ತಮಿಳುನಾಡು ರಾಜಕೀಯ ಹೈಡ್ರಾಮ ಕೊನೆಗೂ ಅಂತ್ಯ: TVK ವಿಜಯ್‌ಗೆ ಸಿಕ್ತು ಮ್ಯಾಜಿಕ್ ನಂಬರ್

ಚೆನ್ನೈ: ಕಳೆದ ಐದು ದಿನಗಳ ಕಾಲ ತಮಿಳುನಾಡಿನಲ್ಲಿ ನಡೆದ ರಾಜಕೀಯ ಕಣ್ಣಾ ಮುಚ್ಚಾಲೆ ಕೊನೆಗೂ ಅಂತ್ಯವಾಗಿದ್ದು, ನಟ ವಿಜಯ್ ರ ಟಿವಿಕೆ ಪಕ್ಷಕ್ಕೆ ಕೊನೆಗೂ ವಿಸಿಕೆ ಪಕ್ಷ ಬೇಷರತ್ ಬೆಂಬಲ ಘೋಷಣೆ ಮಾಡಿದೆ.

ವಿದುತಲೈ ಚಿರುಥೈಗಳ್ ಕಚ್ಚಿ (ವಿಸಿಕೆ) ತಮಿಳಗ ವೆಟ್ರಿ ಕಳಗಂ (ಟಿವಿಕೆ)ಗೆ ಬೇಷರತ್ ಬೆಂಬಲ ನೀಡಿರುವುದಾಗಿ ವರದಿಯಾಗಿದ್ದು, ಆ ಮೂಲಕ ನಟ-ರಾಜಕಾರಣಿ ಸಿ. ಜೋಸೆಫ್ ವಿಜಯ್ ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಅಗತ್ಯ ಸಂಖ್ಯಾಬಲವನ್ನು ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ, ವಿಸಿಕೆ ಬೆಂಬಲದಿಂದ ರಾಜ್ಯದಲ್ಲಿ ಮೊದಲ ಮೈತ್ರಿ ಸರ್ಕಾರ ರಚನೆಗೆ ದಾರಿ ತೆರೆಯಲ್ಪಟ್ಟಿದ್ದು, ವಿಜಯ್ ಅವರ ಪ್ರಮಾಣವಚನ ಸಮಾರಂಭಕ್ಕೂ ಹಾದಿ ಸುಗಮವಾಗಿದೆ. ಈ ಬಗ್ಗೆ ಮಾಧ್ಯಮಗಳಿಗೆ ಮೊದಲ ಪ್ರತಿಕ್ರಿಯೆ ನೀಡಿದ ಟಿವಿಕೆ ನಾಯಕ ಆದವ್ ಅರ್ಜುನಾ, ಗೆಲುವಿನ ಚಿನ್ಹೆ ತೋರುತ್ತಾ ಗೆಲುವು ಎಂದು ಹೇಳಿದ್ದಾರೆ. ಅಲ್ಲದೆ ಸರ್ಕಾರ ರಚನೆಗೆ ಟಿವಿಕೆಗೆ ಬೆಂಬಲ ನೀಡಿರುವ ವಿಸಿಕೆಯ ಪತ್ರವನ್ನು ಪ್ರದರ್ಶಿಸಿದರು.

ನಟ-ರಾಜಕಾರಣಿಯಾಗಿ ಹೊರಹೊಮ್ಮಿರುವ ವಿಜಯ್ ಅವರ ಟಿವಿಕೆಗೆ ವಿಸಿಕೆ ಶನಿವಾರ ಅಧಿಕೃತ ಬೆಂಬಲ ಘೋಷಿಸುವ ನಿರೀಕ್ಷೆಯಿತ್ತು. ಮೂರು ದಿನಗಳಿಗಿಂತ ಹೆಚ್ಚು ಕಾಲ ಮುಂದುವರಿದ ರಾಜಕೀಯ ಗೊಂದಲಕ್ಕೆ ಇದರಿಂದ ತೆರೆ ಬಿದ್ದಂತಾಗಿದೆ. ಇದರಿಂದ ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಟಿವಿಕೆ ಪಕ್ಷಕ್ಕೆ ಸ್ಪಷ್ಟ ಬಹುಮತ ದೊರಕಿದಂತಾಗಿದೆ.

ವಿಸಿಕೆ ಜೊತೆ IUML ಕೂಡ ಬೆಂಬಲ

ಅತ್ತ ನಟ ವಿಜಯ್ ರ ಟಿವಿಕೆ ಪಕ್ಷಕ್ಕೆ ವಿಸಿಕೆ ಬೆಂಬಲ ಘೋಷಣೆ ಮಾಡಿದ ಬೆನ್ನಲ್ಲೇ ಇತ್ತ ಡಿಎಂಕೆ ಮೈತ್ರಿಕೂಟದ IUML ಕೂಡ ವಿಜಯ್ ಗೆ ಬೆಂಬಲ ಘೋಷಣೆ ಮಾಡಿದೆ. 2 ಸದಸ್ಯರನ್ನು ಹೊಂದಿರುವ IUML ನಿನ್ನೆ ತಾನು ಡಿಎಂಕೆ ಮೈತ್ರಿಕೂಟದಲ್ಲೇ ಉಳಿಯುವುದಾಗಿ ಘೋಷಣೆ ಮಾಡಿ ಟಿವಿಕೆಗೆ ಬೆಂಬಲ ನಿರಾಕರಿಸಿತ್ತು. ಆದರೆ ಇಂದು ಬದಲಾದ ರಾಜಕೀಯ ಸನ್ನಿವೇಶದಲ್ಲಿ ಟಿವಿಕೆ ಪಕ್ಷಕ್ಕೆ ಬೆಂಬಲ ಘೋಷಣೆ ಮಾಡಿದೆ.

ಮೈತ್ರಿ ಲೆಕ್ಕಾಚಾರ

ವಿಸಿಕೆಯ ಬೆಂಬಲದಿಂದ ಟಿವಿಕೆಗೆ ಅತ್ಯಂತ ಮಹತ್ವದ ಎರಡು ಸ್ಥಾನಗಳು ಸೇರ್ಪಡೆಯಾಗುತ್ತವೆ. ವಿಜಯ್ ನೇತೃತ್ವದ ಮೈತ್ರಿಗೆ ಈಗಾಗಲೇ 116 ಶಾಸಕರ ಬೆಂಬಲವಿತ್ತು. ಇದರಲ್ಲಿ ಕಾಂಗ್ರೆಸ್‌ನ ಐದು ಶಾಸಕರು ಹಾಗೂ ಎಡಪಂಥೀಯ ಪಕ್ಷಗಳ ನಾಲ್ವರು ಶಾಸಕರೂ ಸೇರಿದ್ದಾರೆ. ವಿಸಿಕೆಯ ಇಬ್ಬರು ಶಾಸಕರ ಬೆಂಬಲ ಸೇರಿಸಿದರೆ, ಮೈತ್ರಿಯ ಬಲ 118ಕ್ಕೆ ಏರುತ್ತದೆ. ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಅಗತ್ಯವಿರುವ ಕನಿಷ್ಠ ಶಾಸಕರ ಸಂಖ್ಯೆ ಇದೇ 118.

ಎಡಪಂಥೀಯ ಪಕ್ಷಗಳು ಯಾವುದೇ ಷರತ್ತುಗಳಿಲ್ಲದೆ ಬೆಂಬಲ ನೀಡಿದ್ದು, ವಿಜಯ್ ಸಚಿವ ಸಂಪುಟದಿಂದ ದೂರ ಉಳಿಯಲು ತೀರ್ಮಾನಿಸಿವೆ. ಆದರೆ ಕಾಂಗ್ರೆಸ್ ಬೆಂಬಲ ಕೆಲವು ಷರತ್ತುಗಳೊಂದಿಗೆ ಬಂದಿದ್ದು, ಎರಡು ಸಚಿವ ಸ್ಥಾನಗಳ ನಿರೀಕ್ಷೆಯಲ್ಲಿದೆ ಎಂದು ಮೂಲಗಳು ತಿಳಿಸಿವೆ. ಇದಲ್ಲದೆ ಎಐಎಡಿಎಂಕೆಯ ಮೂವರು ಶಾಸಕರು ಬಂಡಾಯ ಎದ್ದು ಟಿವಿಕೆಗೆ ಸೇರುವ ಸಾಧ್ಯತೆಯೂ ಇದೆ.

Leave a Reply

Your email address will not be published. Required fields are marked *

error: Content is protected !!