ಯಡಿಯೂರಪ್ಪ ನಮ್ಮನ್ನ ಜೈಲಿಗೆ ಹಾಕಲಿ, ಡಿ. 5ಕ್ಕೆ ಕರ್ನಾಟಕ ಬಂದ್ ಖಚಿತ: ವಾಟಾಳ್ ನಾಗರಾಜ್

ಬೆಂಗಳೂರು: ಸಿಎಂ ಬಿಎಸ್ ಯಡಿಯೂರಪ್ಪ ಬೇಕಾದರೆ ನಮ್ಮನ್ನ ಜೈಲಿಗೆ ಹಾಕಲಿ ಆದರೆ ನಾವು ಡಿಸೆಂಬರ್ 5ಕ್ಕೆ ಕರ್ನಾಟಕ ಬಂದ್ ಮಾಡಿಯೇ ಮಾಡುತ್ತೇವೆ ಎಂದು ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದ್ದಾರೆ.

ಕರ್ನಾಟಕ ಬಂದ್ ಸಂಬಂಧ ಇಂದು ನಡೆದ ಪೂರ್ವಭಾವಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್ “ಡಿಸೆಂಬರ್ 5ಕ್ಕೆ ಕರ್ನಾಟಕ ಬಂದ್ ಖಚಿತ. ಬಂದ್ ಯಶಸ್ವಿಯಾಗಲೇಬೇಕು ಇದಕ್ಕೆ ಎಲ್ಲರೂ ಸಹಕರಿಸಿ” ಎಂದು ಹೇಳಿದ್ದಾರೆ.

ಕನ್ನಡ ಪರ ಸಂಘಟನೆಗಳು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಇಂದು ಸಭೆ ನಡೆಸಿದ್ದು ರಾಜ್ಯ ಸರ್ಕಾರದ ಮರಾಠಾ ಅಭಿವೃದ್ಧಿ ನಿಗಮ ಸ್ಥಾಪನೆ ನಿರ್ಧಾರ ವಿರೋಧಿಸಿ ಕರ್ನಾಟಕ ಬಂದ್ ನಡೆಸಲು ಒಕ್ಕೊರಲ ತೀರ್ಮಾನಕ್ಕೆ ಬಂದಿವೆ.

ಡಿಸೆಂಬರ್ 5ರ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಬಂದ್ ಇರಲಿದೆ. ಎಂದ ವಾಟಾಳ್ ನಾಗರಾಜ್ “ಈ ನಿರ್ಧಾರದಲ್ಲಿ ಯಾವ ಬದಲಾವಣೆ ಇಲ್ಲ. ಬಂದ್ ಮಾಡಬೇಡಿ ಎಂದು ಮುಖ್ಯಮಂತ್ರಿಗಳು ಹೇಳಬಾರದು, ಬಂದ್ ದಿನ ಯಾವ ವಾಹನ ಸಂಚಾರವಿರುವುದಿಲ್ಲ. ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್ ವರೆಗೆ ರ್ಯಾಲಿ ಇರಲಿದೆ.

“ಅಂದು ಬೆಳಿಗ್ಗೆ 10.30ಕ್ಕೆ ರ್ಯಾಲಿ ಮಾಡಲಿದ್ದೇವೆ. ಹೋಟೆಲ್ ಮಾಲಿಕರ ಸಂಘ, ಉಬರ್, ಓಲಾ ಕ್ಯಾಬ್ ಚಾಲಕರು ಬಂದ್ ಗೆ ಬೆಂಬಲಿಸಿದ್ದಾರೆ” ಎಂದರು.

ಕರ್ನಾಟಕ ಬಂದ್ ಗೆ ಮುನ್ನ ಕನ್ನಡ ಪರ ಸಂಘಟನೆಗಳು ಗಡಿ ರಸ್ತೆ ಬಂದ್ ಮಾಡುವ ಯೋಜನೆ ಹೊಂದಿದ್ದು ಈ ಯೋಜನೆಯಂತೆ ನವೆಂಬರ್ 23 ರಂದು ಬಳ್ಳಾರಿ ಗಡಿ ರಸ್ತೆ ಬಂದ್ ಆಗಲಿದೆ. ನವೆಂಬರ್ 24 ರಂದು ಅತ್ತಿಬೆಲೆ ಗಡಿ ಬಂದ್ ಆಗಲಿದೆ. ಮತ್ತು ನವೆಂಬರ್ 30ಕ್ಕೆ  ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ಬಂದ್ ಆಚರಿಸುವ ಯೋಜನೆ ಇದೆ.
 

Leave a Reply

Your email address will not be published. Required fields are marked *

error: Content is protected !!