ಭಾರತ್ ಬಂದ್ ಗೆ ಸ್ಪಂದಿಸಿದ ರಾಜ್ಯದ ಜನ: ಬಹುತೇಕ ಜಿಲ್ಲೆಗಳಲ್ಲಿ ಉತ್ತಮ ಪ್ರತಿಕ್ರಿಯೆ
ಬೆಂಗಳೂರು: ಕೇಂದ್ರ ಸರ್ಕಾರದ ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತ ಸಂಘಟನೆಗಳು ಕರೆನೀಡಿರುವ ಇಂದಿನ ಭಾರತ ಬಂದ್ ಗೆ ರಾಜ್ಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಹಲವೆಡೆ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್, ಕೆಲವು ಖಾಸಗಿ ವಾಹನಗಳು ಸಂಚರಿಸುತ್ತಿದ್ದು, ಹಲವೆಡೆ ಜನಜೀವನ ಸಹಜ ಸ್ಥಿತಿಯಲ್ಲಿದೆ. ಆದರೆ ನಗರದ ವಿವಿಧ ಮೂಲೆಗಳಿಂದ ಸಾರ್ವಜನಿಕರು ಪ್ರತಿಭಟನೆ ನಡೆಸಲು ಮೈಸೂರು ಬ್ಯಾಂಕ್ ಮತ್ತು ಟೌನ್ ಹಾಲ್ ಕಡೆಗೆ ಬರುತ್ತಿರುವ ದೃಶ್ಯ ಕಂಡುಬಂದಿದೆ. ಎಲ್ಲೆಡೆ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿದೆ.
ದಾವಣಗೆರೆಯಲ್ಲಿ ಜಗಳೂರು ರಸ್ತೆ ತಡೆದು ರೈತರು ಪ್ರತಿಭಟನೆ ನಡೆಸುತ್ತಿದ್ದು, ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಳಗಾವಿ ಬಸ್ ನಿಲ್ದಾಣ ಎದುರು ಟಯರ್‌ಗೆ ಬೆಂಕಿ ಹಚ್ಚಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯು ಪ್ರತಿಭಟನೆ ನಡೆಸುತ್ತಿದೆ.
ರೈತ ವಿರೋಧಿ ಕೃಷಿ ಮಸೂದೆ ವಾಪಸ್ ಪಡೆಯುವಂತೆ ಇದೇ ವೇಳೆ ಒತ್ತಾಯಿಸಿದ ಹೋರಾಟಗಾರರು, ಬಸ್‌ಗಳ ಸಂಚಾರ ಸ್ಥಗಿತಗೊಳಿಸುವಂತೆ ಆಗ್ರಹಿಸುತ್ತಿದ್ದಾರೆ.
ಬಸ್ ನಿಲ್ದಾಣದ ಎದುರು ಬಸ್ ತಡೆದು ಪ್ರತಿಭಟನೆ ನಡೆಸಿದ್ದರಿಂದಾಗಿ, ವಿವಿಧ ಕಡೆ ತೆರಳಲು ಆಗಮಿಸಿದ ಪ್ರಯಾಣಿಕರು ಪರದಾಡುವಂತಾಯಿತು. ರಾಜ್ಯ ಮತ್ತು ಕೇಂದ್ರ ಸರ್ಕಾರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.