ರೈತರ ಪ್ರತಿಭಟನೆ: ಅಮಿತ್ ಶಾ ಜೊತೆಗೆ ನಡೆಸಿದ ಸಂಧಾನ ಕೂಡ ವಿಫಲ

ನವದೆಹಲಿ: ಕೇಂದ್ರ ಸರ್ಕಾರ ನೂತನ ಕೃಷಿ ಮಸೂದೆಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ರೈತರು ಪ್ರತಿಭಟನೆ ಮಾಡುತ್ತಿದ್ದರೆ, ತಿದ್ದುಪಡಿ ಮಾಡುವುದಾಗಿ ಸರ್ಕಾರ ನೀಡಿದ ಪ್ರಸ್ತಾವನೆಯನ್ನು ತಿರಸ್ಕರಿಸುವ ಮೂಲಕ ನಿನ್ನೆಯ 6ನೇ ಸುತ್ತಿನ ಮಾತುಕತೆ ವಿಫಲವಾಗಿದೆ. 

ನಿನ್ನೆ ಖುದ್ದು ಗೃಹ ಮಂತ್ರಿ ಅಮಿತ್ ಶಾ ರೈತರ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ್ದರು. ಆದರೆ ಯಾವುದೇ ನಿರ್ಧಾರಕ್ಕೆ ಬರುವಲ್ಲಿ ವಿಫಲವಾದರು. ಭಾರತ ಬಂದ್ ಆಚರಣೆ ದಿನವಾದ ನಿನ್ನೆ ಕೆಲವರು ಕೇಂದ್ರ ಸರ್ಕಾರದೊಂದಿಗೆ ಮಾತುಕತೆಗೆ ಹೋಗುವುದಿಲ್ಲ, ತಿರಸ್ಕರಿಸುತ್ತೇವೆ ಎಂದು ಬೆದರಿಕೆ ಹಾಕಿದ್ದ ಪ್ರಸಂಗ ಕೂಡ ನಡೆದಿತ್ತು. ಕೊನೆಗೆ ರಾತ್ರಿ ವಿಜ್ಞಾನ ಭವನದಲ್ಲಿ ಗೃಹ ಸಚಿವ ಅಮಿತ್ ಶಾ ಮತ್ತು ರೈತ ಮುಖಂಡರ ಮಧ್ಯೆ ಸಭೆ ನಡೆಯಿತು. 

ನಿನ್ನೆಯ ಸಭೆಯಲ್ಲಿ ಅಮಿತ್ ಶಾ ಅವರು ಮುಂದಿಟ್ಟ ತಿದ್ದುಪಡಿಯಲ್ಲಿ ಏನು ಪ್ರಸ್ತಾಪ ಮಾಡುತ್ತಾರೆ, ಲಿಖಿತವಾಗಿ ಸರ್ಕಾರದ ಕಡೆಯಿಂದ ಯಾವ ರೀತಿಯ ಭರವಸೆ ಸಿಗುತ್ತದೆ ಎಂದು ನೋಡಿಕೊಂಡು ತಮ್ಮ ಮುಂದಿನ ನಿರ್ಧಾರವನ್ನು ಪ್ರಕಟಿಸಲು ರೈತ ಮುಖಂಡರು ಮೊದಲೇ ನಿರ್ಧರಿಸಿದ್ದರು ಎಂದು ತಿಳಿದುಬಂದಿದೆ. 

ಮತ್ತೊಬ್ಬ ನಾಯಕ ನಿನ್ನೆ ಪ್ರತಿಕ್ರಿಯೆ ನೀಡಿ, ನಾಳೆ ಮತ್ತೆ ಮಾತುಕತೆ ನಡೆಸುವ ಸಾಧ್ಯತೆಯಿಲ್ಲ. ಲಿಖಿತವಾಗಿ ಕಾನೂನಿಗೆ ತಿದ್ದುಪಡಿ ಮಾಡಿ ತಮಗೆ ನೀಡುತ್ತೇವೆ ಎಂದು ಹೇಳಿರುವುದನ್ನು ನಾವು ಒಪ್ಪುವುದಿಲ್ಲ. ನಾವು ಮೂರು ಕೃಷಿ ಮಸೂದೆಗಳನ್ನು ಸಂಪೂರ್ಣವಾಗಿ ಹಿಂಪಡೆಯಬೇಕೆಂದು ಒತ್ತಾಯಿಸುತ್ತಿದ್ದೇವೆ. ಮತ್ತೆ ಸಭೆ ನಡೆಸುವ ಪ್ರಶ್ನೆಯೇ ಇಲ್ಲ ಎಂದಿದ್ದರು. 

ಇನ್ನೊಂದೆಡೆ ರೈತ ಸಂಘಟನೆಗಳ ಮಧ್ಯೆ ನಿನ್ನೆಯ ಸಭೆ ನಂತರ ವಿಭಜನೆಯಾಗಿರುವುದು ಕಂಡುಬರುತ್ತಿದೆ. ಕೆಲವು ರೈತ ಮುಖಂಡರು ಅಮಿತ್ ಶಾ ಅವರು ಪ್ರಸ್ತಾಪ ಮುಂದಿಟ್ಟ ಅಗತ್ಯ ತಿದ್ದುಪಡಿಗಳು ಮತ್ತು ಭರವಸೆಗಳ ಪರವಾಗಿರುವಂತೆ ಕಾಣುತ್ತಿದೆ. ಕನಿಷ್ಠ ಬೆಂಬಲ ಬೆಲೆ(ಎಂಎಸ್ ಪಿ) ಮತ್ತು ಮಂಡಿ ವ್ಯವಸ್ಥೆಗೆ ತಿದ್ದುಪಡಿ ಮಾಡುವುದು ಉತ್ತಮ ಎಂದು ಕೆಲವು ರೈತ ಸಂಘಟನೆಗಳು ಹೇಳುತ್ತಿವೆ ಎಂದು ತಿಳಿದುಬಂದಿದೆ. 

ನಿನ್ನೆ ಸಭೆ ಮುಗಿಯುವ ಹೊತ್ತಿಗೆ ಮಧ್ಯರಾತ್ರಿಯಾಗಿತ್ತು. ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅಖಿಲ ಭಾರತ ಕಿಸಾನ್ ಸಭಾದ ಪ್ರಧಾನ ಕಾರ್ಯದರ್ಶಿ ಮತ್ತು ಸಿಪಿಎಂ ನಾಯಕ ಹನ್ನನ್ ಮೊಲ್ಲ, ಸರ್ಕಾರ ಸಂಪೂರ್ಣವಾಗಿ ಮಸೂದೆ ಹಿಂಪಡೆಯುವುದಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ಅವರು ಸ್ಪಷ್ಟಪಡಿಸಿದ್ದಾರೆ. ಸರ್ಕಾರ ಕಾಯ್ದೆಗೆ ಮಾಡುತ್ತಿರುವ ತಿದ್ದುಪಡಿಯನ್ನು ಲಿಖಿತ ರೂಪದಲ್ಲಿ ನಾಳೆ ನೀಡುತ್ತೇವೆ ಎಂದು ಅಮಿತ್ ಶಾ ಹೇಳಿದ್ದಾರೆ. ಲಿಖಿತ ತಿದ್ದುಪಡಿ ನೋಡಿಕೊಂಡು 40 ರೈತ ಸಂಘಟನೆಗಳೊಂದಿಗೆ ಚರ್ಚೆ ನಡೆಸಿ ಇಂದಿನ 6ನೇ ಸುತ್ತಿನ ಸಭೆಯಲ್ಲಿ ಭಾಗವಹಿಸಬೇಕೆ, ಬೇಡವೇ ಎಂದು ನಿರ್ಧರಿಸಲಾಗುವುದು ಎಂದು ಹೇಳಿದರು.

ನಮಗೆ ತಿದ್ದುಪಡಿ ಬೇಕಾಗಿಲ್ಲ. ಸಂಪೂರ್ಣವಾಗಿ ಕಾನೂನು ಹಿಂತೆಗೆದುಕೊಳ್ಳಬೇಕು. ಇದಕ್ಕಿನ್ನು ಮಧ್ಯದ ಮಾರ್ಗವಿಲ್ಲ. ಇಂದಿನ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!