ದ.ಕ.,ಉಡುಪಿ ಜಿಲ್ಲೆ ಹೊರಗೆ ಕಂಬಳ ವಿರೋಧಿಸಿ ಸಲ್ಲಿಸಿದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳನ್ನು ಹೊರತುಪಡಿಸಿ ಕರ್ನಾಟಕದ ಇತರ ಭಾಗಗಳಲ್ಲಿ ಕಂಬಳ ನಡೆಸುವ ವಿರುದ್ಧ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ.

ಇದನ್ನು ರಾಜ್ಯದ ಒಂದು ನಿರ್ದಿಷ್ಟ ಪ್ರದೇಶಕ್ಕೆ ಮಾತ್ರ ಯಾಕೆ ಸೀಮಿತಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.

ಕರ್ನಾಟಕ ಉಚ್ಚ ನ್ಯಾಯಾಲಯದ ನವೆಂಬರ್ 14ರ ಆದೇಶ ಪ್ರಶ್ನಿಸಿ ‘ಪೀಪಲ್ಸ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಎನಿಮಲ್ ಇಂಡಿಯಾ’ (ಪೆಟಾ ಇಂಡಿಯಾ) ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಹಾಗೂ ಸಂದೀಪ್ ಮೆಹ್ತಾ ಅವರ ಪೀಠ ವಿಚಾರಣೆ ನಡೆಸಿತು.

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಹೊರಗೆ ಯಾವುದೇ ಸ್ಥಳಗಳಲ್ಲಿ ಕಂಬಳ ನಡೆಸಲು ಕರ್ನಾಟಕ ಸರಕಾರ ಅಧಿಸೂಚನೆ ಹೊರಡಿಸುವುದನ್ನು ತಡೆಯುವಂತೆ ಕೋರಿ ಸಲ್ಲಿಸಿದ ಅರ್ಜಿಯನ್ನು ಉಚ್ಚ ನ್ಯಾಯಾಲಯ ವಜಾಗೊಳಿಸಿತ್ತು.

‘‘ಅವರು ರಾಜ್ಯದ ವಿವಿಧ ಭಾಗಗಳಲ್ಲಿ ಸಂಸ್ಕೃತಿಯನ್ನು ಪ್ರದರ್ಶಿಸಲು ಬಯಸಿದರೆ, ಅದರಲ್ಲಿ ತಪ್ಪೇನು ? ರಾಜ್ಯದ ಇತರ ಭಾಗಗಳ ಜನರಿಗೆ ಕೂಡ ಆ ಸಂಸ್ಕೃತಿ ಪರಿಚಯವಾಗಲಿ. ಅದನ್ನು ನಿರ್ದಿಷ್ಟ ಪ್ರದೇಶಗಳಿಗೆ ಮಾತ್ರ ಯಾಕೆ ಸೀಮಿತಗೊಳಿಸಬೇಕು?’’ ಎಂದು ನ್ಯಾಯಮೂರ್ತಿ ಮೆಹ್ತಾ ಅಭಿಪ್ರಾಯಿಸಿದ್ದಾರೆ.

ಈ ಸಂದರ್ಭ ಪೆಟಾ ಇಂಡಿಯಾದ ವಕೀಲರು ರಾಜ್ಯ ಈ ಹಿಂದೆ ಸಲ್ಲಿಸಿದ ಅಫಿಡವಿಟ್ ಅನ್ನು ಉಲ್ಲೇಖಿಸಿದರು. ಇದು ಕರ್ನಾಟಕದ ಎರಡು ಕರಾವಳಿ ಜಿಲ್ಲೆಗಳ ಸಾಂಪ್ರದಾಯಿಕ ಕ್ರೀಡೆಯಾಗಿದೆ ಎಂದು ಅಫಿಡಾವಿಟ್ ನಲ್ಲಿ ಹೇಳಲಾಗಿದೆ ಎಂದರು.

‘‘ಬೆಂಗಳೂರಿನ ಸಂಪ್ರದಾಯ ಹಾಗೂ ಸಂಸ್ಕೃತಿಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ’’ ಎಂದು ಅವರು ಹೇಳಿದರು. ಈಗ ಕಂಬಳ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಅವರು ಪ್ರತಿಪಾದಿಸಿದರು.

ಅರ್ಜಿಯನ್ನು ವಜಾಗೊಳಿಸಿದ ಪೀಠ, ನಾವು ಪೆಟಾಕ್ಕೆ ಕೂಡ ಕೆಲವು ಪ್ರಶ್ನೆಗಳನ್ನು ಕೇಳಬಹುದಾಗಿದೆ ಎಂದಿತು.

Leave a Reply

Your email address will not be published. Required fields are marked *

error: Content is protected !!