ಪ್ರಧಾನಿ ಗಂಟೆ ಬಾರಿಸಿ,ಚಪ್ಪಾಳೆ ತಟ್ಟಿ ಎಂದಾಗ ಚಪ್ಪಾಳೆ ತಟ್ಟಿದರು- ಈ ಪರಿಸ್ಥಿತಿ ಯಾಕೆ ನಿರ್ಮಾಣವಾಗಿದೆಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಬೇಕು: ಹೆಬ್ಬಾಳ್‌ಕರ್
ಉಡುಪಿ, ಮೇ 16: ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ದೇಶದ ಜನರಿಗೆ ನೀಡುತ್ತಿರುವ ಸಲಹೆಗಳು ಮತ್ತು ಕರೆಗಳ ಬಗ್ಗೆ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಉಡುಪಿಯಲ್ಲಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಪ್ರಧಾನಿ ಮೋದಿ ಗಂಟೆ ಬಾರಿಸಿ ಎಂದಾಗ ದೇಶದ ಜನರು ಗಂಟೆ ಬಾರಿಸಿದರು. ಚಪ್ಪಾಳೆ ತಟ್ಟಿರಿ ಎಂದಾಗ ಚಪ್ಪಾಳೆ ತಟ್ಟಿದರು. ಈಗ ಪೆಟ್ರೋಲ್ ಕಡಿಮೆ ಬಳಸಿ, ಚಿನ್ನ ಖರೀದಿಸಬೇಡಿ ಎಂದು ಹೇಳುತ್ತಿದ್ದಾರೆ. ದೇಶದ ಹಿತದೃಷ್ಟಿಯಿಂದ ಜನರು ಸಹಕರಿಸಲು ಸಿದ್ಧರಿದ್ದಾರೆ. ಆದರೆ ಇಂತಹ ಪರಿಸ್ಥಿತಿ ಯಾಕೆ ನಿರ್ಮಾಣವಾಗಿದೆ ಎಂಬುದನ್ನೂ ಕೇಂದ್ರ ಸರ್ಕಾರ ಜನರಿಗೆ ಸ್ಪಷ್ಟಪಡಿಸಬೇಕು” ಎಂದು ಹೇಳಿದರು.
ಕೇಂದ್ರ ಸರ್ಕಾರ ಜನರಿಗೆ ನಿರಂತರವಾಗಿ ಸಲಹೆ ನೀಡುವ ಬದಲು ಬೆಲೆ ಏರಿಕೆ, ಆರ್ಥಿಕ ಒತ್ತಡ ಮತ್ತು ಇಂಧನ ದರ ಹೆಚ್ಚಳದ ಕುರಿತು ಸ್ಪಷ್ಟ ಉತ್ತರ ನೀಡಬೇಕು ಎಂದು ಅವರು ಆಗ್ರಹಿಸಿದರು. ಚುನಾವಣೆ ಮುಗಿದ ತಕ್ಷಣ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಯಾಗಿದೆ ಎಂದು ಆರೋಪಿಸಿದ ಅವರು, ಇದರ ನೇರ ಪರಿಣಾಮ ಸಾಮಾನ್ಯ ಜನರ ಜೀವನದ ಮೇಲೆ ಬೀಳುತ್ತಿದೆ ಎಂದು ಟೀಕಿಸಿದರು.
ಈ ವೇಳೆ ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳ ವಿರುದ್ಧ ವಾಗ್ದಾಳಿ ನಡೆಸಿದ ಸಚಿವೆ, “ಜನರು ದೇಶಕ್ಕಾಗಿ ಸಹನೆ ತೋರುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರವೂ ಜನರ ಸಂಕಷ್ಟವನ್ನು ಅರ್ಥಮಾಡಿಕೊಳ್ಳಬೇಕು” ಎಂದು ಹೇಳಿದರು.





