ಅಮೆರಿಕ–ಇಸ್ರೇಲ್ ದಾಳಿಯು ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆ: ಇರಾನ್ ಆಕ್ರೋಶ
ಟೆಹ್ರಾನ್: ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಮಿಲಿಟರಿ ದಾಳಿಗಳು ಅಂತರರಾಷ್ಟ್ರೀಯ ಕಾನೂನು ಹಾಗೂ ವಿಶ್ವಸಂಸ್ಥೆ ಘೋಷಣಾಪತ್ರದ ತತ್ವಗಳ ಸ್ಪಷ್ಟ ಉಲ್ಲಂಘನೆಯಾಗಿವೆ ಎಂದು ಇರಾನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಶನಿವಾರ ಬೆಳಿಗ್ಗೆ ನಡೆದ ಇಸ್ರೇಲಿ ದಾಳಿಗಳು ದೇಶದ “ಪ್ರಾದೇಶಿಕ ಸಮಗ್ರತೆ ಮತ್ತು ರಾಷ್ಟ್ರೀಯ ಸಾರ್ವಭೌಮತ್ವವನ್ನು ಗುರಿಯಾಗಿಸಿಕೊಂಡಿವೆ” ಎಂದು ಇರಾನ್ ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ಆರೋಪಿಸಿದೆ.
“ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ವಿರುದ್ಧ ಅಮೆರಿಕ ಮತ್ತು ಯಹೂದಿ ಆಡಳಿತ ನಡೆಸಿದ ಈ ಮಿಲಿಟರಿ ಆಕ್ರಮಣವು ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಸ್ಪಷ್ಟ ಧಕ್ಕೆಯಾಗಿದೆ. ಈ ದಾಳಿಯನ್ನು ನಾವು ಅಂತರರಾಷ್ಟ್ರೀಯ ಕಾನೂನು ಉಲ್ಲಂಘನೆ ಎಂದು ಪರಿಗಣಿಸುತ್ತೇವೆ. ಇದಕ್ಕೆ ನಿರ್ಣಾಯಕವಾಗಿ ಪ್ರತಿಕ್ರಿಯಿಸುವ ಕಾನೂನುಬದ್ಧ ಹಕ್ಕನ್ನು ಇರಾನ್ ಹೊಂದಿದೆ,” ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಗಳು “ಸಶಸ್ತ್ರ ಆಕ್ರಮಣದ ಸ್ಪಷ್ಟ ಉದಾಹರಣೆ” ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಆತ್ಮರಕ್ಷಣೆಯ ಹಕ್ಕಿನ ಕುರಿತು ವಿಶ್ವಸಂಸ್ಥೆಯ ಘೋಷಣಾಪತ್ರದ 51ನೇ ವಿಧಿಯನ್ನು ಇರಾನ್ ಉಲ್ಲೇಖಿಸಿದೆ.
“ಉದ್ವಿಗ್ನತೆ ತಪ್ಪಿಸಲು ಮತ್ತು ಪ್ರಾದೇಶಿಕ ಸ್ಥಿರತೆಯನ್ನು ಕಾಪಾಡಲು ಇರಾನ್ ದೇಶವು ಸದಾ ತಾಳ್ಮೆ ಮತ್ತು ಸಂಯಮ ತೋರಿಸಿದೆ,” ಎಂದು ಹೇಳಿಕೆಯಲ್ಲಿ ಹೇಳಲಾಗಿದೆ. ಆದರೆ, ದೇಶದ ಸಶಸ್ತ್ರ ಪಡೆಗಳು ದೇಶವನ್ನು ರಕ್ಷಿಸಲು ಸಂಪೂರ್ಣವಾಗಿ ಸಿದ್ಧವಾಗಿವೆ. ಆಕ್ರಮಣಕಾರರು ತಮ್ಮ ಕ್ರಮಗಳಿಗೆ ವಿಷಾದಿಸುವಂತೆ ಮಾಡುವಲ್ಲಿ ನಾವು ಹಿಂಜರಿಯುವುದಿಲ್ಲ ಎಂದು ಇರಾನ್ ಎಚ್ಚರಿಕೆ ನೀಡಿದೆ.
“ಇರಾನಿಯನ್ನರು ಎಂದಿಗೂ ಆಕ್ರಮಣಕ್ಕೆ ಶರಣಾಗಿಲ್ಲ ಎಂಬುದನ್ನು ಇತಿಹಾಸವೇ ತೋರಿಸಿದೆ. ಈ ಬಾರಿಯೂ ಇರಾನ್ ನ ಪ್ರತಿಕ್ರಿಯೆ ನಿರ್ಣಾಯಕವಾಗಿರಲಿದೆ; ಆಕ್ರಮಣಕಾರರು ತಮ್ಮ ಪ್ರತಿಕೂಲ ಕ್ರಮಗಳಿಗೆ ವಿಷಾದಿಸಬೇಕಾಗುತ್ತದೆ,” ಎಂದು ಸಚಿವಾಲಯ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.





