ಕ್ಷೀಣಿಸುತ್ತಿರುವ ವೈರಸ್: ಕಳೆದ 24 ಗಂಟೆಗಳಲ್ಲಿ 45,149 ಜನರಿಗೆ ಸೋಂಕು, 480 ಮಂದಿ ಸಾವು

ನವದೆಹಲಿ: ಭಾರತದಲ್ಲಿ ಕೊರೋನಾ ವೈರಸ್ ಹಾವಳಿ ಕ್ರಮೇಣ ತಗ್ಗುತ್ತಿದ್ದು, ದಿನನಿತ್ಯದ ಸೋಂಕು, ಸಕ್ರಿಯ ಪ್ರಕರಣಗಳು ಹಾಗೂ ಸಾವು ದಿನೇ ದಿನೇ ಕ್ಷೀಣಿಸುತ್ತಿರುವುದು ಭಾರತೀಯರಲ್ಲಿ ಸಮಾಧಾನವನ್ನು ಮೂಡಿಸಿದೆ. ಹೆಮ್ಮಾರಿ ವೈರಸ್ ಆರ್ಭಟ ಗರಿಷ್ಠ ಮಟ್ಟಕ್ಕೇರಿ ಇದೀಗ ಇಳಿಮುಖದ ಹಾದಿಯಲ್ಲಿ ಸಾಗುತ್ತಿರುವುದು ಗಮನಾರ್ಹ ಬೆಳವಣಿಗೆಯಾಗಿದೆ. 

ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಒಟ್ಟು 45,149 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದ್ದು, ಸತತ ಮೂರನೇ ದಿನವೂ ಸಕ್ರಿಯ ಸೋಂಕು ಪ್ರಕರಣಗಳು 7 ಲಕ್ಷಕ್ಕಿಂತಲೂ ಕಡಿಮೆ ಮಟ್ಟದಲ್ಲಿ ಇಳಿಮುಕದತ್ತ ಸಾಗಿದೆ. 

ದೇಶದಲ್ಲಿ ಒಂದೇ ದಿನ 45,149 ಹೊಸ ಕೇಸ್ ಗಳು ದಾಖಲಾಗಿತ್ತು, ಮೂರು ತಿಂಗಳ ಬಳಿಕ ಇಷ್ಟು ಪ್ರಮಾಣಗಳಲ್ಲಿ ಪ್ರಕರಣಗಳು ತಗ್ಗಿರುವುದು ಇದೇ ಮೊದಲಾಗಿದೆ. ದಿನನಿತ್ಯದ ಪಾಸಿಟಿವ್ ಪ್ರಕರಣಗಳಲ್ಲಿ ಸತತ 8ನೇ ದಿನವೂ 60 ಸಾವಿರಕ್ಕಿಂದ ಕಡಿಮೆ ವರದಿಯಾಗಿರುವುದು ದೇಶದಲ್ಲಿ ಕೊರೋನಾ ಇಳಿಮುಖದ ಹಾದಿಯ ಸ್ಪಷ್ಟನೆ ಸೂಚನೆಗಳನ್ನು ನೀಡುತ್ತಿದೆ. 

ಪ್ರಸ್ತುತ ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 79,09,960ಕ್ಕೆ ತಲುಪಿದ್ದು, 79 ಲಕ್ಷ ಸೋಂಕಿತರ ಪೈಕಿ ನಿನ್ನೆ ಒಂದೇ ದಿನ 59,105 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇದರೊಂದಿಗೆ ದೇಶದಲ್ಲಿ ಒಟ್ಟಾರೆ 71,37,229 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, ಇನ್ನೂ 6,53,717 ಸಕ್ರಿಯ ಪ್ರಕರಣಗಳು ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದಾರೆ.

ಇದೇ ವೇಳೆ ದಿನ ನಿತ್ಯದ ಸಾವು ಪ್ರಕರಗಳಲ್ಲೂ ಇಳಿಕೆ ಕಂಡು ಬಂದಿದ್ದು,. 24 ತಾಸುಗಳ ಅವಧಿಯಲ್ಲಿ 480 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ದೇಶದಲ್ಲಿ ಒಟ್ಟು ಸಾವಿನ ಸಂಖ್ಯೆ 1,19,014ಕ್ಕೆ ತಲುಪಿದೆ. 

ಮತ್ತೊಂದು ಗಮನಾರ್ಹ ಸಂಗತಿ ಎಂದರೆ ಸೋಂಕು ಪ್ರಕರಣಗಳಲ್ಲಿ ಗರಿಷ್ಠ ಮಟ್ಟ ತಲುಪಿದ್ದ ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ 10 ರಾಜ್ಯಗಳಲ್ಲಿ ದಿನನಿತ್ಯದ ಪಾಸಿಟಿವ್ ಕೇಸ್‍ಗಳು ಕಡಿಮೆಯಾಗುತ್ತಿದ್ದು, ಚೇತರಿಕೆ ಪ್ರಮಾಣದಲ್ಲಿ ಗಣನೀಯ ಹೆಚ್ಚಳ ಕಂಡುಬಂದಿದೆ.

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 9,39,309 ಸ್ಯಾಂಪಲ್ಸ್ ಗಳನ್ನು ಪರೀಕ್ಷೆ ನಡೆಸಲಾಗಿದ್ದು, ಇದರೊಂದಿಗೆ ದೇಶದಲ್ಲಿ ಈ ವರೆಗೂ 10,34,62,778 ಕೋವಿಡ್-19 ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!