ಪೆಟ್ರೋಲ್-ಡೀಸೆಲ್ ದರ ಏರಿಕೆ- ಅಗತ್ಯ ವಸ್ತುಗಳ ಬೆಲೆ ಮತ್ತೆ ಮತ್ತಷ್ಟು ತುಟ್ಟಿ!

ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಮುಂದುವರಿದಿರುವ ಯುದ್ಧ ಹಾಗೂ ಹಾರ್ಮುಜ್ ಜಲಸಂಧಿ ಬಂದ್ ಪರಿಣಾಮ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಭಾರೀ ಅಸ್ಥಿರತೆ ಉಂಟಾಗಿದ್ದು, ಭಾರತದಲ್ಲೂ ಪೆಟ್ರೋಲ್, ಡೀಸೆಲ್ ಬಳಿಕ ಇದೀಗ ಸಿಎನ್‌ಜಿ ದರವೂ ಹೆಚ್ಚಳ ಕಂಡಿದೆ. ಸಿಎನ್‌ಜಿ ದರವನ್ನು ಕೆಜಿಗೆ ರೂ.2ರಷ್ಟು ಹೆಚ್ಚಿಸಲಾಗಿದೆ.

ಇದಕ್ಕೂ ಮೊದಲು ಕೇಂದ್ರ ಸರ್ಕಾರ ಪೆಟ್ರೋಲ್ ದರವನ್ನು ಲೀಟರ್‌ಗೆ ರೂ.3.14 ಮತ್ತು ಡೀಸೆಲ್ ದರವನ್ನು ರೂ.3.11 ರಷ್ಟು ಹೆಚ್ಚಿಸಿತ್ತು. ಈ ಏರಿಕೆಯ ಬಳಿಕ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ರೂ.97.77 ಹಾಗೂ ಡೀಸೆಲ್ ದರ ರೂ.90.67ಕ್ಕೆ ತಲುಪಿದೆ.

ಹಾರ್ಮುಜ್ ಜಲಸಂಧಿ ಜಾಗತಿಕ ತೈಲ ಮತ್ತು ಅನಿಲ ಸಾಗಣೆಯ ಪ್ರಮುಖ ಮಾರ್ಗವಾಗಿದ್ದು, ವಿಶ್ವದ ಒಟ್ಟು ತೈಲ-ಅನಿಲ ವ್ಯಾಪಾರದ ಸುಮಾರು ಐದನೇ ಭಾಗ ಇದೇ ಮಾರ್ಗದ ಮೂಲಕ ಸಾಗುತ್ತದೆ. ಅಮೆರಿಕಾ, ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ತೀವ್ರಗೊಂಡ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಉಂಟಾದ ಅಡಚಣೆ ಜಾಗತಿಕ ಇಂಧನ ಸರಬರಾಜಿನ ಮೇಲೆ ದೊಡ್ಡ ಪರಿಣಾಮ ಬೀರಿದೆ.

ಹೊಸ ದರ ಪರಿಷ್ಕರಣೆಯ ಬಳಿಕ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ದರ ಹೀಗಿದೆ…

ದೆಹಲಿಯಲ್ಲಿ ರೂ.97.77, ಕೋಲ್ಕತ್ತಾದಲ್ಲಿ ರೂ.108.74, ಮುಂಬೈನಲ್ಲಿ ರೂ.106.68, ಚೆನ್ನೈನಲ್ಲಿ ರೂ.103.67 ಹಾಗೂ ಬೆಂಗಳೂರಿನಲ್ಲಿ ರೂ.106.17 ಏರಿಕೆಯಾಗಿದೆ.

ಹಾಗೆಯೇ ಡೀಸೆಲ್ ದರ ದೆಹಲಿಯಲ್ಲಿ ರೂ.90.67, ಕೋಲ್ಕತ್ತಾದಲ್ಲಿ ರೂ.95.13, ಮುಂಬೈನಲ್ಲಿ ರೂ.93.14, ಚೆನ್ನೈನಲ್ಲಿ ರೂ.95.25 ಹಾಗೂ ಬೆಂಗಳೂರಿನಲ್ಲಿ ರೂ.94.10ಕ್ಕೆ ಏರಿಕೆಯಾಗಿದೆ.

ಭಾರತ ತನ್ನ ಕಚ್ಚಾ ತೈಲ ಅವಶ್ಯಕತೆಯ ಸುಮಾರು 90 ಶೇಕಡಾವನ್ನು ಆಮದು ಮಾಡಿಕೊಳ್ಳುವುದರಿಂದ ಜಾಗತಿಕ ಮಾರುಕಟ್ಟೆಯ ಬೆಲೆ ಬದಲಾವಣೆ ದೇಶದ ಆರ್ಥಿಕತೆಗೆ ನೇರ ಪರಿಣಾಮ ಬೀರುತ್ತದೆ. ಹೀಗಾಗಿ ಹಾರ್ಮುಜ್ ಜಲಸಂಧಿ ಬಂದ್ ಮತ್ತು ಮಧ್ಯಪ್ರಾಚ್ಯ ಸಂಘರ್ಷದಿಂದ ಭಾರತವೂ ಸಂಕಷ್ಟಕ್ಕೆ ಸಿಲುಕಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಕೇಂದ್ರ ಪೆಟ್ರೋಲಿಯಂ ಮತ್ತು ಪ್ರಕೃತಿ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರು, ದೇಶದಲ್ಲಿ ತಕ್ಷಣದ ಇಂಧನ ಕೊರತೆ ಉಂಟಾಗುವ ಆತಂಕ ಇಲ್ಲ ಎಂದು ಸ್ಪಷ್ಟಪಡಿಸಿದ್ದರು. ಭಾರತದಲ್ಲಿ ಸಾಕಷ್ಟು ಇಂಧನ ಸಂಗ್ರಹವಿದೆ ಎಂದು ಹೇಳಿದ್ದರು. ಆದರೆ, ಜಾಗತಿಕ ಪರಿಸ್ಥಿತಿಯನ್ನು ಗಮನಿಸಿದರೆ ಇಂಧನ ದರ ಏರಿಕೆ ಸಾಧ್ಯತೆಯನ್ನು ಅವರು ನಿರಾಕರಿಸಿರಲಿಲ್ಲ.

ಕಳೆದ 75 ದಿನಗಳಿಂದ ಯುದ್ಧ ನಡೆಯುತ್ತಿದೆ. ಆದರೆ, ಕಳೆದ ನಾಲ್ಕು ವರ್ಷಗಳಲ್ಲಿ ಭಾರತದಲ್ಲಿ ಇಂಧನ ದರ ಏರಿಸಿರಲಿಲ್ಲ. ಚುನಾವಣೆ ಮುಗಿದ ಕಾರಣ ದರ ಏರಿಕೆ ಮಾಡಲಾಗಿದೆ ಎಂಬ ಆರೋಪ ಸತ್ಯವಲ್ಲ ಎಂದು ಅವರು ಹೇಳಿದ್ದರು.

ಮಧ್ಯಪ್ರಾಚ್ಯ ಸಂಘರ್ಷ ಮತ್ತು ಹಾರ್ಮುಜ್ ಜಲಸಂಧಿ ಬಂದ್ ಜಾಗತಿಕ ಇಂಧನ ಮಾರುಕಟ್ಟೆಗೆ ದೊಡ್ಡ ಹೊಡೆತ ನೀಡಿದ್ದು, ಅನೇಕ ರಾಷ್ಟ್ರಗಳು ಈಗಾಗಲೇ ತೈಲ ಬೆಲೆ ಏರಿಕೆಯಿಂದ ಸಂಕಷ್ಟ ಎದುರಿಸುತ್ತಿವೆ. ಭಾರತದಲ್ಲೂ ಇಂಧನ ದರ ಏರಿಕೆಯಿಂದ ಸಾರಿಗೆ, ವಾಣಿಜ್ಯ ಹಾಗೂ ಅಗತ್ಯ ವಸ್ತುಗಳ ಬೆಲೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *

error: Content is protected !!