ಡಿ.14ರ ರಾತ್ರಿ ಆಕಾಶದಲ್ಲಿ ಲಕ್ಷ ದೀಪೋತ್ಸವ!

ಡಿ. 14 ರಂದು ಆದಿತ್ಯ ವಾರ ಜೆಮಿನಿಡ್ ಉಲ್ಕಾಪಾತ. ರಾತ್ರಿ 9 ಗಂಟೆಯಿಂದ  ಉಲ್ಕಾಪಾತವಿದೆ. ರಾತ್ರಿ 2 ಗಂಟೆಗೆ ಇದು ಅತೀ ಹೆಚ್ಚು. 

ಪ್ರತಿ ವರ್ಷ ಡಿಸೆಂಬರ್ ನಲ್ಲಿ ಬರುವ ಉಲ್ಕಾಪಾತವಾದರೂ ಆದಿತ್ಯ ವಾರ ಅಮಾವಾಸ್ಯೆಯ ಹತ್ತಿರದ ರಾತ್ರಿ , ಆಕಾಶದಲ್ಲಿ ಚಂದ್ರ ಇಲ್ಲದಿರುವುದರಿಂದ ನೋಡಲು ಬಲು ಚೆಂದ. ಗಂಟೆಗೆ 120 ಉಲ್ಕೆ ಗಳು ಮಧ್ಯರಾತ್ರಿಗೆ ಕಾಣಬಹುದು.

ಮಿಥುನ ರಾಶಿಯ ನೇರಕ್ಕೆ,  ಪುನರ್ವಸು ನಕ್ಷತ್ರದಿಂದ ಬಂದಂತೆ  ಕಾಣುವ ಈ ಉಲ್ಕೆ ಗಳು  (ಸಣ್ಣಕಲ್ಲು ,ಧೂಳಿನ ಕಣಗಳು) , ಸುಮಾರು 70 ಕಿಮೀ ಎತ್ತರದಲ್ಲೇ  ಆಕಾಶದಲ್ಲೇ ಉರಿದು ಹೋಗುತ್ತವೆ.ನಮ್ಮ ವಾತಾವರಣದ ಕವಚದಲ್ಲಿ ಘರ್ಷಣೆ ಯಿಂದ ಭೂಮಿಗೆ ಬೀಳುವಾಗಲೇ ಆಕಾದಲ್ಲೇ ಸುಟ್ಟು ಉರಿದು ಹೋಗುತ್ತವೆ. ಇದು  ಮಂಗಳ ,ಗುರು ಗ್ರಹಗಳ ನಡುವೆ ಇರುವ ಅಸ್ಟರೋಯ್ಡ್ ಬೆಲ್ಟನಿಂದ 1.4 ವರ್ಷಕ್ಕೊಮ್ಮೆ ಸೂರ್ಯನಿಗೆ ಸುತ್ತುವ, 3200 ಪೇಥಾನ್ ಆಸ್ಟರೊಯ್ಡ ನ (ರೋಕೀ ಕೋಮೆಟ್ rocky comet) ತುಣುಕುಗಳು. ಈ ಧೂಮಕೇತು ಸೂರ್ಯನ ಸುತ್ತ ಬಂದು ಹೋಗುವಾಗ ಕೆಲ ಕಲ್ಲು ಧೂಳಿನ ಕಣಗಳನ್ನು ಬಿಟ್ಟು ಹೋಗಿರುತ್ತದೆ. ಆ ದಾರಿಯಲ್ಲಿ ಭೂಮಿ ಕ್ರಮಿಸುವಾಗ ,ಆ ಕಣಗಳೆಲ್ಲ, ಗುರುತ್ವಾಕರ್ಷಣೆ ಯಿಂದ ಭೂಮಿಗೆ ಬೀಳುತ್ತದೆ. ಬೀಳುವಾಗಲೇ ವಾತಾವರಣ ದಲ್ಲಿ ಘರ್ಷಣೆ ಯಿಂದ ಸುಟ್ಟು ಹೋಗುತ್ತವೆ.
ಪ್ರತೀ ವರ್ಷ ಕ್ಕೊಮ್ಮೆ ಸುಮಾರು 15 ಉಲ್ಕಾಪಾತಗಳು ನಡೆಯುತ್ತವೆಯಾದರೂ ಚಂದ್ರನಿಲ್ಲದ ರಾತ್ರಿ ಮಾತ್ರ ಉಲ್ಕಾ ಪಾತ ಬಲು ಚೆಂದ. ಈ ಉಲ್ಕಾಪಾತ ಈ ವರ್ಷದ 15 ಉಲ್ಕಾಪಾತಗಳಲ್ಲೇ ಅತ್ತ್ಯುತ್ತಮ.

ಇನ್ನೊಂದು ವಿಶೇಷ ವೆಂದರೆ ಈಗ  ಸಂಜೆ ಯಾಗುತ್ತಿದ್ದಂತೆ ಪಶ್ಚಿಮ ಆಕಾಶದಲ್ಲಿ ಗುರು ಹಾಗೂ ಶನಿ ಗ್ರಹಗಳ ಯುತಿ. ಬಲು ಅಪರೂಪದ ಆಕಾಶ ವಿದ್ಯಾಮಾನ.( ಸುಮಾರು 800 ವರ್ಷ ಗಳಲ್ಲಿ ಬರುವುದು). ಡಿಸೆಂಬರ್ 21 ರಂದು ಅವು ಒಂದೇ ಗ್ರಹವೋ ಎನ್ನುವಷ್ಟು ಹತ್ತಿರವಿರುತ್ತವೆ.

 ಹಾಗಾಗಿ ಆದಿತ್ಯ ವಾರ ಸಂಜೆ 7 ಗಂಟೆಯಿಂದಲೇ ಆಕಾಶ ನೋಡಲು ಪ್ರಾರಂಭಿಸಿ. ಪ್ರಾರಂಭದಲ್ಲಿ ಪಶ್ಚಿಮದಲ್ಲಿ ಗುರು ಶನಿ ಯುತಿಯ ಎರಡು ದೀಪಗಳು. 9 ಗಂಟೆಯ ನಂತರ ಪೂರ್ವ ಆಕಾಶ ನೋಡಿ  ,  ಕ್ಷಣ ಕ್ಷಣಕ್ಕೂ ಓಡುವ ಅನೇಕಾನೇಕ ಬೆಳಕಿನ ಹುಡಿಗಳು.ಮಧ್ಯರಾತ್ರಿ ಯವರೆಗೆ. ಇದೊಂದು ಆಕಾಶವೀಕ್ಷಕರಿಗೆ ಸುವರ್ಣಾವಕಾಶ. ಮೋಡ ವಿಲ್ಲದಿದ್ದರೆ  ಶುಭ್ರ ಕತ್ತಲಿನ ರಾತ್ರಿ ಆಕಾಶದಲ್ಲಿ ಬಲು ಚೆಂದ. ಶಬ್ದವಿಲ್ಲದ ದುರ್ಸು,  ಆಕಾಶದ ತುಂಬಾ ಬೆಳಕಿನ ಕಿಡಿಗಳ ನರ್ತನ.ನೋಡಿ ಆನಂದಿಸಿ ಪ್ರಕ್ರತಿಯ ಲಕ್ಷದೀಪೋತ್ಸವ.
ಡಾ ಎ. ಪಿ. ಭಟ್, ಉಡುಪಿ

Leave a Reply

Your email address will not be published. Required fields are marked *

error: Content is protected !!