದೇ ಇದ್ದುದಕ್ಕೆ ಗರಂ ಆದ ಎಂಎಲ್ಸಿ ಭೋಜೇಗೌಡ, ಇವರಿಂದ ಇಲಾಖೆ ನಡೆಸೋಕೆ ಆಗುತ್ತಿಲ್ಲ. ಬೇರೆ ಕ್ಲರಿಕಲ್ ಕೆಲಸಕ್ಕೆ ಹಾಕಿ, ಇಂಥ ಜಿಲ್ಲೆಯಲ್ಲಿ ಇರೋದಕ್ಕೆ ನಾಲಾಯಕ್ ಎಂದು ಹರಿಹಾಯ್ದರು. ಜನಗಣತಿ ಮಾಡ್ತಿರುವ ಶಿಕ್ಷಕರಿಗೆ ಸಂಭಾವನೆ ಕೊಟ್ಟಿದ್ದೀರಾ, ಯಾಕೆ ವಿಳಂಬ ಮಾಡುತ್ತಿದ್ದೀರಿ, ಅವರು ಜನಗಣತಿ ಕೆಲಸದ ನಡುವೆಯೂ ಪಾಠ ಪ್ರವಚನ ಮಾಡಿದ್ದರಿಂದ ಜಿಲ್ಲೆಯಲ್ಲಿ ಉತ್ತಮ ಫಲಿತಾಂಶ ಬಂದಿದೆ, ನೀವು ಒಂದು ವಾರದಲ್ಲಿ ಸಂಭಾವನೆ ಕೊಡಿಸುವ ಕೆಲಸ ಮಾಡಬೇಕು ಎಂದು ಜಿಲ್ಲಾಡಳಿತವನ್ನು ಭೋಜೇಗೌಡ ಆಗ್ರಹಿಸಿದರು.
ಸಭೆಯಲ್ಲಿ ಶಾಸಕರಾದ ಸುನಿಲ್ ಕುಮಾರ್, ಯಶಪಾಲ್ ಸುವರ್ಣ, ಗುರುರಾಜ ಗಂಟಿಹೊಳೆ, ಕಿರಣ್ ಕೊಡ್ಗಿ, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಭೋಜೇಗೌಡ, ಕಿಶೋರ್ ಕುಮಾರ್, ಜಿಲ್ಲಾಧಿಕಾರಿ ಸ್ವರೂಪ ಟಿಕೆ, ಎಸ್ಪಿ ಹರಿರಾಮ್ ಶಂಕರ್, ಜಿಪಂ ಸಿಇಓ ಪ್ರತೀಕ್ ಬಾಯಾಲ್ ಇದ್ದರು





