ಫೆ.14 -15: ಧಾರ್ಮಿಕ, ಸಾಮಾಜಿಕ, ಸಾಹಿತ್ಯ ಮನರಂಜನೆಯ “ಶಿವಪಾಡಿ ವೈಭವ”

ಮಣಿಪಾಲ: ಕಳೆದ ಶಿವರಾತ್ರಿ ಮಹೋತ್ಸವದಲ್ಲಿ ಜನಾಕರ್ಷಣೆ ಕೇಂದ್ರವಾಗಿದ್ದ ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಈ ಬಾರಿಯೂ ಅಭಿವೃದ್ಧಿ ಟ್ರಸ್ಟ್​ ವತಿಯಿಂದ “ಶಿವಪಾಡಿ ವೈಭವದ” ಆಚರಣೆ ಮಾಡಲು ನಿರ್ಧರಿಸಿದೆ.

ಈ ಬಾರಿ ಸಮಿತಿಯ ಆಶ್ರಯದಲ್ಲಿ ಫೆ. 14 ಮತ್ತು 15ರಂದು ಧಾರ್ಮಿಕ, ಸಾಮಾಜಿಕ, ಸಾಹಿತ್ಯ ಹಾಗೂ ಮನರಂಜನಾ ಕಾರ್ಯಕ್ರಮಗಳೊಂದಿಗೆ ಶಿವಪಾಡಿ ವೈಭವ ವಿಜೃಂಭಣೆಯಿಂದ ಜರುಗಲಿದೆ ಎಂದು ಸಮಿತಿ ಅಧ್ಯಕ್ಷ ಕೆ. ರಘುಪತಿ ಭಟ್​ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಫೆ. 14 ರಂದು ಆರೋಗ್ಯ ಮತ್ತು ಸಾಹಿತ್ಯದ ಹಬ್ಬ: ಬೆಳಗ್ಗೆ 9:30ಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಆರೋಗ್ಯ ಶಿಬಿರದ ಉದ್ಘಾಟನೆ  ಮಧ್ಯಾಹ್ನ 2 ರಿಂದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸಂಸ್ಥೆಯ ವತಿಯಿಂದ ಆರೋಗ್ಯ ಶಿಬಿರ ಹಾಗೂ ಯೋಗಾಭ್ಯಾಸ ಶಿಬಿರ. 2.30ಕ್ಕೆ  ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ, 3ರಿಂದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ ನಡೆಯಲಿದೆ. 6 ಗಂಟೆಗೆ ಸಭಾ ಕಾರ್ಯಕ್ರಮದಲ್ಲಿ ಮಾಹೆಯ ಸಹಕುಲಾಧಿಪತಿ ಡಾ. ಎಚ್​.ಎಸ್​. ಬಲ್ಲಾಳ್​ ಭಾಗವಹಿಸಲಿದ್ದಾರೆ ಎಂದರು.

ಫೆ.15: ಬೆಳಿಗ್ಗೆ 5 ರಿಂದ 7ರವರೆಗೆ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಸಾಮೂಹಿಕ ಯೋಗ ಶಿಬಿರ ನಡೆಯಲಿದೆ. 9.30ಕ್ಕೆ ಪ್ರಸಾದ್​ ನೇತ್ರಾಲಯದಿಂದ ಉಚಿತ ಕಣ್ಣಿನ ತಪಾಸಣೆ, ಶಸ್ತ್ರಚಿಕಿತ್ಸೆ ಹಾಗೂ ಉಚಿತ ಕನ್ನಡಕ ವಿತರಣೆ ನಡೆಯಲಿದೆ. ಮಧ್ಯಾಹ್ನ 3ಕ್ಕೆ ‘ಶಿವ ಸಹಸ್ರ ಕಂಠ ಗಾಯನ’ ಎಂಬ ವಿನೂತನ ಕಾರ್ಯಕ್ರಮ ಹಾಗೂ ಸಂಜೆ ಝೀ ಕನ್ನಡ ಸರಿಗಮಪ ತಂಡದಿಂದ ‘ಗಾನ ಶರಧಿ’ ಸಂಗೀತ ರಸಮಂಜರಿ ಮತ್ತು ಅಹೋರಾತ್ರಿ ಯಕ್ಷಗಾನ ನಡೆಯಲಿದೆ.

ಸಂಜೆ 5.30ಕ್ಕೆ ಸಭಾ ಕಾರ್ಯಕ್ರಮದಲ್ಲಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಧಾರ್ಮಿಕ ವಿಧಿವಿಧಾನಗಳು

ಶನಿವಾರ ಮತ್ತು ಭಾನುವಾರ ದೇವಸ್ಥಾನದಲ್ಲಿ ಪ್ರಾತ:ಕಾಲದ ಪೂಜೆ, ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಮಹಾರುದ್ರ ಪೂಜೆ, ಅಖಂಡ ಶ್ರೀ ರುದ್ರ ಪಾರಾಯಣ ಹಾಗೂ ಅನ್ನ ಸಂತರ್ಪಣೆ ನೆರವೇರಲಿದೆ. ಭಾನುವಾರ ವಿಶೇಷವಾಗಿ ಅಷ್ಟೋತ್ತರ ಸಹಸ್ರ ಬಿಲ್ವಾರ್ಚನೆ ಹಾಗೂ ಮಹಾ ರಂಗಪೂಜೆ ನಡೆಯಲಿದೆ. ಕಾರ್ಯಕ್ರಮದ ಅಂಗವಾಗಿ ಭಕ್ತಾದಿಗಳಿಗಾಗಿ 250ಕ್ಕೂ ಅಧಿಕ ಮಳಿಗೆಗಳನ್ನು ತೆರೆಯಲಾಗುವುದು. ಇದರಲ್ಲಿ ಕೃಷಿ ಪರಿಕರಗಳು, ಆಹಾರ ಮಳಿಗೆಗಳು ಹಾಗೂ ವಸ್ತು ಪ್ರದರ್ಶನ ಇರಲಿದೆ. ಮನರಂಜನೆಗಾಗಿ ವಿಶೇಷ ಅಮ್ಯೂಸ್​ಮೆಂಟ್​ ಪಾರ್ಕ್​ ವ್ಯವಸ್ಥೆ ಮಾಡಲಾಗಿದೆ ಎಂದು ಆಡಳಿತ ಮೊಕ್ತೇಸರ ಮಹೇಶ್​ ಠಾಕೂರ್​ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್​ ಅಧ್ಯಕ್ಷ ದಿನೇಶ್​ ಪ್ರಭು, ಟ್ರಸ್ಟಿ ದಿನೇಶ್​ ಸಾಮಂತ್​, ಪ್ರಮುಖರಾದ ಗೋಪಾಲಕೃಷ್ಣ ಪ್ರಭು, ಸಂಜಯ್​ ಪ್ರಭು, ಪ್ರಕಾಶ್​ ಕುಕ್ಕೆಹಳ್ಳಿ, ಸತೀಶ್​ ಪಾಟೀಲ್​, ಶಿವಾನಂದ ಪ್ರಭು, ಶ್ರೀಕಾಂತ್​ ಪ್ರಭು, ಅಶೋಕ್​ ಸಾಮಂತ್​, ಪ್ರಕಾಶ್​ ಪ್ರಭು ಮೊದಲಾದವರು ಉಪಸ್ಥಿತರಿದ್ದರು. 

Leave a Reply

Your email address will not be published. Required fields are marked *

error: Content is protected !!