ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ರದ್ದು: ಹೈಕೋರ್ಟ್ ಆದೇಶ

ಬೆಂಗಳೂರು: ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸಿ ಅ.8 ರಂದು ಸರ್ಕಾರ ಹೊರಡಿಸಿದ್ದ ಅಧಿಸೂಚನೆಯನ್ನು ಹೈಕೋರ್ಟ್ ರದ್ದು ಮಾಡಿ ಆದೇಶ ಹೊರಡಿಸಿದೆ.

ಸರ್ಕಾರದ ಅಧಿಸೂಚನೆ ಪ್ರಶ್ನಿಸಿ ಹಾಸನ, ಅರಸಿಕೇರೆ, ಕೊಪ್ಪಳ, ಶಿಡ್ಲಘಟ್ಟ, ಹರಿಹರ ನಗರಸಭೆ, ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪುರಸಭೆ, ಕೊಡಗು ಜಿಲ್ಲೆ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಸೇರಿ ರಾಜ್ಯದ ವಿವಿಧ ನಗರ ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರು, ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಸಲ್ಲಿಸಿದ್ದ ಅರ್ಜಿಗಳನ್ನು ಇಂದು ಮಾನ್ಯ ಮಾಡಿರುವ ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ಪೀಠ ಈ ಆದೇಶ ನೀಡಿದೆ. ಮೀಸಲು ಕಲ್ಪಿಸುವ ವೇಳೆ ರೊಟೇಷನ್ ನಿಯಮ ಪಾಲನೆಯಾಗಿಲ್ಲ. ಆದ್ದರಿಂದ, ನಾಲ್ಕು ವಾರಗಳ ಒಳಗೆ ರೊಟೇಷನ್ ಪದ್ಧತಿ ಅನುಸಾರ ಮೀಸಲಾತಿ ಕಲ್ಪಿಸಿ ಮರು ಅಧಿಸೂಚನೆ ಹೊರಡಿಸಬೇಕೆಂದು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದ್ದು, ಇದು, ಇತ್ತೀಚೆಗಷ್ಟೇ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಆಯ್ಕೆಯಾಗಿದ್ದವರಿಗೆ ಶಾಕ್ ನೀಡಿದೆ.

ಹಿನ್ನೆಲೆ: ಮೀಸಲಾತಿ ಕಲ್ಪಿಸುವ ವೇಳೆ ರೊಟೇಷನ್ ಅನುಸರಿಸಲಾಗಿಲ್ಲ ಎಂದು ಆಕ್ಷೇಪಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ್ದ ಹೈಕೋರ್ಟ್, ಅ.15ರಂದು ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಅಧಿಸೂಚನೆಗೆ ಹಾಗೂ ಅ.19ರಂದು ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಮೀಸಲು ಅಧಿಸೂಚನೆಗೆ ಮಧ್ಯಂತರ ತಡೆ ನೀಡಿತ್ತು. ಇದರ ಜೊತೆಗೆ, ಮೀಸಲಾತಿ ಆವರ್ತನೆ ಪರಿಶೀಲಿಸಿ ಕರಡು ಸಲ್ಲಿಸಲು ಮೂವರು ವಕೀಲರನ್ನೊಳಗೊಂಡ ತ್ರಿಸದಸ್ಯ ಸಮಿತಿ ನೇಮಕ ಮಾಡಿತ್ತು.

ಏಕಸದಸ್ಯ ಪೀಠದ ಮಧ್ಯಂತರ ಆದೇಶ ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಅ.19ರಂದು ಮಾನ್ಯ ಮಾಡಿದ್ದ ವಿಭಾಗೀಯ ಪೀಠ, ಏಕಸದಸ್ಯ ಪೀಠದ ತಡೆಯಾಜ್ಞೆ ತೆರವುಗೊಳಿಸಿ, ರಾಜ್ಯದ ಎಲ್ಲ ನಗರಸಭೆಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಚುನಾವಣೆಗೆ ಹಸಿರು ನಿಶಾನೆ ತೋರಿದ್ದ ಹೈಕೋರ್ಟ್, ಚುನಾವಣಾ ಫಲಿತಾಂಶ ಅರ್ಜಿಗಳ ಅಂತಿಮ ಆದೇಶಕ್ಕೆ ಒಳಪಡಲಿದೆ ಎಂದು ಹೇಳಿದೆ. ಇದರಿಂದ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಅಧಿಸೂಚನೆಗೆ ತಡೆಯಾಜ್ಞೆ ನೀಡಿ ಹೊರಡಿಸಿದ್ದ ಮಧ್ಯಂತರ ಆದೇಶವನ್ನು ಅ.22ರಂದು ಹಿಂಪಡೆದಿದ್ದ ಏಕಸದಸ್ಯಪೀಠ, ನ.10ರೊಳಗೆ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿತ್ತು. ಇದೀಗ 4 ವಾರಗಳಲ್ಲಿ ಮರು ಅಧಿಸೂಚನೆ ಹೊರಡಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ

Leave a Reply

Your email address will not be published. Required fields are marked *

error: Content is protected !!