ಕಾರ್ಮಿಕನಿಗೆ ಒಂಟಿ ಕಾಲಿನ ಶಿಕ್ಷೆ- ಕಠಿಣ ಕ್ರಮಕ್ಕೆ ಸಿಐಟಿಯು ಆಗ್ರಹ
ಬ್ರಹ್ಮಾವರ: ವಂಡಾರಿನ ಕ್ರಷ್ಣಪ್ರಸಾದ್ ಕ್ಯಾಶೂ ಕಾರ್ಖಾನೆಯಲ್ಲಿ ಎಲೆಕ್ಟ್ರೀಷಿಯನ್ ಕೆಲಸ ಮಾಡಿಕೊಂಡಿದ್ದ ಶಿರೂರು ಗ್ರಾಮದ ಪ್ರವೀಣ್ ಎಂಬ ಯುವ ಕಾರ್ಮಿಕನಿಗೆ ಕಾರ್ಖಾನೆ ಗೇಟ್ ಬಳಿ ಅಮಾನವೀಯವಾಗಿ ಒಂಟಿ ಕಾಲಿನಲ್ಲಿ ನಿಲ್ಲಿಸಿ ಶಿಕ್ಷೆ ನೀಡಲಾಗಿದೆ.ಈ ಕಾರ್ಖಾನೆ ಮಾಲಿಕ ಸಂಪತ್ ಶೆಟ್ಟಿಯ ಈ ವರ್ತನೆ ಕಾರ್ಮಿಕನ ಜೀವಕ್ಕೆ ಸಂಚಕಾರ ತಂದ ಪ್ರಕರಣವನ್ನು ಸಿಐಟಿಯು ಉಗ್ರವಾಗಿ ಖಂಡಿಸುತ್ತದೆ.
ಕೆಲಸದ ಸಮಸ್ಯೆಗಳು ಏನೇ ಇದ್ದರೂ ತನ್ನದೇ ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕನನ್ನು ಮಾತುಕತೆ ಮಾಡಿಸಿ ಮುಂದೆ ಇಂತಹ ತಪ್ಪುಗಳನ್ನು ಮರುಕಳಿಸದಂತೆ ಎಚ್ಚರಿಕೆ ಕೊಟ್ಟು ಬಗೆಹರಿಸಬಹುದಾಗಿತ್ತು ಆದರೆ ಕಾರ್ಮಿಕನೆಂದರೆ ಗುಲಾಮರು ಎಂಬ ಕೆಟ್ಟ ಮನೋಭಾವ ಹೊಂದಿದ ಇಂತಹ ಮಾಲಕರು ಸಮಾಜಕ್ಕೆ ಅಪಾಯಕಾರಿಯಾಗಿದ್ದಾರೆ ಎಂದು ಸಿಐಟಿಯು ಅಭಿಪ್ರಾಯ ಪಡುತ್ತದೆ.ಈ ಪ್ರಕರಣವನ್ನು ಉಡುಪಿ ಕಾರ್ಮಿಕ ಇಲಾಖೆ ಗಂಭೀರವಾಗಿ ಪರಿಗಣಿಸಿ ಸ್ವಯಂ ದೂರು ದಾಖಲಿಸಿಕೊಂಡು ತನಿಖೆಗೊಳಪಡಿಸಿ ಮಾಲಕರ ಮೇಲೆ ಕಠಿಣ ಕ್ರಮ ಜರುಗಿಸಬೇಕು.
ಪ್ರವೀಣ್ ಎಂಬ ಕಾರ್ಮಿಕನ ಪರಿಸ್ಥಿತಿಯೇ ಹೀಗಿದ್ದರೆ ಇನ್ನೂ ಕ್ರಷ್ಣ ಪ್ರಸಾದ್ ಕಾರ್ಖಾನೆ ಒಳಗೆ ಕೆಲಸ ಮಾಡುವ ಕಾರ್ಮಿಕರ ಪರಿಸ್ಥಿತಿ ಕಾನೂನು ಬದ್ಧ ಯಾವುದೇ ಸೌಲಭ್ಯ ನೀಡದೇ ಮತ್ತಷ್ಟು ಕಠೋರವಾಗಿ ಜೀತದಾಳುಗಳಾಗಿ ದುಡಿಸುತ್ತಿರ ಬಹುದು ಎಂದು ಸಿಐಟಿಯು ಆರೋಪಿಸಿದೆ. ಇದೊಂದು ಪಾಳೆಗಾರಿ ಮನಸ್ಥಿತಿ ದುರ್ಬಲರ ಮೇಲೆ ಹಣವುಳ್ಳವರು ಮಾಡುವ ದೌರ್ಜನ್ಯ ಆಗಿದೆ ಈ ಬಗ್ಗೆ ಜಿಲ್ಲಾಧಿಕಾರಿಯವರು ವಿಶೇಷ ಗಮನ ನೀಡಬೇಕು ಎಂದು ಸಿಐಟಿಯು ಆಗ್ರಹಿಸಿದೆ.
ಸದ್ಯ ಕಾರ್ಮಿಕರ ಪರವಾದ ಕಾನೂನುಗಳಿದ್ದಾಗ್ಯೂ ಕೂಡ ಕಾನೂನಿನ ಭಯವಿಲ್ಲದೆ ಮಾಲಕರು ಅಧಿಕಾರ ಮತ್ತು ಹಣ ಬಲದಿಂದ ಕಾರ್ಮಿಕರನ್ನು ಗುಲಾಮರಂತೆ ನಡೆಸಿಕೊಳ್ಳುತ್ತಿದ್ದಾರೆ ಇನ್ನು ಕೇಂದ್ರ ಸರಕಾರ ತರುತ್ತಿರುವ ಹೊಸ ಕಾರ್ಮಿಕ ಸಂಹಿತೆ ಜಾರಿಯಾದರೆ ಮಾಲೀಕರು ಇನ್ನಷ್ಟು ಶೋಷಿಸಲು ಸಹಾಯಕವಾಗುತ್ತದೆ ಆದುದರಿಂದ ಕಾರ್ಮಿಕರು ಎಲ್ಲಾ ವಲಯಗಳಲ್ಲಿ ಸಂಘಟಿತರಾಗಬೇಕು ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.





