ಸುಖಾ ಸುಮ್ಮನೆ ವಾಹನಗಳ ದಾಖಲೆ ಪರಿಶೀಲನೆ ಸಲ್ಲ: ಆಯುಕ್ತ ಕಮಲ್ ಪಂತ್
ಬೆಂಗಳೂರು: ಸಂಚಾರ ಪೊಲೀಸರು ಯಾವುದೇ ವಾಹನಗಳ ದಾಖಲೆಗಳನ್ನು ದುರುದ್ದೇಶ ಇಟ್ಟುಕೊಂಡು ಪರಿಶೀಲನೆ ಮಾಡುವಂತಿಲ್ಲ, ಕಣ್ಣಿಗೆ ಕಾಣುವ ಸಂಚಾರ ನಿಯಮ ಉಲ್ಲಂಘನೆ ಕಂಡುಬಂದರೆ ಮಾತ್ರ ಕ್ರಮ ಜರುಗಿಸಬೇಕು ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸೂಚನೆ ನೀಡಿದ್ದಾರೆ.
ಪ್ರತಿ ತಿಂಗಳ ಎರಡನೇ ಶನಿವಾರ ನಡೆಯುವ ಸಂಚಾರ ಸಂಪರ್ಕ ದಿನವನ್ನು ಇಂದು ವೈಟ್ ಫೀಲ್ಡ್ ವಿಭಾಗದಲ್ಲಿ ಚಾಲನೆ ನೀಡಿ ಮಾತನಾಡಿದ ಕಮಲಪಂತ್, ಅತಿ ವೇಗದ, ಅಜಾಗರೂಕತೆಯ ಚಾಲನೆ ಹಾಗೂ ಅಪ್ರಾಪ್ತರು ವಾಹನ ಚಾಲನೆ ಮಾಡುವುದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕ ಸಂರಕ್ಷಣೆ ಕಾಯ್ದೆ ಪ್ರಕಾರ ಸಿಸಿ ಟಿವಿ ಬಳಸಿ ಪೊಲೀಸ್ ಠಾಣೆಯಲ್ಲೊಂದು ಸ್ಕ್ರೀನ್ ಮತ್ತು ನಿಮ್ಮ ಅಪಾರ್ಟ್ ಮೆಂಟ್ ನಲ್ಲಿ ಒಂದು ಸ್ಕ್ರೀನ್ ಇಟ್ಟು ಕ್ರಿಮಿನಲ್ ಚಟುವಟಿಕೆಗಳು ನಿಯಂತ್ರಿಸಬಹುದು ಎಂದರು.
ವಾಟರ್ ಟ್ಯಾಂಕರ್ ಗಳನ್ನು ಅಪ್ರಾಪ್ತರು ಚಾಲನೆ ಮಾಡುವುದು ಮುಂತಾದ ದೂರುಗಳು ಬಂದಿವೆ. ಜೊತೆಗೆ ಅಕ್ರಮ ಕಸಾಯಿಖಾನೆಗಳು, ಅನಧಿಕೃತ ಫ್ಲಕ್ಸ್ ಗಳು, ಅನಧಿಕೃತ ಕೇಬಲ್ ಗಳು, ಟೋಯಿಂಗ್ ಮಾಡುವ ಸಿಬ್ಬಂದಿಗಳು ರೌಡಿಗಳಂತೆ ವರ್ತನೆ, ವರ್ತೂರು, ಗುಂಜೂರು, ವೈಟ್ ಫೀಲ್ಡ್ ಭಾಗದಲ್ಲಿ ಫುಟ್ ಪಾತ್ ಒತ್ತವರಿ ಮುಂತಾದವುಗಳ ಬಗ್ಗೆ ಸಾರ್ವಜನಿಕರು ದೂರಿದ್ದಾರೆ. ಈ ಬಗ್ಗೆ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ, ಟೋಯಿಂಗ್ ಸಿಬ್ಬಂದಿ ಬಗ್ಗೆ ಯಾವುದೇ ದೂರಿಗಳಿದ್ದರೆ ಹೆಚ್ವಿನ ಶುಲ್ಕ ಪಡೆದರೆ ಅವರ ಬಗ್ಗೆ ಮಾಹಿತಿ ಕೊಡಿ ಅವರ ಗುತ್ತಿಗೆ ವಜಾಗೊಳಿಸಲಾಗುತ್ತದೆ ಎಂದು ಕಮಲ್ ಪಂತ್ ಎಚ್ಚರಿಕೆ ನೀಡಿದರು.
ಕೆಎಂಸಿ ಕಾಯ್ದೆ ಪ್ರಕಾರ ಫುಟ್ ಪಾತ್ ಒತ್ತುವರಿ, ಕಟ್ಟಡ ನಿರ್ಮಾಣದ ತ್ಯಾಜ್ಯ ಎಲ್ಲಂದರಲ್ಲಿ ಹಾಕುವುದು, ಅನಧಿಕೃತ ಸ್ಥಳಗಳಲ್ಲಿ ಕಟ್ಟ ನಿರ್ಮಾಣ ಮಾಡುವುದು ಕಂಡು ಬಂದರೆ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಡಿಸಿಪಿ ದೇವರಾಜ್ ಎಚ್ಚರಿಕೆ ನೀಡಿದರು. ಸಂಚಾರ ನಿಯಮ ಉಲ್ಲಂಘನೆ ಕಣ್ಣಿಗೆ ಕಂಡರೆ ಮಾತ್ರ ವಾಹನ ಹಿಡಿಯ ಬೇಕು, ಉದ್ದೇಶ ಪೂರಕ ವಾಹನ ದಾಖಲೆಗಳು ತಪಾಸಣೆ ಮಾಡುವಂತಿಲ್ಲ ಎಂದು ಕಮಲ್ ಪಂತ್ ಸೂಚಿಸಿದರಲ್ಲದೆ, ಸಂಚಾರಿ ಪೊಲೀಸರೊಂದಿಗೆ ಹಲವು ಸಂಘಸಂಸ್ಥೆಗಳು ಕೆಲಸಮಾಡುತ್ತಿವೆ. ಸಾರ್ವಜನಿಕರು ಕೂಡ ಹೆಚ್ಚಿನ ಸಹಕಾರ ನೀಡಬೇಕ ಎಂದರು.
ಸಭೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳಾದ ರವಿಕಾಂತೇಗೌಡ, ದೇವರಾಜ್, ನಾರಾಯಣ್, ಮನೋಜ್ ಕುಮಾರ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.