ಸಮಗ್ರ ಗ್ರಾಮಾಭಿವೃದ್ಧಿಗಾಗಿ ಬಿಜೆಪಿ ಬೆಂಬಲಿತ ಗ್ರಾ.ಪಂ. ಅಭ್ಯರ್ಥಿಗಳನ್ನು ಗೆಲ್ಲಿಸಿ: ಭಟ್

ಉಡುಪಿ: ಗ್ರಾಮಗಳ ಉದ್ಧಾರವೇ ದೇಶದ ಉದ್ಧಾರ. ಇಂದು ಗ್ರಾಮ ಪಂಚಾಯತ್ ಸಹಿತ ವಿವಿಧ ಸ್ತರದ ಸ್ಥಳೀಯಾಡಳಿತ ಸಂಸ್ಥೆಗಳು, ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಅಭಿವೃದ್ಧಿ ಪರ ಆಡಳಿತವಿದೆ. ಈ ಪರ್ವ ಕಾಲದಲ್ಲಿ ಗ್ರಾಮಗಳ ಸಮಗ್ರ ಅಭಿವೃದ್ಧಿಗಾಗಿ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಅಭ್ಯರ್ಥಿಗಳನ್ನು ಗರಿಷ್ಠ ಸಂಖ್ಯೆಯಲ್ಲಿ ಗೆಲ್ಲಿಸಿಕೊಡುವ ಮೂಲಕ ಜನತೆ ಗ್ರ್ರಾಮಾಭಿವೃದ್ಧಿಗೆ ತಮ್ಮ ಅಮೂಲ್ಯ ಕೊಡುಗೆ ನೀಡಬೇಕು ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ಹೇಳಿದರು.

ಅವರು ಪಂದುಬೆಟ್ಟುನಲ್ಲಿ ನಡೆದ ಅಂಬಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಕ್ಷದ ಪ್ರಮುಖರು, ಗ್ರಾ.ಪಂ. ಚುನಾವಣಾ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ಅಭಿವೃದ್ಧಿಗೆ ಇನ್ನೊಂದು ಹೆಸರು ಬಿಜೆಪಿ ಎಂಬ ರೀತಿಯಲ್ಲಿ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರಕಾರಗಳು ವಿನೂತನ ಜನಪರ ಯೋಜನೆಗಳ ಅನುಷ್ಠಾನ ಮತ್ತು ವಿಶಿಷ್ಟ ಕಾರ್ಯ ಸಾಧನೆಗಳ ಮೂಲಕ ಸರ್ವಸ್ಪರ್ಶಿ ಸರ್ವ ವ್ಯಾಪಿಯಾಗಿ ದಾಖಲೆಯ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿವೆ. ಉಜ್ವಲ ಉಚಿತ ಗ್ಯಾಸ್ ವಿತರಣೆ, ಕೃಷಿ ಸಮ್ಮಾನ್ ಯೋಜನೆ, ಕೊರೊನಾ ಸಂಕಷ್ಟ ಸಂದರ್ಭದಲ್ಲಿ ಸಹಾಯ ಹಸ್ತ, ಆರ್ಥಿಕ ಪುನಶ್ಚೇತನಕ್ಕೆ ಸಹಾಯ ಧನ, ಸ್ವೋಉದ್ಯೋಗ ಸೃಷ್ಠಿಸುವ ಆತ್ಮನಿರ್ಬರ ಭಾರತ ಯೋಜನೆ, ರೈತ ಸ್ನೇಹಿಯಾಗಿರುವ ನೂತನ ಕೇಂದ್ರ ಕೃಷಿ ಕಾಯ್ದೆ, ಭೂಸುಧಾರಣೆ ತಿದ್ದುಪಡಿ ಕಾಯ್ದೆ, ಗೋಹತ್ಯೆ ನಿಷೇಧ ಮಸೂದೆ, ಗ್ರಾಮಾಂತರ ರಸ್ತೆಗಳ ಉನ್ನತೀಕರಣ ಇವೇ ಮುಂತಾದ ಜನಪರ, ಅಭಿವೃದ್ಧಿ ಪರ ನಡೆ ಜನಮಾನಸದಲ್ಲಿ ಬಿಜೆಪಿ ನೇತೃತ್ವದ ಆಡಳಿತದಲ್ಲಿ ಭರವಸೆ ಮೂಡಿಸಿವೆ ಎಂದರು.

ಗ್ರಾಮ ಪಂಚಾಯತ್ ಚುನಾವಣೆ ಕಾರ್ಯಕರ್ತರನ್ನು ನಾಯಕರನ್ನಾಗಿಸುವ ಚುನಾವಣೆ. ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರಕಾರ ಆಡಳಿತಕ್ಕೆ ಬಂದ ಬಳಿಕ ಗ್ರಾಮಾಂತರ ಪ್ರದೇಶಗಳಲ್ಲಿ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಅಭಿವೃದ್ಧಿಯ ಶಖೆ ಆರಂಭಗೊಂಡಿದೆ. ಕಡೆಕಾರು-ಅಂಬಲಪಾಡಿ ಪ್ರದೇಶದಲ್ಲಿ ರೂ.5 ಕೋಟಿ ಅನುದಾನದಲ್ಲಿ ನದಿದಂಡೆ ರಚನೆ ಕಾಮಗಾರಿಗೆ ಟೆಂಡರ್ ಮಂಜೂರಾತಿಗೊಂಡು ಕಾಮಗಾರಿ ಪ್ರಾರಂಭಗೊಂಡಿದೆ. ವಾರಾಹಿ ಕುಡಿಯುವ ನೀರಿನ ಯೋಜನೆಯು 2022 ಮಾರ್ಚ್‌ನಲ್ಲಿ ಸಂಪೂರ್ಣಗೊಳ್ಳಲಿದ್ದು ಉಡುಪಿ ನಗರದಿಂದ ಅಂಬಲಪಾಡಿ ಗ್ರಾ.ಪಂ. ಸಹಿತ ಉಡುಪಿ ವಿಧಾನಸಭಾ ಕ್ಷೇತ್ರದ ಎಲ್ಲ ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಗೂ ನಿರಂತರ ಶುದ್ಧ ನೀರು ಪೂರೈಕೆಗೆ ಸುವ್ಯವಸ್ಥೆ ಮಾಡಲಾಗುವುದು.

ಅಂಬಲಪಾಡಿ ಗ್ರಾ.ಪಂ. ವ್ಯಾಪ್ತಿಯ ಕಸ ನಿರ್ವಹಣೆಯನ್ನು ಉಡುಪಿ ನಗರಸಭೆಯ ಮಾದರಿಯಲ್ಲೇ ಕರ್ವಾಲು ಘಟಕದ ಮೂಲಕ ನಿರ್ವಹಿಸಲು ಕ್ರಮ ಕೈಗೊಳ್ಳಲಾಗುವುದು. ಅಂಬಲಪಾಡಿ ಗ್ರಾ.ಪಂ.ಗೆ ಸಂಪರ್ಕ ಕೊಂಡಿಯಾಗಿರುವ ಆದಿವುಡುಪಿ-ಮಲ್ಪೆ ರಾಜ್ಯ ಹೆದ್ದಾರಿಯನ್ನು 100 ಫೀಟ್ ಅಗಲೀಕರಣಗೊಳಿಸಿ ಅಭಿವೃದ್ಧಿಪಡಿಸಲು ರೂ. 91 ಕೋಟಿ ಅನುದಾನ ಮಂಜೂರಾಗಿದ್ದು ಭೂಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ. ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರಕಾರಗಳು ಹಾಗೂ ಎಲ್ಲ ಸ್ತರದ ಜನಪ್ರತಿನಿಧಿಗಳ ಸಹಕಾರದೊಂದಿಗೆ ಎಲ್ಲಾ ಅಭಿವೃದ್ಧಿ ಕೆಲಸ ಕಾರ್ಯಗಳು ಇನ್ನಷ್ಟು ವೇಗ ಪಡೆಯಲಿವೆ. ಅಭಿವೃದ್ಧಿಯೇ ಬಿಜೆಪಿ ಗೆಲುವಿಗೆ ಶ್ರೀರಕ್ಷೆಯಾಗಿರುವ ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಸರಕಾರದ ಸಾಧನೆಗಳನ್ನು ಮನೆ ಮನೆಗೆ ತಲುಪಿಸಿ ಬಿಜೆಪಿ ಬೆಂಬಲಿತ ಎಲ್ಲಾ ಅಭ್ಯರ್ಥಿಗಳ ಅಂತರದ ಗೆಲುವಿಗೆ ಕಂಕಣಬದ್ಧರಾಗಿ ಶ್ರಮಿಸಬೇಕು ಎಂದು ಶಾಸಕ ಭಟ್ ಕರೆ ನೀಡಿದರು.

ಬಿಜೆಪಿ ಉಡುಪಿ ನಗರಾಧ್ಯಕ್ಷ ಮಹೇಶ್ ಠಾಕೂರ್ ಸಭೆಯ ಅಧ್ಯಕ್ಷತೆ ವಹಿಸಿ ಅಭ್ಯರ್ಥಿಗಳಿಗೆ ಶುಭ ಹಾರೈಸಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮನೋಹರ್ ಎಸ್. ಕಲ್ಮಾಡಿ ಮತ್ತು ಅಂಬಲಪಾಡಿ ಗ್ರಾ.ಪಂ. ಚುನಾವಣಾ ಉಸ್ತುವಾರಿ ಗಿರೀಶ್ ಎಮ್. ಅಂಚನ್ ಚುನಾವಣಾ ಪ್ರಚಾರ ಹಾಗೂ ಗೆಲುವಿನ ಕಾರ್ಯತಂತ್ರಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಉಡುಪಿ ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಬಿಜೆಪಿ ಜಿಲ್ಲಾ ಕೋಶಾಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿ, ಜಿಲ್ಲಾ ಸಹವಕ್ತಾರ ಶಿವಕುಮಾರ್ ಅಂಬಲಪಾಡಿ, ಜಿಲ್ಲಾ ಪ್ರಕೋಷ್ಠಗಳ ಸಂಯೋಜಕ ಜಗದೀಶ್ ಆಚಾರ್ಯ ಕಪ್ಪೆಟ್ಟು, ಬಿಜೆಪಿ ಉಡುಪಿ ನಗರ ಉಪಾಧ್ಯಕ್ಷ ವೆಂಕಟರಮಣ ಕಿದಿಯೂರು, ನಗರ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಮಣಿಪಾಲ್, ಚುನಾವಣಾ ಸಹ ಉಸ್ತುವಾರಿ ರೋಷನ್ ಶೆಟ್ಟಿ, ಬಿಜೆಪಿ ಅಂಬಲಪಾಡಿ-ಕಡೆಕಾರು ಮಹಾ ಶಕ್ತಿಕೇಂದ್ರದ ಅಧ್ಯಕ್ಷ ರಾಜೇಂದ್ರ ಪಂದುಬೆಟ್ಟು, ಸಹ ಸಂಚಾಲಕ ಉಮೇಶ್ ಪೂಜಾರಿ ಕುತ್ಪಾಡಿ, ಶಕ್ತಿ ಕೇಂದ್ರಗಳ ಅಧ್ಯಕ್ಷರಾದ ನಾಗರಾಜ್ ಕರ್ಕೇರ ಕಿದಿಯೂರು, ವಿಜಯ ಶೆಟ್ಟಿ ಕಪ್ಪೆಟ್ಟು, ಪಕ್ಷದ ಪ್ರಮುಖರು, ವಿವಿಧ ಸ್ತರದ ಪದಾಧಿಕಾರಿಗಳು, ಮಾಜಿ ಗ್ರಾ.ಪಂ. ಸದಸ್ಯರು, ಗ್ರಾ.ಪಂ. ಚುನಾವಣಾ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!