ಕರ್ನಾಟಕ ಬಂದ್: ಪೊಲೀಸ್ – ಪ್ರತಿಭಟನಾಕಾರರ ನಡುವೆ ವಾಗ್ವಾದ, ಬಸ್’ಗಳ ಮೇಲೆ ಕಲ್ಲು ತೂರಾಟ

ಬೆಂಗಳೂರು: ಮರಾಠ ಸಮುದಾಯ ನಿಗಮ ಸ್ಥಾಪನೆ ವಿರುದ್ಧ ವಿವಿಧ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಬಂದ್ ಶನಿವಾರ ಆರಂಭಗೊಂಡಿದ್ದು, ಹಲವೆಡೆ ಬಿಎಂಟಿಸಿ ಬಸ್’ಗಳ ಮೇಲೆ ಕಲ್ಲು ತೂರಾಟ ನಡೆದಿದೆ. 

ಕರ್ನಾಟದ ಗಡಿ ಭಾಗದಲ್ಲಿ ಎಂಇಎಸ್ ಪುಂಡರು ಕನ್ನಡಿಗರನ್ನು ಪದೇ ಪದೇ ಕೆಣಕುತ್ತಿರುವ ಬೆನ್ನಿನಲ್ಲೇ ಸರ್ಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿರುವುದು ಕನ್ನಡಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. 

ಸರ್ಕಾರ ತನ್ನ ನಿರ್ಧಾರದಿಂದ ಹಿಂದಕ್ಕೆ ಸರಿಯಲೇಬೇಕು, ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಯನ್ನು ಕೈಬಿಡಬೇಕೆಂದು ಆಗ್ರಹಿಸಿ ಅನೇಕ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್’ಗೆ ಕರೆ ನೀಡಿವೆ.

ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಟೌನ್’ಹಾಲ್ ಮುಂದೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. 

ಈ ನಡುವೆ ಪ್ರತಿಭಟನೆಯ ಕಾವು ಈಗಷ್ಟೇ ಆರಂಭವಾಗುತ್ತಿದ್ದು, ಬೆಂಗಳೂರಿನ ಕೆಆರ್.ಪುರಂನ ಪೈ ಲೈಔಟ್ ನಲ್ಲಿ ಬಿಎಂಟಿಸಿ ಬಸ್’ಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿರುವುದು ವರದಿಯಾಗಿದೆ. 

ಇದಲ್ಲದೆ ಹೊಸೂರು ರಸ್ತೆಯ ಹಳೇ ಚಂದಾಪುರ ಬಳಿ ಬಿಎಂಟಿಸಿ ಬಸ್ ಮೇಲೂ ಕಲ್ಲೂ ತೂರಾಟ ನಡೆದಿರುವುದಾಗಿ ವರದಿಗಳು ತಿಳಿಸಿವೆ. ಇನ್ನು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕರ್ನಾಟಕ ಬಂದ್’ಗೆ ನೀರಸ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ಮಂಗಳೂರಿನಲ್ಲಿ ಬಂದ್’ಗೆ ಯಾವುದೇ ರೀತಿಯ ಬಿಸಿ ತಟ್ಟಿಲ್ಲ. ತಮಿಳುನಾಡು ಗಡಿ ಆನೇಕಲ್ ನಲ್ಲಿ ಕರ್ನಾಟಕ ಬಂದ್’ಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು, ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ಆರಂಭಿಸಿವೆ.

ಹಲವರನ್ನು ವಶಕ್ಕೆ ಪಡೆದ ಪೊಲೀಸರು
ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರೋಧಿಸಿ ರಾಜ್ಯದಲ್ಲಿ ನಡೆಯುತ್ತಿರುವ ಪ್ರತಿಭಟನೆ ತೀವ್ರಗೊಳ್ಳುತ್ತಿದೆ. ನಗರದ ಟೌನ್ ಹಾಲ್ ಬಳಿ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ವಾಗ್ವಾದಗಳು ನಡೆಯುತ್ತಿದ್ದು, ಈ ವೇಳೆ ಹಲವು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ. 

ಟೌನ್​ಹಾಲ್ ಬಳಿ ಒಂದು ಗುಂಪಿನ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದ ಬೆನ್ನಲ್ಲೇ ಮತ್ತೊಂದು ಗುಂಪಿನ ಪ್ರತಿಭಟನಾಕಾರರು ಟೌನ್​ಹಾಲ್​ನತ್ತ ಧಾವಿಸಿದ್ದು, ಇವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಳಿಕ ಆಗಮಿಸಿದ 2ನೇ ತಂಡ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಇದೀಗ ಮೂರನೇ ತಂಡದ ಪ್ರತಿಭಟನಾಕಾರರು ಸ್ಥಳಕ್ಕೆ ಆಗಮಿಸುತ್ತಿದ್ದಾರೆ ವರದಿಗಳು ತಿಳಿಸಿವೆ. 

ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ ಬಂದ್ ನಡೆಸುತ್ತಿರುವ ಪ್ರತಿಭಟನಾಕಾರರು ಯತ್ನಾಳ್ ಮತ್ತು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ.

ಬಿಎಂಟಿಸಿ ಬಸ್ ಗಳಿಗೆ ಕಲ್ಲು – ಚಾಮರಾಜನಗರದಲ್ಲಿ ಯತ್ನಾಳ್ ಪ್ರತಿಕೃತಿ ದಹನ
ಮರಾಠ ಅಭಿವೃದ್ಧಿ ನಿಗಮ ರಚನೆಯ ವಿಷಯದಲ್ಲಿ ಸರ್ಕಾರದ ತೀರ್ಮಾನ ವಿರೋಧಿಸಿ ವಿರೋಧಿಸಿ ರಾಜ್ಯದ ಬಂದ್ಗೆ ಕನ್ನಡ ಪರ ಸಂಘಟನೆಗಳು ಇಂದು ಕರೆ ನೀಡಿದ್ದು ಹಲವೆಡೆ ಬಸ್ ಗಳಿಗೆ ಕಲ್ಲು ತೂರಲಾಗಿದೆ.

ಬೆಂಗಳೂರಿನಲ್ಲಿ ಜನ ಜೀವನ ಸಹಜವಾಗಿದ್ದು ಬಂದ್ ಬಿಸಿ ತಟ್ಟಿಲ್ಲ. ಜನಜೀವನ ಎಂದಿನಂತೆ ಸಾಗಿದೆ. ಕರ್ನಾಟಕ-ತಮಿಳುನಾಡು ಅನೇಕಲ್ ಗಡಿಯಲ್ಲಿ ಕನ್ನಡ ಪರ ಸಂಘಟನೆಗಳು ಬೀದಿಗಳಿದು ಪ್ರತಿಭಟನೆ ನಡೆಸಿದ್ದಾರೆ.

ಜೊತೆಗೆ ಚಾಮರಾಜನಗರದ ಭುವನೇಶ್ವರಿ ವೃತ್ತದಲ್ಲಿ ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ಟೈರಗ ಗಳಿಗೆ ಬೆಂಕಿ ಹಚ್ಚಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ದ ಹಾಗೂ ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಕೂಗಿ, ಕೂಡಲೇ ರಾಜ್ಯ ಸರ್ಕಾರ ಕೂಡಲೇ ಮರಾಠ ಅಭಿವೃದ್ಧಿ ನಿಗಮದ ಸಂಬಂಧ ಹೊರಡಿಸಲಾದ ಅಧಿಸೂಚನೆ ರದ್ದು ಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!