ಕೇರಳದಲ್ಲಿ ಹಕ್ಕಿ ಜ್ವರ ಪತ್ತೆ: 2 ಗ್ರಾಮಗಳಲ್ಲಿ ಕಣ್ಗಾವಲು

ಆಲಪ್ಪುಳ: ಆಲಪ್ಪುಳ ಜಿಲ್ಲೆಯ ಎರಡು ಗ್ರಾಮ ಪಂಚಾಯತಿಗಳಲ್ಲಿ ಹಕ್ಕಿ ಜ್ವರ ಹರಡಿರುವುದು ದೃಢಪಟ್ಟಿದ್ದು, ಕೇರಳ ಸಾರ್ವಜನಿಕ ಆರೋಗ್ಯ ಕಾಯ್ದೆ, 2023ರ ಅನ್ವಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯ ಸಚಿವೆ ವೀಣಾ ಜಾರ್ಜ್ ಆರೋಗ್ಯ ಇಲಾಖೆಗೆ ನಿರ್ದೇಶನ ನೀಡಿದ್ದಾರೆ. ಎದತ್ವ ಹಾಗೂ ಚೆರುತನ ಪಂಚಾಯತಿಗಳಲ್ಲಿನ ಎರಡು ವಾರ್ಡ್ ಗಳಲ್ಲಿ ಬಾತುಕೋಳಿಗಳಲ್ಲಿ ಹಕ್ಕಿ ಜ್ವರ ಕಂಡು ಬಂದಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಅಧಿಕಾರಿಗಳು ಗಾಬರಿ ಪಡುವ ಅಗತ್ಯವಿಲ್ಲ ಎಂದು ಅಭಯ ನೀಡಿದ್ದಾರೆ. ಇದು ಮುಂಜಾಗ್ರತಾ ಕ್ರಮವಾಗಿದ್ದು, ಮನುಷ್ಯರಿಗೆ ಎಚ್‍5ಎನ್‍1 ವೈರಸ್ ಸೋಂಕು ತಗುಲುವ ಸಾಧ್ಯತೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕೇರಳ ಸಾರ್ವಜನಿಕ ಆರೋಗ್ಯ ಕಾಯ್ದೆಯ ಪ್ರಕಾರ, ಎಲ್ಲ ಪಂಚಾಯತಿ ಹಂತದ ಸಮಿತಿಗಳು, ಮಹಾನಗರ ಪಾಲಿಕೆಗಳು ಪರಿಸ್ಥಿತಿಯ ಬಗ್ಗೆ ಸಭೆ ನಡೆಸಬೇಕು, ಉಸ್ತುವಾರಿ ವಹಿಸಬೇಕು ಹಾಗೂ ರಾಜ್ಯ ಸರಕಾರಕ್ಕೆ ವರದಿಯನ್ನು ಸಲ್ಲಿಸಬೇಕಿದೆ. ಕಣ್ಗಾವಲು ಪ್ರದೇಶದಲ್ಲಿರುವ ಜನರಲ್ಲಿ ಒಂದು ವೇಳೆ ಜ್ವರ ಹಾಗೂ ಉಸಿರಾಟದ ತೊಂದರೆಯ ಲಕ್ಷಣಗಳು ಕಂಡು ಬಂದರೆ, ತಕ್ಷಣವೇ ಆಸ್ಪತ್ರೆಗೆ ವರದಿ ಮಾಡಿಕೊಳ್ಳ ಬೇಕು ಎಂದು ಸೂಚಿಸಲಾಗಿದೆ.

ಈ ಉದ್ದೇಶಕ್ಕಾಗಿ ಆರೋಗ್ಯ ಇಲಾಖೆಯು ಸರಕಾರಿ ಆಸ್ಪತ್ರೆಗಳಲ್ಲಿ ವಿಶೇಷ ಹೊರ ರೋಗಿ ಘಟಕಗಳನ್ನು ತೆರೆಯಲಾಗಿದೆ. ಒಂದು ವೇಳೆ ಜನರಲ್ಲಿ ಹಕ್ಕಿ ಜ್ವರದ ಪ್ರಕರಣಗಳು ಕಂಡು ಬಂದರೆ ಅಲಪ್ಪುಳ ಸಾರ್ವಜನಿಕ ಆಸ್ಪತ್ರೆಯನ್ನು ಪ್ರತ್ಯೇಕ ಸಾಂಕ್ರಾಮಿಕ ಕೇಂದ್ರವನ್ನಾಗಿ ಗುರುತಿಸಲಾಗುತ್ತದೆ. ಇದರೊಂದಿಗೆ ಹಕ್ಕಿ ಜ್ವರ ಕಂಡು ಬಂದಿರುವ ಪ್ರದೇಶದಿಂದ 3 ಕಿಮೀ ವ್ಯಾಪ್ತಿಯಲ್ಲಿ ಜ್ವರದ ಸಮೀಕ್ಷೆಯನ್ನು ನಡೆಸಲಾಗುತ್ತದೆ ಎಂದು ಹೇಳಲಾಗಿದೆ.

Leave a Reply

Your email address will not be published. Required fields are marked *

error: Content is protected !!