ಕಾಂಗ್ರೆಸ್ನ ಮೃದು ಹಿಂದುತ್ವದಲ್ಲಿ ಗೋಹತ್ಯೆಗೆ ಅವಕಾಶವಿದೆಯೆ? – ಕುಯಿಲಾಡಿ
ಉಡುಪಿ : ಕೋಟ್ಯಾಂತರ ಗೋ ಪ್ರೇಮಿಗಳ ಭಾವನೆಯನ್ನು ಪುರಸ್ಕರಿಸಿ ಗೋಹತ್ಯೆ ನಿಷೇಧ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿ ಅಂಗೀಕಾರಗೊಳಿಸಿರುವ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದ ಐತಿಹಾಸಿಕ ಸಾಧನೆ ಸ್ವಾಗತಾರ್ಹ. ಆದರೆ ಮಸೂದೆಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್ನ ಮೃದು ಹಿಂದುತ್ವ ಧೋರಣೆಯಲ್ಲಿ ಗೋಹತ್ಯೆಗೆ ಅವಕಾಶವಿದೆಯೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಪ್ರಶ್ನಿಸಿದ್ದಾರೆ.
ಭಾರತೀಯ ಸನಾತನ ಸಂಸ್ಕ್ರತಿಯಲ್ಲಿ ಗೋಮಾತೆಗೆ ಪೂಜ್ಯನೀಯ ಸ್ಥಾನವಿದೆ. ಆದಾಗ್ಯೂ ದನದ ಹಟ್ಟಿಯಿಂದ ಹಗಲಿರುಳೆನ್ನದೆ ಗೋವುಗಳನ್ನು ಕದ್ದು ಸಾಗಟ ಮಾಡಿ ಗೋಹತ್ಯೆಯನ್ನು ಅವ್ಯಾಹತವಾಗಿ ನಡೆಸುತ್ತಿದ ಗೋಕಳ್ಳರ ಬಗ್ಗೆ ತುಟಿ ಬಿಚ್ಚದಿರುವುದು ಕಾಂಗ್ರೆಸ್ನ ದ್ವಿಮುಖ ನೀತಿಗೆ ಸಾಕ್ಷಿ. ಗೋಹತ್ಯೆ ಮಸೂದೆ ಜಾರಿ ಪ್ರಕ್ರಿಯೆಯಿಂದ ಜನಮಾನಸದಲ್ಲಿ ಭರವಸೆ ಮೂಡಿಸಿರುವ ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯನ್ನು ಈಡೇರಿಸುವ ಮೂಲಕ ನುಡಿದಂತೆ ನಡೆದಿದೆ ಎಂದು ಅವರು ಹೇಳಿದ್ದಾರೆ.
ಅವಕಾಶವಾದಿ ರಾಜಕಾರಣಕ್ಕೆ ಹೆಸರುವಾಸಿಯಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮೊಸಳೆ ಕಣ್ಣೀರನ್ನು ರಾಜ್ಯದ ಜನತೆ ಸರಿಯಾಗಿಯೇ ಅರ್ಥೈಸಿಕೊಂಡಿದ್ದಾರೆ. ಗೋಹತ್ಯೆ ನಿಷೇಧ ಮಸೂದೆಯನ್ನು ವಿರೋಧಿಸುವ ಮೂಲಕ ಸದಾ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿರುವ ಕಾಂಗ್ರೆಸ್ನ ಓಲೈಕೆ ರಾಜಕಾರಣದ ನಿಜ ಬಣ್ಣ ಬಯಲಾಗಿದೆ. ಆದರೂ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರಕಾರದ ಮೂಲಕ ಗೋಹತ್ಯೆ ನಿಷೇಧ ಕಾನೂನು ಜಾರಿಯಾಗುವುದು ಶತಸಿದ್ಧ. ಒಂದೆಡೆ ನಾಟಕೀಯ ಹಿಂದೂ ಜಪ, ಇನ್ನೊಂದೆಡೆ ಗೋಹತ್ಯೆ ನಿಷೇಧ ಮಸೂದೆಗೆ ಪ್ರತಿರೋಧ ಒಡ್ಡುತ್ತಿರುವ ಕಾಂಗ್ರೆಸ್ಗೆ ಮುಂಬರಲಿರುವ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ರಾಜ್ಯದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.