ಕಾರ್ಕಳ: ನೀತಿ ಸಂಹಿತೆ ಉಲ್ಲಂಘಿಸಿ ಎಬಿವಿಪಿ ಪಂಜಿನ ಮೆರವಣಿಗೆ- ಪ್ರಕರಣ ದಾಖಲು
ಕಾರ್ಕಳ, ಎ.21: ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಅನುಮತಿ ಪಡೆಯದೆ ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ಕೊಲೆ ಪ್ರಕರಣವನ್ನು ಖಂಡಿಸಿ ಎ.19ರಂದು ರಾತ್ರಿ ಕಾರ್ಕಳದಲ್ಲಿ ಪ್ರತಿಭಟನೆ ನಡೆಸಿದ ಎಬಿವಿಪಿ ಕಾರ್ಯಕರ್ತರ ವಿರುದ್ಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಕಳ ವತಿಯಿಂದ ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಹಾಗೂ ಗೃಹ ಸಚಿವ ಪರಮೇಶ್ವರ ಅವರ ಹೇಳಿಕೆ ಖಂಡಿಸಿ ಕಾರ್ಕಳದ ಸರ್ವಜ್ಞ ವೃತ್ತದಿಂದ ಬಂಡೀಮಠದ ವರೆಗೆ ಪಂಜಿನ ಮೆರವಣಿಗೆ ನಡೆಸಿ ಆರೋಪಿಯ ಪ್ರತಿಕೃತಿಯನ್ನು ದಹಿಸಿ ಪ್ರತಿಭಟಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಸಹ ಕಾರ್ಯದರ್ಶಿ ಹರ್ಶಿತ್ ಕೊಯ್ಲ, ಜಿಲ್ಲಾ ಸಂಚಾಲಕ ಗಣೇಶ್ ಪೂಜಾರಿ ಪಣಿಯಾಡಿ, ತಾಲೂಕು ಸಂಚಾಲಕ ಶ್ರೇಯಸ್ ಅಂಚನ್, ಕರ್ನಾಟಕ ದಕ್ಷಿಣ ಪ್ರಾಂತ ಸಾಮಾಜಿಕ ಜಾಲತಾಣ ಸಹ- ಸಂಚಾಲಕ ಶ್ರೀವತ್ಸ ಮತ್ತು ಪ್ರಮುಖರಾದ ಅಜಿತ್ ಜೋಗಿ, ಪವನ್, ಸ್ವಸ್ತಿಕ್, ಕಾರ್ತಿಕ್, ಮನೋಜ್ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಅನುಮತಿ ಪಡೆಯದೇ ಕೈಪಂಜಿನ ಮೆರವಣಿಗೆ ನಡೆಸಿ ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗುವಂತೆ ಅಕ್ರಮವಾಗಿ ಗುಂಪು ಕೂಡಿದ್ದು ಅಲ್ಲದೆ ಮೆರವಣಿಗೆಯ ಮುಂದಾಳತ್ವ ವಹಿಸಿದ್ದ ಹರ್ಷಿತ್ , ಶ್ರೇಯಸ್ ಮತ್ತು ಗಣೇಶ್ ಇವರು ಮಾತನಾಡಿ ಘೋಷಣೆ ಕೂಗಿದ್ದಾರೆ. ಈ ಮೂಲಕ ಇವರು ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಉಲ್ಲಂಘಿಸಿರುವುದಾಗಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿ ಶ್ರೀನಿವಾಸ ಬಿ.ವಿ. ದೂರಿನಲ್ಲಿ ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಯುವತಿಯ ಹತ್ಯೆ ಖಂಡಿಸಿ ಪ್ರತಿಭಟನೆ ನಡೆಸಿದ ಎಬಿವಿಪಿ ವಿರುದ್ಧ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿರುವುದನ್ನು ರಾಜ್ಯ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿ ವಿ.ಸುನಿಲ್ ಖಂಡಿಸಿದ್ದಾರೆ.