ಸ್ಯಾಂಡಲ್‌ವುಡ್‌ ನಟ ಹಾಗೂ ನಿರ್ಮಾಪಕ ದಿಲೀಪ್ ರಾಜ್ ಹೃದಯಾಘಾತದಿಂದ ನಿಧನ

ಬೆಂಗಳೂರು, ಮೇ 13: ಸ್ಯಾಂಡಲ್‌ವುಡ್‌ ನಟ ಹಾಗೂ ನಿರ್ಮಾಪಕ ದಿಲೀಪ್ ರಾಜ್ (47) ಅವರು ಬುಧವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಬುಧವಾರ ಬೆಳಿಗ್ಗೆ ಮನೆಯಲ್ಲಿ ಇದ್ದ ವೇಳೆ ಅವರಿಗೆ ತೀವ್ರ ಹೃದಯಾಘಾತ ಸಂಭವಿಸಿದೆ ಎನ್ನಲಾಗಿದ್ದು, ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲೇ ಅವರು ಕೊನೆಯುಸಿರೆಳೆದಿದ್ದರು ಎಂದು ಕುಟುಂಬ ಮೂಲಗಳು ತಿಳಿಸಿವೆ.

ಪುನೀತ್ ರಾಜ್‌ಕುಮಾರ್ ಅಭಿನಯದ ‘ಮಿಲನ’ ಚಿತ್ರದ ಮೂಲಕ ಜನಪ್ರಿಯತೆ ಗಳಿಸಿದ್ದ ದಿಲೀಪ್ ರಾಜ್, ‘ಯು-ಟರ್ನ್’, ‘ಬಾಯ್‌ಫ್ರೆಂಡ್’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಗಮನಾರ್ಹ ಪಾತ್ರಗಳಲ್ಲಿ ನಟಿಸಿದ್ದರು. ಅಲ್ಲದೆ ‘ಡಿ.ಆರ್. ಕ್ರಿಯೇಷನ್ಸ್’ ಮೂಲಕ ಅನೇಕ ಧಾರಾವಾಹಿಗಳನ್ನು ನಿರ್ಮಿಸಿ ಯಶಸ್ವಿ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದರು.

ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ನಾಯಕನಾಗಿ ಅಭಿನಯಿಸುವ ಮೂಲಕ ಅವರು ಮನೆಮಾತಾಗಿದ್ದರು. ನಟನೆಯ ಜೊತೆಗೆ ಕಂಠದಾನ ಕಲಾವಿದ ಹಾಗೂ ರಂಗಭೂಮಿ ಕಲಾವಿದರಾಗಿಯೂ ಸಕ್ರಿಯರಾಗಿದ್ದರು.

ದಿಲೀಪ್ ರಾಜ್ ನಿಧನಕ್ಕೆ ಚಿತ್ರರಂಗದ ಗಣ್ಯರು, ಸಹ ಕಲಾವಿದರು ಹಾಗೂ ಅಭಿಮಾನಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!