ಪ.ಬಂಗಾಳದ ಮೊದಲ ಬಿಜೆಪಿ ಸಿಎಂ ಆಗಿ ಸುವೇಂದು ಅಧಿಕಾರಿ ಪ್ರಮಾಣ ವಚನ ಸ್ವೀಕಾರ- ಹೊಸ ರಾಜಕೀಯ ಯುಗಕ್ಕೆ ಚಾಲನೆ

ಕೋಲ್ಕತಾ: ದಶಕಗಳ ಪ್ರಯತ್ನಗಳ ಬಳಿಕ ಕೊನೆಗೂ ಪಶ್ಚಿಮ ಬಂಗಾಳದಲ್ಲಿ ಸರ್ಕಾರ ರಚನೆ ಮಾಡಿರುವ ಬಿಜೆಪಿಯ ಮೊದಲ ಸಿಎಂ ಆಗಿ ಸುವೇಂದು ಅಧಿಕಾರಿ ಶನಿವಾರ ಪ್ರಮಾಣ ವಚನ ಸ್ವೀಕರಿಸಿದರು.

ಕೊಲ್ಕತ್ತಾದ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ರಾಜ್ಯಪಾಲ ಆರ್‌ಎನ್ ರವಿ ಅವರು ಬಿಜೆಪಿಯ ಸುವೇಂದು ಅಧಿಕಾರಿಗೆ ಹುದ್ದೆ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.ಆ ಮೂಲಕ ಪಶ್ಚಿಮ ಬಂಗಾಳದಲ್ಲಿ ರಾಜ್ಯದಲ್ಲಿ ಹೊಸ ರಾಜಕೀಯ ಯುಗಕ್ಕೆ ಚಾಲನೆ ನೀಡಿದಂತಾಗಿದೆ.

ಈ ಸಮಾರಂಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಸಚಿವರು, ಎನ್‌ಡಿಎ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಹಿರಿಯ ಬಿಜೆಪಿ ನಾಯಕರು ಸೇರಿದಂತೆ ಗಣ್ಯ ರಾಜಕೀಯ ನಾಯಕರು ಉಪಸ್ಥಿತರಿದ್ದರು.

ಸುವೇಂದು ಅಧಿಕಾರಿ ಜೊತೆ ಇತರೆ ಐದು ಪ್ರಮುಖ ಶಾಸಕರೂ ಕೂಡ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಬಿಜೆಪಿ ಶಾಸಕರಾದ ದಿಲೀಪ್ ಘೋಷ್, ಅಗ್ನಿಮಿತ್ರಾ ಪಾಲ್, ಅಶೋಕ್ ಕೀರ್ತನಿಯಾ, ನಿಶಿತ್ ಪ್ರಮಾಣಿಕ್ ಮತ್ತು ಕ್ಷುದಿರಾಮ್ ತುಡು ಕೂಡ ರಾಜ್ಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

ಪ್ರಮಾಣ ವಚನ ಕಾರ್ಯಕ್ರಮಕ್ಕೆ ಜನಸಾಗರ

ಶನಿವಾರ ಈ ಸಮಾರಂಭವನ್ನು ವೀಕ್ಷಿಸಲು ದೇಶದ ವಿವಿಧ ಭಾಗಗಳಿಂದ ಹಾಗೂ ವಿದೇಶಗಳಿಂದ ಸಾವಿರಾರು ಬಿಜೆಪಿ ಬೆಂಬಲಿಗರು ಕೊಲ್ಕತ್ತಾಕ್ಕೆ ಹರಿದುಬಂದರು.

ಉತ್ತರ ಬಂಗಾಳ ಮತ್ತು ನೆರೆಯ ಜಾರ್ಖಂಡ್ ಸೇರಿದಂತೆ ಹಲವು ರಾಜ್ಯಗಳಿಂದಲೂ ಬೆಂಬಲಿಗರು ಆಗಮಿಸಿದ್ದರು. ಬೆಳಗ್ಗಿನಿಂದಲೇ ಬಿಜೆಪಿ ಧ್ವಜಗಳು ಮತ್ತು ಕೇಸರಿ ಬ್ಯಾನರ್‌ಗಳನ್ನು ಹಿಡಿದ ಬೆಂಬಲಿಗರ ಗುಂಪುಗಳು ನಗರದ ವಿವಿಧ ಭಾಗಗಳಲ್ಲಿ ಸೇರಿ ನಂತರ ಸಮಾರಂಭದ ಸ್ಥಳದತ್ತ ತೆರಳಿದವು.

“ಜೈ ಶ್ರೀ ರಾಮ್” ಘೋಷಣೆಗಳು ಹಾಗೂ ಪ್ರಧಾನಿ ನರೇಂದ್ರ ಮೋದಿ ಮತ್ತು ಸುವೇಂದು ಅಧಿಕಾರಿ ಪರ ಘೋಷಣೆಗಳು ನಗರಾದ್ಯಂತ ಮೊಳಗಿದವು. “ಇದು ಐತಿಹಾಸಿಕ ದಿನ. ಟಿಎಂಸಿ ಯ ಹಿಡಿತದಿಂದ ಪಶ್ಚಿಮ ಬಂಗಾಳ ಮುಕ್ತವಾಗುವುದನ್ನು ನೋಡುವುದಕ್ಕಾಗಿ ನಾವು ಬಂದಿದ್ದೇವೆ,” ಎಂದು ಜಾರ್ಖಂಡ್‌ ನಿಂದ ಬಂದಿದ್ದ ಒಬ್ಬ ಬಿಜೆಪಿ ಬೆಂಬಲಿಗರು ಪಕ್ಷದ ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸುತ್ತಾ ಹೇಳಿದರು

Leave a Reply

Your email address will not be published. Required fields are marked *

error: Content is protected !!