ಯುಎಇ: ಗಗನಕ್ಕೇರಿದ ತರಕಾರಿ – ಹಣ್ಣು ಹಂಪಲುಗಳ ಬೆಲೆ, ಸಂಘರ್ಷ ಮುಂದುವರಿದರೆ ಇನ್ನಷ್ಟು ಏರಿಕೆ ಸಾಧ್ಯತೆ!

ದುಬೈ: ಅಮೇರಿಕ-ಇಸ್ರೇಲ್ ಹಾಗು ಇರಾನ್ ಮಧ್ಯೆ ನಡೆಯುತ್ತಿರುವ ಯುದ್ಧದ ಪರಿಣಾಮ ಯುಎಇಯಲ್ಲಿ ದಿನನಿತ್ಯ ವಸ್ತುಗಳ ಬೆಲೆ ಏರಿಕೆ ಆಗಿದ್ದು, ಜನರಿಗೆ ಇನ್ನೊಂದು ಸಂಕಷ್ಟ ಎದುರಾಗುವಂತೆ ಮಾಡಿದೆ.

ಯುಎಇಯಾದ್ಯಂತ ಒಂದೆಡೆ ಜನ ಯುದ್ಧದ ಪರಿಣಾಮಗಳ ಆತಂಕದಲ್ಲಿದ್ದರೆ, ಇನ್ನೊಂದೆಡೆ ಬೆಲೆ ಏರಿಕೆಯ ಬಿಸಿ ಜನರನ್ನು ಕಂಗಾಲಾಗುವಂತೆ ಮಾಡಿದೆ. ಹೈಪರ್ ಮಾರ್ಕೆಟ್, ಸೂಪರ್ ಮಾರ್ಕೆಟ್ ಸೇರಿದಂತೆ ಎಲ್ಲ ಕಡೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ.

ಯುಎಇ ಮೇಲೆ ಇರಾನ್ ನಡೆಸುತ್ತಿರುವ ಡ್ರೋನ್ ಮತ್ತು ಮಿಸೈಲ್‌ ದಾಳಿ ಮುಂದುವರಿಸಿದ್ದರೂ, ಅದನ್ನು ಆಕಾಶದಲ್ಲಿಯೇ ಹೊಡೆದುರುಳಿಸಲಾಗುತ್ತಿದೆ. ಇದರ ಶಬ್ದ ಜನರಲ್ಲಿ ಒಂದು ರೀತಿಯ ಭಯವನ್ನುಂಟು ಮಾಡುತ್ತಿದೆ.

ಇದರ ಮಧ್ಯೆ ಸೋಮವಾರ ತರಕಾರಿ, ಹಣ್ಣುಹಂಪಲು, ಕೋಳಿ ಮಾಂಸದ ಬೆಲೆ ದುಪ್ಪಟ್ಟಾಗಿದೆ. ರಮಝಾನ್ ಹಿನ್ನೆಲೆಯಲ್ಲಿ ತರಕಾರಿ, ಹಣ್ಣುಹಂಪಲು, ಮಾಂಸ ಖರೀದಿಸುವ ಜನರಿಗೆ ಬೆಲೆ ಏರಿಕೆ ಶಾಕ್ ನೀಡಿದಂತಾಗಿದೆ.

ಈ ಹಿಂದೆ ಪ್ರತೀ ಕೆಜಿಗೆ 2 ರಿಂದ 3 ದಿರ್ಹಾಂ ಇದ್ದ ಟೊಮಾಟೊ ಬೆಲೆ ಈವತ್ತು 5 ರಿಂದ 6 ದಿರ್ಹಾಂ ಆಗಿದ್ದು, 2 ರಿಂದ 3 ದಿರ್ಹಾಂ ಇದ್ದ ಈರುಳ್ಳಿ ಬೆಲೆ ಕೆಜಿಗೆ 6 ರಿಂದ 7 ದಿರ್ಹಾಂ ಆಗಿದೆ. ಅದೇ ರೀತಿ ಆಲೂಗಡ್ಡೆ ಬೆಲೆ ಕೂಡ ಎರಡು ಪಟ್ಟು ಜಾಸ್ತಿ ಆಗಿದೆ. 9 ರಿಂದ 10 ದಿರ್ಹಾಂ ವರಗೆ ಇದ್ದ ಕೋಳಿ ಮಾಂಸ 17 ದಿರ್ಹಾಂ ಆಗಿದೆ. ಮೆಣಸು, ಶುಂಠಿ, ಬೆಳ್ಳುಳ್ಳಿ ಸೇರಿದಂತೆ ಎಲ್ಲ ತರಕಾರಿಗಳ ಬೆಲೆ ಗಗನಕ್ಕೇರಿದೆ. ಜೊತೆಗೆ ಸೇಬು, ದ್ರಾಕ್ಷಿ, ಕಲ್ಲಂಗಡಿ, ಬಾಳೆಹಣ್ಣು, ದಾಳಿಂಬೆ, ಕಿತ್ತಳೆ ಸೇರಿದಂತೆ ಬಹುತೇಕ ಹಣ್ಣು ಹಂಪಲುಗಳ ಬೆಲೆ ಕೂಡ ಕೈಗೆಟಕದಂತಾಗಿದೆ.

ವಿಮಾನ ಹಾರಾಟ, ಹಡಗು ಸಂಚಾರ ಸ್ಥಗಿತಗೊಂಡಿರುವುದರಿಂದ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ಈಜಿಪ್ಟ್, ಇರಾನ್, ಗಾನ, ಕೀನ್ಯಾ ಸೇರಿದಂತೆ ನಾನಾ ಕಡೆಗಳಿಂದ ಯುಎಇಗೆ ಬರುತ್ತಿದ್ದ ತರಕಾರಿ, ಹಣ್ಣುಹಂಪಲುಗಳ ಸರಬರಾಜು ಕೂಡ ಸ್ಥಗಿತಗೊಂಡಿದ್ದು, ಬೇಡಿಕೆ ಜಾಸ್ತಿ ಇರುವುದರಿಂದ ದಿನನಿತ್ಯ ವಸ್ತುಗಳ ಬೆಲೆ ಕೂಡ ಗಗನಕ್ಕೇರಿದೆ ಎನ್ನುತ್ತಾರೆ ಹೈಪರ್ ಮಾರ್ಕೆಟ್, ಸೂಪರ್ ಮಾರ್ಕೆಟ್ ಗಳ ಮೇಲ್ವಿಚಾರಕರು.

ಸಂಘರ್ಷ ಇದೇ ರೀತಿ ಮುಂದುವರಿದರೆ ದಿನನಿತ್ಯ ವಸ್ತುಗಳ ಬೆಲೆ ಇನ್ನಷ್ಟು ಏರಿಕೆ ಆಗಲಿದ್ದು, ಇದರಿಂದ ಜನ ಸಾಮಾನ್ಯರು ಇನ್ನಷ್ಟು ದೊಡ್ಡ ಸಮಸ್ಯೆಯನ್ನು ಎದುರಿಸುವುದು ಖಚಿತ ಎನ್ನುತ್ತಾರೆ ಶಾರ್ಜಾದ ಸೂಪರ್ ಮಾರ್ಕೆಟ್ ವೊಂದರ ಸಿಬ್ಬಂದಿ.

Leave a Reply

Your email address will not be published. Required fields are marked *

error: Content is protected !!