ರೈತರ ಆದಾಯ ದುಪ್ಪಟ್ಟು ಆಗಿದ್ದರೆ ಪ್ರತಿಭಟನೆ ಏಕೆ ಮಾಡುತ್ತಿದ್ದರು: ಸಿಎಂ ಸಿದ್ದರಾಮಯ್ಯ

Oplus_0

ಮಂಡ್ಯ, ಏ.20: ರೈತರ ಆದಾಯ ದುಪ್ಪಟ್ಟು ಆಗಿದ್ದಾರೆ ಅನೇಕ ತಿಂಗಳಿನಿಂದ ರೈತರು ಪ್ರತಿಭಟನೆ ಏಕೆ ಮಾಡುತ್ತಿದ್ದರು ಎಂದುಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ಅವರು ಇಂದು ನಾಗಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಪ್ರಜಾಧ್ವನಿ-2 ಜನಸಮಾವೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣ ಗೌಡ ಅವರ ಪರವಾಗಿ ಮತಯಾಚಿಸಿ, ಮತದಾರರನ್ನು ಉದ್ದೇಶಿಸಿ ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರಿಗೆ ಅನೇಕ ಭರವಸೆಗಳನ್ನು ಕೊಟ್ಟು ಭ್ರಮೆ ಹುಟ್ಟಿಸಿದರು ಎಂದರು.

ಮನ್ ಮೋಹನ್ ಸಿಂಗ್ ದೇಶ ಕಂಡ ದೊಡ್ಡ ಆರ್ಥಿಕ ತಜ್ಞ. ಅವರು ದೇಶವನ್ನು ಅಭಿವೃದ್ಧಿಯತ್ತ ಮುನ್ನಡೆಸುವ ಪ್ರಯತ್ನ ಮಾಡಿದರು. ಆಹಾರ ಭದ್ರತಾ ಕಾಯ್ದೆ ಜಾರಿಗೆ ತಂದರು. ಶಿಕ್ಷಣ ಹಕ್ಕು ಕಾಯ್ದೆ, ಮಾಹಿತಿ ಹಕ್ಕು ಕಾಯ್ದೆ, ಉದ್ಯೋಗ ಹಕ್ಕುಗಳನ್ನು ಮನ್ ಮೋಹನ್ ಸಿಂಗ್ ಜಾರಿಗೆ ತರುವ ಮೂಲಕ ಸಂವಿಧಾನದ ನಿರ್ದೇಶಕ ತತ್ವಗಳನ್ನು ಮೂಲಭೂತ ಹಕ್ಕುಗಳನ್ನಾಗಿಸಿದರು . ನರಸಿಂಹರಾವ್ ಸರ್ಕಾರದಲ್ಲಿ ಹಣಕಾಸಿನ ಸಚಿವರಾಗಿದ್ದ ಅವರು ದೇಶವನ್ನು ಆರ್ಥಿಕವಾಗಿ ಸಧೃಡವಾಗಿಸಿದರು ಎಂದರು.

ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿಸಿದರು
ನರೇಂದ್ರ ಮೋದಿ ಅವರ ಶಿಫಾರಸ್ಸಿನ ಮೇರೆಗೆ ರಾಜ್ಯದಲ್ಲಿ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದರು. ಯಾರೂ ಬೇಕಾದರೂ ರೈತರ ಜಮೀನು ಕೊಂಡು, ರೈತರು ಭಿಕಾರಿಗಳಾಗುವಂತೆ ಮಾಡಿದರು. ಎಲ್ಲಾ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿಸಿದರು ಎಂದರು.

ಕಾಂಗ್ರೆಸ್ ಪಕ್ಷ ಬಡವರಿಗೆ,ಮಧ್ಯಮವರ್ಗದವರಿಗೆ ಕೊಳ್ಳುವ ಶಕ್ತಿ ಹೆಚ್ಚಿಸಲು ಐದು ಗ್ಯಾರಂಟಿ ಗಳನ್ನು ಜಾರಿ ಮಾಡಿದೆ ಎಂದು ತಿಳಿಸಿದರು.

ಗ್ಯಾರಂಟಿ ಗಳು ನಿಲ್ಲುವುದಿಲ್ಲ
ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರು ಕಾಂಗ್ರೆಸ್ ಗ್ಯಾರಂಟಿಗಳು ತಾತ್ಕಾಲಿಕ , ಬಿಜೆಪಿಯದ್ದು ಶಾಶ್ವತ ಎಂದು ಹೇಳಿದ್ದಾರೆ. 2024-25 ರ ಬಜೆಟ್ ನಲ್ಲಿ 52 ಸಾವಿರ ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ ಎಂದರು.ಯಾವ ಕಾರಣಕ್ಕೂ ಗ್ಯಾರಂಟಿಗಳು ನಿಲ್ಲುವುದಿಲ್ಲ ಎಂದರು.

1.20 ಕೋಟಿ ಕುಟುಂಬಗಳ ನಾಲ್ಕೂವರೆ ಕೋಟಿ ಜನರಿಗೆ ಗ್ಯಾರಂಟಿ ಸೌಲಭ್ಯ
ಶಕ್ತಿ ಯೋಜನೆಯಡಿ 191 ಕೋಟಿ ಮಹಿಳೆಯರು ಉಚಿತವಾಗಿ ಈವರೆಗೆ ಬಸ್ಸುಗಳಲ್ಲಿ ಪ್ರಯಾಣಿಸಿದ್ದಾರೆ. ಗೃಹಜ್ಯೋತಿ, 1.18 ಲಕ್ಷ ಕುಟುಂಬಗಳಿಗೆ ಗೃಹಲಕ್ಷ್ಮಿ ತಲುಪುತ್ತಿದೆ. ಪಿಯುಸಿ ನಲ್ಲಿ ರ್ಯಾಂಕ್ ಪಡೆದ ಹುಡುಗ ಕೂಡ ಈ ಬಗ್ಗೆ ಪ್ರಸ್ತಾಪ ಮಾಡಿರುವುದು ಇದರ ಉಪಯುಕ್ತತೆಯನ್ನು ಸಾರುತ್ತದೆ. ಅನ್ನಭಾಗ್ಯ , ಯುವನಿಧಿ ಯೋಜನೆಗಳು . 1.20 ಕೋಟಿ ಕುಟುಂಬಗಳ ನಾಲ್ಕೂವರೆ ಕೋಟಿ ಜನರಿಗೆ ಇದರಿಂದ ಉಪಯೋಗವಾಗುತ್ತಿದೆ ಎಂದರು.

ಕುಮಾರಸ್ವಾಮಿಯವರನ್ನು ಸೋಲಿಸಿ
ಗ್ಯಾರಂಟಿಗಳನ್ನು ಟೀಕಿಸುವ ದೇವೇಗೌಡರು, ಕುಮಾರಸ್ವಾಮಿಯವರಿಗೆ ಬಡವರ ಬಗ್ಗೆ ಕಾಳಜಿ ಇಲ್ಲ. ಕುಮಾರಸ್ವಾಮಿ ಅವರು ಚನ್ನ ನಿಲ್ಲಲು ಧೈರ್ಯ ಸಾಲದೆ ಮಂಡ್ಯಕ್ಕೆ ಬಂದಿದ್ದಾರೆ. ನೀವು ಅವರನ್ನು ಸೋಲಿಸಬೇಕು ಎಂದು ಕರೆ ನೀಡಿದರು. ಮಂಡ್ಯಕ್ಕೆ ದೇವೇಗೌಡರು ಹಾಗೂ ಕುಮಾರಸ್ವಾಮಿಯವರ ಕೊಡುಗೆ ಇಲ್ಲ. ಮಂಡ್ಯ ಶುಗರ್ ಕಾರ್ಖಾನೆಯನ್ನು ಅವರ ಕಾಲದಲ್ಲಿ ಮುಚ್ಚಿದರು. ನಾವು ಅಧಿಕಾರಕ್ಕೆ ಬಂದ 20 ದಿನಗಳಲ್ಲಿ 50 ಕೋಟಿ ರೂಪಾಯಿ ವೆಚ್ಚದಲ್ಲಿ ಅದನ್ನು ಪುನರಾರಂಭ ಮಾಡಲಾಯಿತು. ಇದರೊಂದಿಗೆ ಮತ್ತೊಂದು ಕಾರ್ಖಾನೆಯನ್ನು ತೆರೆಯುವುದಾಗಿ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದೇವೆ ಎಂದರು.

ಕೃಷಿ ವಿಶ್ವವಿದ್ಯಾಲಯ ಪ್ರಾರಂಭಿಸಲು ತಜ್ಞರ ಸಮಿತಿ

ವಿ.ಸಿ ಫಾರಂ ನಲ್ಲಿ ಕೃಷಿ ವಿಶ್ವ ವಿದ್ಯಾಲಯ ಪ್ರಾರಂಭಿಸಲು ತಜ್ಞರ ಸಮಿತಿ ರಚಿಸಲಾಗಿದೆ. ವರದಿ ಅಂದ ಕೂಡಲೇ ವಿವಿ ಜಾರಿಯಾಗಲಿದೆ. ಕೆ.ಆರ್.ಎಸ್ ಉದ್ಯಾನವನವನ್ನು ವಿಶ್ವ ದರ್ಜೆ ಗೇರಿಸಲು ಪ್ರಯತ್ನ ಮಾಡಲಾಗುವುದು. ವಿಶ್ವೇಶ್ವರಯ್ಯ ನಾಲೆ ಆಧುನೀಕರಣಕ್ಕೆ ಪ್ರಯತ್ನ ಮಾಡಲಾಗುವುದು. ಮಂಡ್ಯ ಜಿಲ್ಲೆಗೆ ಕಾಂಗ್ರೆಸ್ ಅವಧಿಯಲ್ಲಿ ನೀರಾವರಿ , ಲೋಕೋಪಯೋಗಿ, ಕೆರೆ ತುಂಬಿಸುವ ಕೆಲಸಕ್ಕೆ ಅನುದಾನ ಒದಗಿಸಲಾಗಿದೆ ಹಾಗೂ ಮುಂದಿನ ದಿನಗಳಲ್ಲಿ ನಾಗಮಂಗಲ ಶಾಖೆ ಎನ್.ಬಿ.ಸಿ ನಾಲೆ ಅಭಿವೃದ್ಧಿ ಮಾಡುವುದಾಗಿ ಹೇಳಿದರು.

ಮೇಕೆದಾಟು ಅಣೆಕಟ್ಟಿನ ಬಗ್ಗೆ ಬಿಜೆಪಿಯ ಸಂಸದರು ಬಾಯಿಬಿಟ್ಟಿಲ್ಲ. 34 ಲಕ್ಷ ರೈತರಿಗೆ 2000 ರೂಪಾಯಿಗಳ ತಾತ್ಕಾಲಿಕ ಪರಿಹಾರವನ್ನು 650 ಕೋಟಿ ವೆಚ್ಚದಲ್ಲಿ ನೀಡಲಾಗಿದೆ. ಬರಗಾಲದ ಬಗ್ಗೆ ದೇವೇಗೌಡರು, ಪ್ರಜ್ವಲ್ ರೇವಣ್ಣ, ಸುಮಲತಾ ಮಾತನಾಡಿಲ್ಲ. ಅದು ಬಿಟ್ಟು ಬಿಜೆಪಿಯನ್ನು ಹಾಡಿ ಹೊಗಳುತ್ತಿದ್ದಾರೆ ಎಂದರು.

ವೆಂಕಟರಮಣಗೌಡರನ್ನು ಗೆಲ್ಲಿಸುವ ಮೂಲಕ ಚೆಲುವರಾಯಸ್ವಾಮಿ ಯವರಿಗೆ ಬಲ ತುಂಬಬೇಕು
ಈ ಚುನಾವಣೆಯಲ್ಲಿ ವೆಂಕಟರಮಣ ಗೌಡರನ್ನು ಈ ಬಾರಿ ಗೆಲ್ಲಿಸಿ ಎಂದು ಮನವಿ ಮಾಡಿದರು. ಗೌಡರನ್ನು ಗೆಲ್ಲಿಸುವ ಮೂಲಕ ಚೆಲುವರಾಯಸ್ವಾಮಿ ಯವರಿಗೆ ಬಲ ತುಂಬಬೇಕು ಎಂದರು.

ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯ ಸ್ವಾಮಿ, ಅಭ್ಯರ್ಥಿ ವೆಂಕಟರಮಣಗೌಡ, ಶಾಸಕ ರವಿ ಗಣಿಗ, ಮೇಲ್ಮನೆ ಸದಸ್ಯ ಗೂಳಿ ಗೌಡ, ಪ್ರಧಾನ ಕಾರ್ಯದರ್ಶಿ ಶಿವಣ್ಣ, ಮಾಜಿ ಶಾಸಕ ಚಂದ್ರ, ಅಪ್ಪಾಜಿಗೌಡ, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!