ನಿಟ್ಟೆ ಅಪಘಾತ ಪ್ರಕರಣ: ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿನಿ ಚಿಕಿತ್ಸೆ ಫಲಿಸದೆ ಮೃತ್ಯು

ಕಾರ್ಕಳ : ನಿಟ್ಟೆಯ ಕಾಲೇಜು ಬಳಿ ಬೈಕಿಗೆ ಕಾರು ಡಿಕ್ಕಿಯಾಗಿ ಬೈಕ್ ಸವಾರ ನವೀನ್‌ಚಂದ್ರ ಮೂಲ್ಯ ಸ್ಥಳದಲ್ಲೇ ಮೃತಪಟ್ಟು, ಅವರ ಮಗಳು ಪ್ರೇರಣಾ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಇದೀಗ ಆಕೆಯೂ ಕೂಡ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ಏ .24 ರಂದು ಈ ಭೀಕರ ಅಪಘಾತ ಸಂಭವಿಸಿದ್ದು, ಕಾಲೇಜಿಗೆ ಪರೀಕ್ಷೆಗೆ ಹೋಗಿದ್ದ ಮಗಳು ಪ್ರೇರಣಾಳ ಹಾಗೂ ತಂದೆ ನವೀನ್ ಚಂದ್ರ ಮೂಲ್ಯ ಬೈಕಿನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಪೆಟ್ರೋಲ್ ಬಂಕ್ ಬಳಿ ಕಾರ್ಕಳದಿಂದ ನಿಟ್ಟೆ ಕಡೆಗೆ ಯಮ ವೇಗದಲ್ಲಿ ನುಗ್ಗಿ ಬಂದ ನಿಟ್ಟೆ ಕಾಲೇಜಿನ ವಿದ್ಯಾರ್ಥಿಗಳಿದ್ದ ಕಾರು ನೇರವಾಗಿ ನವೀನ್ ಚಂದ್ರ ಅವರು ಚಲಾಯಿಸುತ್ತಿದ್ದ ಬೈಕಿಗೆ ಅಪ್ಪಳಿಸಿದೆ. ಈ ಭೀಕರ ಅಪಘಾತದಲ್ಲಿ ಬೈಕ್ ಸವಾರ ನವೀನ್‌ಚಂದ್ರ ಅವರು ರಸ್ತೆಗೆ ಎಸೆಯಲ್ಪಟ್ಟು ದಾರುಣವಾಗಿ ಮೃತಪಟ್ಟಿದ್ದರು.

ಮಗಳು ಪ್ರೇರಣಾ ಗಂಭೀರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡಿ ಸೋಮವಾರ ಬೆಳಗ್ಗೆ ಇಹಲೋಕ ತ್ಯಜಿಸಿದ್ದಾಳೆ.

ಕುಟುಂಬಕ್ಕೆ ಆಧಾರವಾಗಿದ್ದ ತಂದೆ ಹಾಗೂ ಬಾಳಿ ಬದುಕಬೇಕಿದ್ದ ಮಗಳು ತಮ್ಮದಲ್ಲದ ತಪ್ಪಿಗೆ ಜೀವ ಕಳೆದುಕೊಂಡಿದ್ದು, ಈ ಅಪಘಾತಕ್ಕೆ ಕಾರಣರಾದ ವಿದ್ಯಾರ್ಥಿಗಳ ವಿರುದ್ದ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಪತಿ ಹಾಗೂ ಮಗಳನ್ನು ಕಳೆದುಕೊಂಡ ಪತ್ನಿ ಹಾಗೂ ಅವರ ಸಂಬಂಧಿಕರ ನೋವು ಆಕ್ರಂದನ ಮುಗಿಲುಮುಟ್ಟಿದೆ. ಅಮಾಯಕರ ಪ್ರಾಣ ತೆಗೆದ ವಿದ್ಯಾರ್ಥಿಗಳಿಗೆ ಕಠಿಣ ಶಿಕ್ಷೆಯಾಗಬೇಕೆನ್ನುವುದು ಎಲ್ಲರ ಆಗ್ರಹವಾಗಿದೆ.

Leave a Reply

Your email address will not be published. Required fields are marked *

error: Content is protected !!