ಇನ್ನುಮುಂದೆ ಕುಡಿಯುವ ನೀರು ವ್ಯರ್ಥ ಮಾಡಿದರೆ 1 ಲಕ್ಷ ರೂ. ದಂಡ, ಐದು ವರ್ಷ ಜೈಲು ಶಿಕ್ಷೆ
ನವದೆಹಲಿ: ಕುಡಿಯುವ ನೀರನ್ನು ದುರುಪಯೋಗಪಡಿಸಿಕೊಳ್ಳುವುದು ಭಾರತದಲ್ಲಿ ಶಿಕ್ಷಾರ್ಹ ಅಪರಾಧವಾಗಿದ್ದು, ಉಲ್ಲಂಘಿಸುವವರಿಗೆ 1 ಲಕ್ಷ ರೂ.ವರೆಗೆ ದಂಡ ಮತ್ತು ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಕೇಂದ್ರದ ಹೊಸ ನಿರ್ದೇಶನ ತಿಳಿಸಿದೆ.
ಜಲಶಕ್ತಿ ಸಚಿವಾಲಯ, ಜಲಸಂಪನ್ಮೂಲ ಇಲಾಖೆ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಇಲಾಖೆ ಅಡಿಯಲ್ಲಿ ಬರುವ ಕೇಂದ್ರ ಅಂತರ್ಜಲ ಪ್ರಾಧಿಕಾರ(ಸಿಜಿಡಬ್ಲ್ಯೂಎ) 1986ರ ಪರಿಸರ(ಸಂರಕ್ಷಣೆ) ಕಾಯ್ದೆಯ ಸೆಕ್ಷನ್ 5 ರ ಅಡಿಯಲ್ಲಿ ಈ ಅಧಿಸೂಚನೆ ಹೊರಡಿಸಿದೆ.
ದೇಶದಲ್ಲಿ ನೀರಿನ ದುರ್ಬಳಕೆ ಮತ್ತು ವ್ಯರ್ಥ ಮಾಡುವುದು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸುವಂತೆ ಕೋರಿ ರಾಜೇಂದ್ರ ತ್ಯಾಗಿ ಮತ್ತು ಸ್ನೇಹಿತರು(ಎನ್ಜಿಒ) ಅರ್ಜಿ ಸಲ್ಲಿಸಿದ್ದ ಸಂಬಂಧ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ನಿರ್ದೇಶನ ನೀಡಿದ ನಂತರ ಈ ಅಧಿಸೂಚನೆ ಹೊರಡಿಸಲಾಗಿದೆ.
ಅಧಿಸೂಚನೆಯ ಪ್ರಕಾರ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನೀರು ಸರಬರಾಜು ಮಾಡುವ ನಾಗರಿಕ ಸಂಸ್ಥೆಗಳು, ಅದು ಜಲಮಂಡಳಿ, ಜಲ ನಿಗಮ್, ಜಲಸಂಪನ್ಮೂಲ ಇಲಾಖೆ, ಮಹಾನಗರ ಪಾಲಿಕೆ, ಮುನ್ಸಿಪಲ್ ಕೌನ್ಸಿಲ್, ಅಭಿವೃದ್ಧಿ ಪ್ರಾಧಿಕಾರ, ಪಂಚಾಯತ್ ಅಥವಾ ನೀರು ಸರಬರಾಜು ಮಾಡುವು ಇನ್ನಾವುದೇ ಸಂಸ್ಥೆ ಕುಡಿಯುವ ನೀರು ವ್ಯರ್ಥವಾಗುತ್ತಿಲ್ಲ ಅಥವಾ ದುರುಪಯೋಗವಾಗುತ್ತಿಲ್ಲ ಎಂದು ಖಚಿತಪಡಿಸಿಕೊಳ್ಳಬೇಕು. ಒಂದು ದುರುಪಯೋಗವಾಗುತ್ತಿದ್ದರೆ ಅಂತಹವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಲಾಗಿದೆ.