ವಿಧಾನ ಸೌಧದ ಸ್ವಚ್ಛತೆಗೆ ಅರ್ಧ ಕೋಟಿ ಖರ್ಚು ಮಾಡಿದ ಲೋಕೋಪಯೋಗಿ ಇಲಾಖೆ!
ಬೆಂಗಳೂರು: ನಮ್ಮ ಪರಿಸರವನ್ನು ಸ್ವಚ್ಛವಾಗಿರಿಸಿದರೆ ನಮ್ಮ ಆರೋಗ್ಯರೂ ಅಷ್ಟೇ ಸಮೃದ್ಧವಾಗಿರುತ್ತದೆ. ಸ್ವಚ್ಛತೆ ಅಷ್ಟೋಂದು ಮಹತ್ವವನ್ನು ಪಡೆದುಕೊಳ್ಳುತ್ತದೆ, ಪ್ರಸ್ತುತ ಈ ಸಂದರ್ಭದಲ್ಲಂತೂ ಸ್ವಚ್ಛತೆ ಬಗ್ಗೆ ಎಷ್ಟು ಜಾಗರೂಕರಾಗಿರುತ್ತೇವೆಯೋ ಅಷ್ಟು ನಮಗೇ ಒಳಿತು. ಅದರಂತೆ ಈ ಮಾತನ್ನು ರಾಜ್ಯಸರ್ಕಾರವೂ ಶಿರಸಾ ಪಾಲಿಸುವಂತೆ ಕಾಣುತ್ತಿದೆ.
ಆದರೆ ಸ್ವಚ್ಛತೆ ಹೆಸರಿನಲ್ಲಿ ಇಡೀ ರಾಜ್ಯಕ್ಕೆ ಅನ್ವಯ ಆಗುವಂತೆ ಲಕ್ಷ ಲಕ್ಷ ಖರ್ಚ್ಚಾದರೆ ಅದು ಬೇರೆ ವಿಚಾರ ಆದರೆ, ಇಲ್ಲಿ ಸ್ವಚ್ಚತೆಗೆ ಆಗುತ್ತಿರುವ ಖರ್ಚು ತೀವ್ರ ಚರ್ಚೆಗೆ ಕಾರಣವಾಗುತ್ತಿದೆ. ಅಷ್ಟಕ್ಕೂ ಸರ್ಕಾರದ ಹಣ ಹೇಳುವವರಿಲ್ಲ, ಕೇಳುವವರಿಲ್ಲ ಎಂಬ ಮಾತು ಇಲ್ಲಿ ಅರ್ಥ ಪಡೆದುಕೊಳ್ಳುತ್ತಿರುವಂತೆ ಕಾಣುತ್ತಿದೆ.
ಯಾಕಂದರೆ ರಾಜ್ಯದ ವಿಧಾನ ಸೌಧದ ಸ್ವಚ್ಛತೆಗೆ ಬಳಸುತ್ತಿರುವ ಮೊತ್ತ ಕೇಳಿದ್ರೆ ನೀವು ದಂಗಾಗಿ ಬಿಡುತ್ತೀರಾ….
ಹೌದು ರಾಜ್ಯದ ಶಕ್ತಿ ಕೇಂದ್ರವಾದ ವಿಧಾನ ಸೌಧದ ಗೋಡೆ ಮತ್ತು ಕಾರಿಡಾರ್ ಸ್ವಚ್ಛಗೊಳಿಸಲು ಸರ್ಕಾರ ಮಾಡುತ್ತಿರುವ ಖರ್ಚು ಬರೋಬ್ಬರಿ 59 ಲಕ್ಷ ರೂಪಾಯಿ. ಅದು ಕೂಡ ಕೇವಲ 7 ತಿಂಗಳಿಗೆ. ಈ ಅವಧಿ ಮುಗಿದ ಬಳಿಕ ಹೊಸ ಟೆಂಡರ್ ಕರೆಯಲಾಗುತ್ತದೆ. ರಾಜ್ಯಾದ್ಯಂತ ಕೊರೋನಾ ಹಾವಳಿಯಿಂದ ಸರಕಾರ ಆರ್ಥಿಕವಾಗಿ ಸಂಕಷ್ಟದಲ್ಲಿದೆ. ಒಂದಡೆ ಸರ್ಕಾರದ ಖಜಾನೆಯಲ್ಲಿ ಹಣದ ಕೊರತೆ ಕಾಣುತ್ತಿದೆ, ಮತ್ತೊಂದೆಡೆ ಸರ್ಕಾರಿ ನೌಕರರಿಗೆ ಸರಿಯಾಗಿ ವೇತನ ನೀಡಲು ಸಾಧ್ಯವಾಗುತ್ತಿಲ್ಲ, ಹೀಗೆಲ್ಲಾ ಸಮಸ್ಯೆಗಳು ಇರುವಾಗ ಇಷ್ಟೊಂದು ಮೊತ್ತವನ್ನು ಕೇವಲ ಸ್ವಚ್ಛ ಮಾಡುವುದಕ್ಕೆ ಖರ್ಚು ಮಾಡಬೇಕಾ ಎಂಬ ಪ್ರಶ್ನೆಯೂ ಮೂಡುತ್ತದೆ.
ವಿಧಾನ ಸೌಧದ ಲೋಕೋಪಯೋಗಿ ಇಲಾಖೆ ಖಾಸಗಿ ಸಂಸ್ಥೆಗಳಿಂದ 7 ತಿಂಗಳ ಅವಧಿಗೆ 59 ಲಕ್ಷ ರೂಪಾಯಿಯಂತೆ ಕಳೆದ ತಿಂಗಳು ಟೆಂಡರ್ ಕರೆದಿದೆ. ಈ ಮೂಲಕ ಸರ್ಕಾರ ಪ್ರತಿ ತಿಂಗಳು ವಿಧಾನ ಸೌಧದ ಕೇವಲ ಕಾರಿಡಾರ್ ಮತ್ತು ಗೋಡೆ ಸ್ವಚ್ಛಗೊಳಿಸಲು ತಿಂಗಳಿಗೆ 8 ಲಕ್ಷ ರೂಪಾಯಿ ಖರ್ಚು ಮಾಡುತ್ತದೆ ಎಂದಾಗುತ್ತದೆ. ಇನ್ನು ಇದರಲ್ಲಿ ಹೌಸ್ ಕೀಪಿಂಗ್ ಸಿಬ್ಬಂದಿ ಮತ್ತು ಇತರ ಸಾಮಾನ್ಯ ನಿರ್ವಹಣೆಗೆ ಖರ್ಚು ಪ್ರತ್ಯೇಕವಾಗಿರುತ್ತದೆ ಎನ್ನುವುದು ಮತ್ತೊಂದು ವಿಚಾರ.
ವಿಧಾನ ಸೌಧವೆಂದರೆ ಮುಖ್ಯಮಂತ್ರಿ, ಸಚಿವರು, ಶಾಸಕರು, ಅಧಿಕಾರಿಗಳು ಕೆಲಸ ಮಾಡುವ ಸ್ಥಳ. ಇಲ್ಲಿ ಒಟ್ಟಾರೆ 370 ಕೊಠಡಿಗಳು ಮತ್ತು 14 ಶೌಚಾಲಯಗಳು ಇದೆ. ಕಲ್ಲುಗಳನ್ನು ಬಳಸಿ ಕಟ್ಟಿದ ಮಹಲನ್ನು ವಾಟರ್ ಜೆಟ್ ಕ್ಲೀನಿಂಗ್ ಮಾಡಿದರೆ ಸಾಕಾಗುತ್ತದೆ ಎಂಬ ಅಭಿಪ್ರಾಯವೂ ಕೇಳಿ ಬರುತ್ತಿದೆ.