ಗ್ರಾಮ ಪಂಚಾಯಿತಿ ವ್ಯಾಪ್ತಿ ಜಮೀನುಗಳಲ್ಲಿ ಲೇಔಟ್‌- ಸರ್ಕಾರ ಮಹತ್ವದ ಸುತ್ತೋಲೆ ಪ್ರಕಟ

ಬೆಂಗಳೂರು: ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸ್ಥಳೀಯ ಯೋಜನಾ ಪ್ರದೇಶವನ್ನು ಹೊರತುಪಡಿಸಿದ ಭೂಪರಿವರ್ತಿತ ಜಮೀನುಗಳಲ್ಲಿ ವಸತಿಬಡಾವಣೆಗಳ (ಲೇಔಟ್‌) ನಿರ್ಮಾಣಕ್ಕೆ ಅನುಮೋದನೆ ಸಂಬಂಧ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಸ್ಪಷ್ಟ ನಿರ್ದೇಶನಗಳೊಂದಿಗೆ ಸುತ್ತೋಲೆ ಹೊರಡಿಸಿದೆ.

ಪಂಚಾಯಿತಿಗಳು ತಮ್ಮ ವ್ಯಾಪ್ತಿಯಲ್ಲಿನ ಭೂಪರಿವರ್ತಿತ ಜಮೀನುಗಳಲ್ಲಿ ವಿನ್ಯಾಸ ಅನುಮೋದನೆ ಹಾಗೂ ಅಭಿವೃದ್ಧಿ ಕಾಮಗಾರಿಗಳನ್ನು ನಿಗದಿತ ಮಾರ್ಗಸೂಚಿಗಳ ಅನ್ವಯ ಅನುಷ್ಠಾನ ಆಗಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಈ ಬಡಾವಣೆಗಳಿಗೆ ಸಂಬಂಧಿಸಿದ ಎಲ್ಲ ಅಗತ್ಯ ದಾಖಲೆ ಗಳನ್ನು ನಿರ್ವಹಿಸಿ, ತೆರಿಗೆ ವ್ಯಾಪ್ತಿಗೆ ಒಳಪಡಿಸಲು ಕ್ರಮ ವಹಿಸಬೇಕು ಎಂದು ಸೂಚನೆ ನೀಡಲಾಗಿದೆ.

ಇದರೊಂದಿಗೆ, ಸ್ಥಳೀಯ ಯೋಜನಾ ಪ್ರಾಧಿಕಾರಗಳು, ಪಂಚಾಯಿತಿಗಳು ಹಾಗೂ ಕಂದಾಯ ಇಲಾಖೆ ಈ ಮೂರೂ ವ್ಯಾಪ್ತಿಗಳಿಂದ ಹೊರಗುಳಿದಿದ್ದ ಬಡಾವಣೆ ಗಳ ನಿವಾಸಿಗಳಿಗೆ ರಿಲೀಫ್‌ ಸಿಗುವ ಜತೆಗೆ, ಪಂಚಾಯತ್‌ಗಳ ಮೂಲಕ ತೆರಿಗೆ ಸಂಗ್ರಹ ಮಾಡುವ ಹಾದಿಯೂ ಸುಸೂತ್ರವಾಗಿದೆ. ಇ – ಸ್ವತ್ತು ಜಾರಿ ಬಳಿಕ ಅದಕ್ಕೆ ಪೂರಕವಾಗಿ ಈ ಸುತ್ತೋಲೆಹೊರಡಿಸಲಾಗಿದೆ.

ಬಡಾವಣೆ ನಕ್ಷೆಗೆ ಪೂರ್ವಾನುಮೋದನೆ ಪಡೆದುಕೊಂಡಿರಬೇಕು

ಈ ಕುರಿತು ಪ್ರತಿಕ್ರಿಯಿಸಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ, ”ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ತಿದ್ದುಪಡಿ ಅಧಿನಿಯಮ -2025ರ ಸೆಕ್ಷನ್‌ 199(ಬಿ) ರಡಿ ಕಟ್ಟಡ ನಿರ್ಮಾಣ ಉದ್ದೇಶದ ನಿವೇಶನಗಳಿಗೆ ಹೊಸ ಖಾತಾ ಅಥವಾ ಪಿಐಡಿ ನೀಡಲು ಅವಕಾಶ ಕಲ್ಪಿಸಲಾಗಿದೆ. ಗ್ರಾಮ ಪಂಚಾಯತ್‌ ಅಥವಾ ಸಂಬಂಧಿತ ಸ್ಥಳೀಯ ಯೋಜನಾ ಪ್ರಾಧಿಕಾರದ ಮೂಲಕ ಬಡಾವಣೆ ನಕ್ಷೆಗೆ ಪೂರ್ವಾನುಮೋದನೆ ಪಡೆದುಕೊಂಡಿರಬೇಕು,” ಎಂದು ತಿಳಿಸಿದ್ದಾರೆ.

ಬಡಾವಣೆ ಮಾಲೀಕರು, ನಿಯಮ – 11ರಂತೆ ಅನುಮೋದಿತ ಬಡಾವಣೆಯಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ಸದ್ಯ ನಿಯಮಗಳಂತೆ ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಎಸ್ಕಾಂ ಅನುಮೋದಿತ ವಿನ್ಯಾಸದಂತೆ ದೃಢೀಕೃತ ಅಂದಾಜು ಪಟ್ಟಿಗಳ ಅನ್ವಯ ಅನುಷ್ಠಾನ ಮಾಡಬೇಕಾಗುತ್ತದೆ,” ಎಂದು ಸ್ಪಷ್ಟಪಡಿಸಿದ್ದಾರೆ.

ನಿಗದಿತ ಮಾರ್ಗಸೂಚಿ ಪಾಲನೆ ಬಳಿಕ ತೆರಿಗೆ ವ್ಯಾಪ್ತಿಗೆ

”ಬಡಾವಣೆಯ ಅಭಿವೃದ್ಧಿದಾರರು ವಿನ್ಯಾಸ ನಕ್ಷೆಯಂತೆ ರಸ್ತೆಗಳು, ಪಾರ್ಕ್, ನಾಗರಿಕ ಸೌಲಭ್ಯದ ಪ್ರದೇಶ, ಸಾರ್ವಜನಿಕ ಬಳಕೆ ಪ್ರದೇಶಗಳು ಹಾಗೂ ಇತರೆ ಮೂಲಭೂತ ಸೌಕರ್ಯಗಳ ಪ್ರದೇಶಗಳನ್ನು ಸಂಬಂಧಿತ ಗ್ರಾಮ ಪಂಚಾಯತ್‌ಗೆ ವರ್ಗಾಯಿಸ ಬೇಕು. ಎಲ್ಲ ನಿಗದಿತ ಮಾರ್ಗಸೂಚಿ ಪಾಲನೆ ಆಗಿರುವುದನ್ನು ಖಾತರಿಪಡಿಸಿಕೊಂಡು ತೆರಿಗೆ ವ್ಯಾಪ್ತಿಗೆ ಒಳಪಡಿಸಬೇಕು ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ” ಎಂದು ಸಚಿವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!