ಉಡುಪಿ: ಲಂಡನ್ ಮಹಿಳೆ ಹೆಸರಿನಲ್ಲಿ ಹೊಟೇಲ್ ಶೆಫ್‌ಗೆ ಲಕ್ಷಾಂತರ ರೂ. ಆನ್‌ಲೈನ್ ವಂಚನೆ
ಉಡುಪಿ, ಎ.14: ಹೊಟೇಲ್ ಶೆಫ್‌ಗೆ ವಾಟ್ಸಾಪ್‌ನಲ್ಲಿ ಪರಿಚಯವಾದ ಲಂಡನ್‌ನ ಮಹಿಳೆಯೊಬ್ಬರು ಲಕ್ಷಾಂತರ ರೂ. ಆನ್‌ಲೈನ್ ವಂಚನೆ ಎಸಗಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರಿನಲ್ಲಿ ಶೆಫ್ ಆಗಿ ಕೆಲಸ ಮಾಡಿಕೊಂಡಿದ್ದ ಉಡುಪಿ ಕುತ್ಪಾಡಿಯ ಪಾಂಡು ಕರಿಯಪ್ಪ ಪೂಜಾರಿ(62) ಎಂಬವರಿಗೆ ವಾಟ್ಸಾಪ್‌ನಲ್ಲಿ ಲಂಡನ್ ನಿವಾಸಿ ಎಂದು ಹೇಳಿಕೊಂಡು ಏಮಿಲ್ಡಾ ವಿಲಿಯಮ್ ಎಂಬಾಕೆಯ ಪರಿಚಯವಾಗಿತ್ತು. ಇಬ್ಬರೂ ಪರಸ್ಪರ ಚಾಟ್ ಮಾಡಿದ್ದು, ಏಮಿಲ್ಡಾ, ತಾನು ಭಾರತದಲ್ಲಿ ಕಾಸ್ಮೆಟಿಕ್ ಹಾಗೂ ಹೋಟೆಲ್ ವ್ಯವಹಾರ ಮಾಡಬೇಕು, ಅದಕ್ಕೆ ನಿಮ್ಮನ್ನು ಭೇಟಿ ಮಾಡಲು ಮಂಗಳೂರಿಗೆ ಬರುತ್ತೇನೆ ಎಂದು ತಿಳಿಸಿದ್ದಳು.
ಎ.7ರಂದು ಏಮಿಲ್ಡಾ ವಿಲಿಯಂ, ಪಾಂಡುಗೆ ಲಂಡನ್‌ನಿಂದ ದೆಹಲಿಗೆ ಬರುವ ವಿಮಾನದ ಟಿಕೆಟ್‌ನ್ನು ವಾಟ್ಸಾಪ್‌ನಲ್ಲಿ ಕಳುಹಿಸಿದ್ದಳು. ಎ.8ರಂದು ಪಾಂಡುಗೆ ಮಹಿಳೆಯೊಬ್ಬರು ಕರೆ ಮಾಡಿ, ನಿಮ್ಮ ಸ್ನೇಹಿತೆ ಏಮಿಲ್ಡಾ ವಿಲಿಯಂ ದೆಹಲಿ ವಿಮಾನ ನಿಲ್ದಾಣದಲ್ಲಿ 5 ಕೋಟಿ ಡಿಮಾಂಡ್ ಡ್ರಾಫ್ಟ್ ಹಾಗೂ ಅಧಿಕ ವಸ್ತುಗಳನ್ನು ಹೊಂದಿದ್ದು, ಈ ಸಂಬಂಧ ನೀವು ಕೂಡಲೇ 70,000ರೂ. ಹಣವನ್ನು ಪಾವತಿಸುವಂತೆ ತಿಳಿಸಿದ್ದಳು.
ಆನಂತರ ಏಮಿಲ್ಡಾ ವಿಲಿಯಂ, ಪಾಂಡು ಜೊತೆ ಅಳುತ್ತಾ ಮಾತನಾಡಿದ್ದಳು. ಇದನ್ನು ನಂಬಿದ ಪಾಂಡು, ವಿವಿಧ ಹಂತಗಳಲ್ಲಿ ಒಟ್ಟು 1,13,300 ರೂ. ಹಣವನ್ನು ಸ್ಕ್ಯಾನರ್ ಮೂಲಕ ವರ್ಗಾವಣೆ ಮಾಡಿ ವಂಚನೆಗೆ ಒಳಗಾಗಿದ್ದಾರೆ ಎಂದು ದೂರಲಾಗಿದೆ.





