ದೆಹಲಿಯಲ್ಲಿ ಸಾವಿರಾರು ರೈತರು ಜಮಾವಣೆ: ಉತ್ತರ ದೆಹಲಿಯತ್ತ ಹೋಗಲು ಪ್ರತಿಭಟನಾಕಾರರು ನಕಾರ

ನವದೆಹಲಿ: ದೆಹಲಿ ಚಲೋ ಪ್ರತಿಭಟನೆ ನಡೆಸುತ್ತಿರುವ ಸಾವಿರಾರು ಮಂದಿ ರೈತರು ಶನಿವಾರ ಸಿಂಗು ಗಡಿಯಲ್ಲಿ ಜಮಾಯಿಸಿದ್ದು, ತೀವ್ರ ಪೊಲೀಸ್ ಭದ್ರತೆಯ ನಡುವೆ ತಮ್ಮ ಪ್ರತಿಭಟನೆಯನ್ನು ಮುಂದುವರಿಸಲು ನಿರ್ಧರಿಸಿದ್ದಾರೆ. 

ಪೊಲೀಸರು ಉತ್ತರ ದೆಹಲಿಯ ಸ್ಥಳವೊಂದರಲ್ಲಿ ಪ್ರತಿಭಟನೆ ನಡೆಸಲು ಅವಕಾಶ ನೀಡಿದರೂ ಕೂಡ ಇಂದು ಬೆಳಗ್ಗೆ ಸೇರಿರುವ ಟಿಕ್ರಿ ಗಡಿಭಾಗದ ಮೈದಾನದಲ್ಲಿಯೇ ಮುಂದುವರಿಸಿದ್ದಾರೆ.ಅಲ್ಲಿಂದ ಪ್ರತಿಭಟನಾಕಾರರು ಮುಂದುವರಿಯುತ್ತಾರೆಯೇ, ಇಲ್ಲವೇ ಎಂಬುದು ಇನ್ನು ಕೆಲ ಹೊತ್ತುಗಳಲ್ಲಿ ನಿರ್ಧಾರವಾಗಲಿದೆ.

ಪಂಜಾಬ್ ನಗರಕ್ಕೆ ಹೋಗುವ ಮುಖ್ಯ ಗಡಿಯಾದ ಸಿಂಗು ಗಡಿಯಲ್ಲಿ ರೈತರೊಬ್ಬರು ಮಾತನಾಡಿ, ತಾವು ಮುಂದುವರಿಯದೆ ಇಲ್ಲಿಯೇ ಪ್ರತಿಭಟನೆ ಮುಂದುವರಿಸುವುದಾಗಿ ಹೇಳಿದ್ದಾರೆ.

ನಾವು ಸಿಂಗು ಗಡಿಯಿಂದ ಕದಲುವುದಿಲ್ಲ, ನಮ್ಮ ಹೋರಾಟವನ್ನು ಇಲ್ಲಿಯೇ ಮುಂದುವರಿಸುತ್ತಿದ್ದು ಮನೆಗೂ ಹಿಂತಿರುಗಿ ಹೋಗುವುದಿಲ್ಲ. ಪಂಜಾಬ್ ಮತ್ತು ಹರ್ಯಾಣಗಳಿಂದ ಸಾವಿರಾರು ರೈತರು ಬಂದಿದ್ದಾರೆ ಎಂದರು.

ಪಂಜಾಬ್ ಭಾಗದ ರೈತರ ಪ್ರತಿಭಟನೆ ಮುಂದುವರಿದಿದ್ದು, ರೈತರು ದೇಶದ ರಾಜಧಾನಿ ದೆಹಲಿಗೆ ಸಮೀಪಿಸುತ್ತಿದ್ದಂತೆ ಪರಿಸ್ಥಿತಿ ಬಿಗಡಾಯಿಸಿದೆ. ವಾಹನ ಸವಾರರು ಸಂಚಾರ ದಟ್ಟಣೆ, ಬದಲಿ ಸಂಚಾರ ಮಾರ್ಗಗಳನ್ನು ಪೊಲೀಸರು ಕಲ್ಪಿಸಿದ್ದರಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ದೆಹಲಿ ಮತ್ತು ಎನ್ ಸಿಆರ್ ನಗರಗಳ ಮಧ್ಯೆ ವಾಹನ ಸಂಚಾರ ತೀವ್ರ ಅಡಚಣೆಯುಂಟಾಗಿದೆ. ಎನ್ ಸಿಆರ್, ಕೇಂದ್ರ ದೆಹಲಿ, ಪಂಜಾಬಿ ಬಾಗ್, ನೈರುತ್ಯ ಮತ್ತು ಆಗ್ನೇಯ ದೆಹಲಿಗಳಲ್ಲಿ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಹರ್ಯಾಣದ ಗಡಿಭಾಗದ ಸಿಂಗು, ಟಿಕ್ರಿ, ಧನ್ಸ, ಜಾರೊಡ ಕಲನ್ ಗಳಲ್ಲಿ ಪೊಲೀಸರು ಸಂಚಾರ ಬಂದ್ ಮಾಡಿದ್ದಾರೆ.

ಇಂದು ಬೆಳಗ್ಗೆ ಸದ್ಯ ರೈತರು ಟಿಕ್ರಿ ಭಾಗದಲ್ಲಿ ಪ್ರತಿಭಟನೆ ನಡೆಸಲು ಸೇರಿದ್ದು ಅಲ್ಲಿನ ಬುರಾರಿ ಪ್ರದೇಶದ ನಿರಂಕಾರಿ ಸಮಾಗಮ ಮೈದಾನದಲ್ಲಿ ಪ್ರದರ್ಶನ ನಡೆಸಲು ರೈತರಿಗೆ ಅನುಮತಿ ನೀಡಲಾಗಿದೆ. ಅಲ್ಲಿ ತೀವ್ರ ಭದ್ರತೆ ಕಲ್ಪಿಸಲಾಗಿದೆ. ಆದರೆ ಅಲ್ಲಿಗೆ ಹೋಗಲು ರೈತರು ನಿರಾಕರಿಸಿದ್ದಾರೆ. 

Leave a Reply

Your email address will not be published. Required fields are marked *

error: Content is protected !!