ಮದ್ಯ ಪ್ರಿಯರಿಗೆ ಗುಡ್ ನ್ಯೂಸ್: ಬೀರ್, ವಿಸ್ಕಿ ದರ ಇಳಿಕೆ ಮಾಡಿದ ರಾಜ್ಯ ಸರ್ಕಾರ

ಬೆಂಗಳೂರು: ರಾಜ್ಯದಲ್ಲಿ ಬಿಯರ್‌ಗಳ ಮೇಲೆ ನಿರಂತರ ಬೆಲೆ ಏರಿಕೆ ಮಾಡುತ್ತಿದ್ದ ಸರಕಾರವು ಗುಂಡು ಪ್ರಿಯರಿಗೆ ಗುಡ್ ನ್ಯೂಸ್ ನೀಡಿದೆ. ಕರ್ನಾಟಕದಲ್ಲಿ ಮೈಲ್ಡ್ ಮತ್ತು ಲಾಗರ್ ಬಿಯರ್‌ಗಳ ಬೆಲೆಗಳು ಮೇ 11ರಿಂದ ಜಾರಿಗೆ ಬರುವಂತೆ 20-25 ಶೇಕಡಾ ಇಳಿಕೆಯಾಗಿದೆ. ಅಬಕಾರಿ ಇಲಾಖೆ ಬಿಯರ್ ಮತ್ತು ಸ್ಪಿರಿಟ್ಸ್‌ಗಳಿಗೆ ‘ಆಲ್ಕೊಹಾಲ್ ಇನ್ ಬೇವರೇಜ್’ (AiB) ನೀತಿಯಡಿ ಹೊಸ ದರಪಟ್ಟಿಯನ್ನು ಬಿಡುಗಡೆ ಮಾಡಿದ್ದು, 5 ಶೇಕಡಾ ಆಲ್ಕೊಹಾಲ್ v/v(volume/volume) ಹೊಂದಿರುವ ಬಿಯರ್‌ಗಳ ಗರಿಷ್ಠ ಚಿಲ್ಲರೆ ಬೆಲೆ (MRP) 20 ರಿಂದ 25 ಶೇಕಡಾ ಕಡಿಮೆಯಾಗಿದೆ.

ಹೊಸ ದರಪಟ್ಟಿಯ ಪ್ರಕಾರ, 5 ಶೇಕಡಾ ಆಲ್ಕೊಹಾಲ್ v/v ಹೊಂದಿರುವ ಜನಪ್ರಿಯ ಮೈಲ್ಡ್ ಬಿಯರ್ ಬ್ರ್ಯಾಂಡ್‌ಗಳಾದ ಕಿಂಗ್‌ಫಿಷರ್ ಪ್ರೀಮಿಯಂ, ಕಿಂಗ್‌ಫಿಷರ್ ಅಲ್ಟ್ರಾ, ಬಡ್‌ವೈಸರ್, ಯುಬಿ ಎಕ್ಸ್‌ಪೋರ್ಟ್, ಹೈನಿಕನ್ ಮುಂತಾದ 650 ಮಿ.ಲೀ ಬಾಟಲಿಗಳ ಗರಿಷ್ಠ ಚಿಲ್ಲರೆ ದರದಲ್ಲಿ ಕ್ರಮವಾಗಿ 75 ರೂ (KF Premium, Ultra), 70 ರೂ(Heineken), 25 ರೂ (UB Export) ಮತ್ತು 20 ರೂ. (Budweiser Premium) ಇಳಿಕೆಯಾಗಿದೆ.

ಪ್ರೀಮಿಯಂ ಸ್ಕಾಚ್ ವಿಸ್ಕಿಗಳ ಬೆಲೆಯಲ್ಲಿಯೂ 20 ಶೇಕಡಾ ಇಳಿಕೆ ಕಂಡುಬಂದಿದೆ. 750 ಮಿ.ಲೀ ಬಾಟಲಿಯ ಬ್ಲಾಕ್ ಲೇಬಲ್ (43 ಶೇಕಡಾ ಆಲ್ಕೊಹಾಲ್ v/v) ಮತ್ತು ಚಿವಾಸ್ ರೀಗಲ್ (40 ಶೇಕಡಾ ಆಲ್ಕೊಹಾಲ್ v/v) ದರವು 5190 ರೂಪಾಯಿಗಳಿಂದ 4100 ರೂಪಾಯಿಗೆ ಇಳಿಕೆಯಾಗಿದೆ.

ಹೊಸ ಅಬಕಾರಿ ತೆರಿಗೆ ನೀತಿಯ ಭಾರವು ದೇಶಿ ತಯಾರಿತ ಮದ್ಯ (IML)ದ ಮೊದಲ ಐದು ಅಬಕಾರಿ ಸ್ಲ್ಯಾಬ್‌ಗಳ (ಕಡಿಮೆ ದರದ) ಮೇಲೆ ಹೆಚ್ಚು ಬೀಳಲಿದೆ. ಇವು 180 ಮಿ.ಲೀ (ನಿಪ್) ಟೆಟ್ರಾ ಪ್ಯಾಕ್‌ಗಳಲ್ಲಿ ಮಾರಾಟವಾಗುತ್ತವೆ. ಈ ಸ್ಲ್ಯಾಬ್‌ಗಳ ದರಗಳು 20-25 ಶೇಕಡಾ ಏರಿಕೆಯಾಗಿದೆ.

ಇದರಿಂದ ಕಡಿಮೆ ಮತ್ತು ಮಧ್ಯಮ ಆದಾಯದ ಗ್ರಾಹಕರ ಮೇಲೆ AiB ನೀತಿಯ ಪರಿಣಾಮ ಹೆಚ್ಚು ಕಾಣಬಹುದು. ಮೊದಲ ಐದು ಸ್ಲ್ಯಾಬ್‌ಗಳು ಅಬಕಾರಿ ಆದಾಯದ 75 ರಿಂದ 80 ಶೇಕಡಾ ವರೆಗೆ ಕೊಡುಗೆ ನೀಡುತ್ತವೆ. 42.8 ಶೇಕಡಾ ಆಲ್ಕೊಹಾಲ್ v/v ಹೊಂದಿರುವ ಜನಪ್ರಿಯ ರಮ್ ಬ್ರ್ಯಾಂಡ್ ‘ಓಲ್ಡ್ ಮಾಂಕ್’ನ ಹೊಸ ಎಂಆರ್ ಪಿ 765 ರೂಪಾಯಿಗಳಿಂದ 850 ರೂಪಾಯಿಗಳಿಗೆ ಪರಿಷ್ಕರಿಸಲಾಗಿದೆ. ಓಲ್ಡ್ ಮಾಂಕ್ ಐದನೇ ಅಬ್ಕಾರಿ ಸ್ಲ್ಯಾಬ್‌ಗೆ ಸೇರಿದೆ.

ಎಲ್ಲಾ ಬ್ರ್ಯಾಂಡ್‌ಗಳ ಅಂತಿಮ ಹೊಸ ಎಂಆರ್ ಪಿ ಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ. ಮೇ 11ರಿಂದ ಹೊಸ ಎಂಆರ್ ಪಿ ಜಾರಿಗೆ ಬಂದಿದ್ದರೂ ಜನರಿಗೆ ಹೊಸ ದರಗಳ ಬಗ್ಗೆ ಇನ್ನೂ ಸಂಪೂರ್ಣ ಅರಿವು ಇಲ್ಲ. ಮಾರುಕಟ್ಟೆಯ ಪ್ರತಿಕ್ರಿಯೆಯನ್ನು ಕಾದು ನೋಡಬೇಕಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಉದ್ಯಮ ಮೂಲಗಳು ತಿಳಿಸಿವೆ. ಎಐಬಿ ನೀತಿಯು ಆರು ದಶಕ ಹಳೆಯ ‘ಬಲ್ಕ್ ಲೀಟರ್ ಆಲ್ಕೊಹಾಲ್’ ಆಧಾರಿತ ತೆರಿಗೆ ನೀತಿಯನ್ನು ಬದಲಿಸಿದೆ.

ರಾಜ್ಯ ಸರ್ಕಾರವು ಮೇ 8ರಂದು ಹೊಸ ತೆರಿಗೆ ನೀತಿಗೆ ಸಂಬಂಧಿಸಿದ ಅಂತಿಮ ಅಧಿಸೂಚನೆಯನ್ನು ಹೊರಡಿಸಿ, ‘ಕರ್ನಾಟಕ ಅಬಕಾರಿ (ಅಬಕಾರಿ ಸುಂಕ ಮತ್ತು ಶುಲ್ಕ) (2ನೇ ತಿದ್ದುಪಡಿ) ನಿಯಮಗಳು, 2026’ ನ್ನು ಪ್ರಕಟಿಸಿತ್ತು. ಇದು ಮೇ 11ರಿಂದ ಜಾರಿಗೆ ಬಂದಿದೆ. ಎಐಬಿ ತೆರಿಗೆ ನೀತಿಯನ್ನು ಜಾರಿಗೆ ತಂದ ಭಾರತದ ಮೊದಲ ರಾಜ್ಯ ಕರ್ನಾಟಕವಾಗಿದೆ.

AiB ಎಂದರೆ “ಬ್ರಾಂಡಿ, ವಿಸ್ಕಿ, ಜಿನ್, ರಮ್, ಬಿಯರ್, ವೈನ್, ಫ್ರೂಟ್ ವೈನ್, ಫೋರ್ಟಿಫೈಡ್ ವೈನ್ ಮುಂತಾದ ಮದ್ಯಗಳಲ್ಲಿ ಪ್ರತಿ ಲೀಟರ್‌ಗೆ ಇರುವ ಆಲ್ಕೊಹಾಲ್ ಪ್ರಮಾಣ/ಪರಿಮಾಣ ಎಂದು ಅರ್ಥ. ಇದಲ್ಲದೆ, ಕರ್ನಾಟಕದಲ್ಲಿ ಎಂಆರ್ ಪಿ ಆಧಾರದಲ್ಲಿ ಮದ್ಯ ಮಾರಾಟವಾಗುವ ಅಬಕಾರಿ ಸ್ಲ್ಯಾಬ್‌ಗಳ ಸಂಖ್ಯೆಯನ್ನು ಸರ್ಕಾರವು 16ರಿಂದ 8ಕ್ಕೆ ಇಳಿಸಿದೆ

Leave a Reply

Your email address will not be published. Required fields are marked *

error: Content is protected !!