ಉಡುಪಿ ಅಗ್ನಿ ದುರಂತ- 2.5 ಕೋಟಿ ರೂ.ನಷ್ಟ ಸಾಧ್ಯತೆ, ಕಟ್ಟಡದ ಮಾಲಕ ಆಸ್ಪತ್ರೆಗೆ ದಾಖಲು

ಉಡುಪಿ, ಎ.27: ನಗರದ ಸಿಟಿ ಬಸ್ ನಿಲ್ದಾಣ ಸಮೀಪದ ವಾಣಿಜ್ಯ ಕಟ್ಟಡದಲ್ಲಿ ರವಿವಾರ ಸಂಜೆ ಸಂಭವಿಸಿದ ಭೀಕರ ಬೆಂಕಿ ದುರಂತದಲ್ಲಿ ಅಗ್ನಿಶಾಮಕದ ದಳದಿಂದ ಬೆಂಕಿ ನಂದಿಸುವ ಕಾರ್ಯಾಚರಣೆ ಸೋಮವಾರ ಬೆಳಗ್ಗೆ ತನಕ ಮುಂದುವರಿಯಿತು. ಇದೀಗ ಬೆಂಕಿಯನ್ನು ಸಂಪೂರ್ಣ ನಂದಿಸಲಾಗಿದೆ.

ರಾಜಸ್ಥಾನ ಮೂಲದ ಉದ್ಯಮಿ ಭೀಮ ಎಂಬವರ ಪ್ಲಾಸ್ಟಿಕ್ ಸಾಮಗ್ರಿಗಳ ದಾಸ್ತಾನು ಗೋದಾಮಿನಲ್ಲಿ ರವಿವಾರ ಸಂಜೆ ವಿದ್ಯುತ್ ಶಾರ್ಟ್ ಸಕ್ಯೂರ್ಟ್ ನಿಂದ ಬೆಂಕಿ ಕಾಣಿಸಿಕೊಂಡಿತ್ತು. ಈ ಬೆಂಕಿ ಅವರದ್ದೇ ಮಾಲಕತ್ವದ ಪ್ಲಾಸ್ಟಿಕ್ ಅಂಗಡಿ, ಮೊಬೈಲ್ ಅಂಗಡಿಯನ್ನು ಸಂಪೂರ್ಣ ಸುಟ್ಟು ಭಸ್ಮ ಮಾಡಿದೆ. ಅದೇ ರೀತಿ ಸಮೀಪದ ಎರಡು ಮೂರು ಅಂಗಡಿಗಳಿಗೆ ಹಾನಿಯಾಗಿದ್ದು, ಅಪಾರ ನಷ್ಟ ಉಂಟಾಗಿದೆ ಎನ್ನಲಾಗಿದೆ. ಇದರಿಂದ ಸುಮಾರು 2.5 ಕೋಟಿ ರೂ. ನಷ್ಟ ಅಂದಾಜಿಸಲಾಗಿದೆ.

ರವಿವಾರ ಸಂಜೆ ಕಾಣಿಸಿಕೊಂಡ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳ ನಡೆಸಿದ ಕಾರ್ಯಾಚರಣೆ ಸೋಮವಾರ ಬೆಳಗ್ಗೆ ಏಳು ಗಂಟೆಯವರೆಗೂ ನಡೆದಿತ್ತು.

ತಡರಾತ್ರಿ ಬೆಂಕಿಯನ್ನು ಹತೋಟಿಗೆ ತಂದರೂ ಬೆಳಗ್ಗೆ ವರೆಗೆ ಹಲವು ಬಾರಿ ಗೋಡೌನ್ ಮತ್ತು ಕೆಳಗಿನ ಅಂಗಡಿಗಳಲ್ಲಿ ಮತ್ತೆ ಬೆಂಕಿ ಕಾಣಿಸಿಕೊಂಡಿತ್ತು. ತಕ್ಷಣ ಸ್ಥಳದಲ್ಲಿದ್ದ ಅಗ್ನಿ ಶಾಮಕದಳದ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯ ನಡೆಸಲಾಯಿತು.

ಮಾಲಕ ಆಸ್ಪತ್ರೆ ದಾಖಲು

ಈ ದುರಂತ ಒಂದೇ ಮಾಲಕರಿಗೆ ಸಂಬಂಧಿಸಿದ ನಾಲ್ಕು ಅಂಗಡಿಗಳನ್ನು ಸುಟ್ಟು ಭಸ್ಮವಾಗಿದ್ದು, ಈ ಆಘಾತದಿಂದ ತೀವ್ರ ಅಸ್ವಸ್ಥಗೊಂಡ ಅಂಗಡಿ ಮಾಲಕ ಭೀಮ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಮಾಜ ಸೇವಕರು, ಸಾರ್ವಜನಿಕರು ಸೇರಿ ಅಂಗಡಿಗಳಲ್ಲಿ ಸುಟ್ಟು ಕರಕಲಾದ ಸೊತ್ತುಗಳನ್ನು ತೆರವುಗೊಳಿಸುವ ಕಾರ್ಯ ನಡೆಸುತ್ತಿದ್ದಾರೆ. ಈ ದುರಂತದಿಂದ ಸೊತ್ತುಗಳು ಮಾತ್ರ ವಲ್ಲದೆ ಕಟ್ಟಡ ಹಾಗೂ ಅದರಲ್ಲಿನ ಶಟರ್ಗಳಿಗೂ ಭಾರೀ ಹಾನಿ ಉಂಟು ಮಾಡಿದೆ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಪ್ರಮುಖರ ಭೇಟಿ

ಸ್ಥಳಕ್ಕೆ ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್, ಶಾಸಕ ಯಶ್ಪಾಲ್ ಸುವರ್ಣ ಸಹಿತ ಹಲವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇಲಾಖಾ ಮಟ್ಟದಲ್ಲಿ ಪರಿಹಾರಕ್ಕೆ ನೀಡಲು ಅವಕಾಶ ಇದ್ದರೆ ಪ್ರಯತ್ನಿಸಲಾಗುವುದು ಎಂದು ಅವರು ಭರವಸೆ ನೀಡಿದರು.


ಇದೇ ವೇಳೆ ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಉಡುಪಿ ತಾಲೂಕು ಅಧ್ಯಕ್ಷ ರಮೇಶ್ ಕಾಂಚನ್ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!