ಚೀನಾ ಆಕ್ರಮಿಸಿಕೊಂಡ ಜಾಗವನ್ನು ಯಾವಾಗ ವಶಪಡಿಸಿಕೊಳ್ಳುತ್ತೀರಿ: ರಾಹುಲ್ ಗಾಂಧಿ ಪ್ರಶ್ನೆ

ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣಾ ಪ್ರಚಾರದಲ್ಲಿ ಗಲ್ವಾಣ್ ಕಣಿವೆ ಸಂಘರ್ಷದಲ್ಲಿ ಯೋಧರ ಪ್ರಾಣತ್ಯಾಗವನ್ನು ಪ್ರಸ್ತಾಪಿಸಿದ ಪ್ರಧಾನಿ ಮೋದಿಗೆ ಪ್ರಶ್ನೆ ಹಾಕಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಲಡಾಕ್ ನಲ್ಲಿ ಭಾರತೀಯ ಪ್ರಾಂತ್ಯದೊಳಗೆ ಚೀನಾದ ಸೇನೆ ಒಳನುಗ್ಗಿಲ್ಲ ಎಂದು ಪ್ರಧಾನಿ ದೇಶಕ್ಕೆ ಸುಳ್ಳು ಹೇಳಿದ್ದಾರೆ ಎಂದು ಆರೋಪಿಸಿದ್ದಾರೆ.

ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಲಡಾಕ್ ನಲ್ಲಿ ಒಳನುಸುಳಲಿಲ್ಲ ಎಂದು ಸುಳ್ಳು ಹೇಳಿ ಪ್ರಧಾನಿ ಭಾರತೀಯ ಸೇನೆಗೆ ಅವಮಾನ ಮಾಡಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಬಿಹಾರದ ನವಾಡ ಜಿಲ್ಲೆಯಲ್ಲಿ ಇಂದು ಮೊದಲ ಬಾರಿಗೆ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಚೀನಾದ ಸೇನೆ ಲಡಾಕ್ ನಲ್ಲಿ 1200 ಚದರ ಕಿಲೋ ಮೀಟರ್ ಗಳಷ್ಟು ಭಾರತದ ಪ್ರಾಂತ್ಯದೊಳಗೆ ಬಂದು ನಮ್ಮ ಜಾಗವನ್ನು ಆಕ್ರಮಿಸಿಕೊಂಡಿದೆ. ನಮ್ಮ ಸೈನಿಕರು ಚೀನಾದ ಸೈನಿಕರು ಒಳನುಗ್ಗಿದಾಗ ಯುದ್ಧ ಮಾಡಿ ಪ್ರಾಣ ತ್ಯಾಗ ಮಾಡಿಕೊಂಡರು. ಆದರೆ ಪ್ರಧಾನಿ ಮೋದಿ ಮಾತ್ರ ಚೀನಾದ ಸೇನೆ ಭಾರತದ ಪ್ರಾಂತ್ಯದೊಳಗೆ ನುಗ್ಗಿಲ್ಲ ಎಂದು ಹೇಳಿದ್ದಾರೆ. ಚೀನಾ ಸೇನೆ ಆಕ್ರಮಿಸಿಕೊಂಡಿರುವ ಜಾಗವನ್ನು ಯಾವಾಗ ತೆರವು ಮಾಡುತ್ತಾರೆ ಎಂದು ಪ್ರಧಾನಿ ಹೇಳಬೇಕು ಎಂದು ಹೇಳಿದರು.

ದೇಶವನ್ನು ಮತ್ತು ರಾಜ್ಯವನ್ನು ಕಾಪಾಡಲು ನಿತೀಶ್ ಕುಮಾರ್ ನೇತೃತ್ವದ ಸರ್ಕಾರಕ್ಕೆ ಮತ ನೀಡಬೇಡಿ ಎಂದು ರಾಹುಲ್ ಗಾಂಧಿ ಪ್ರಚಾರ ವೇಳೆ ಮನವಿ ಮಾಡಿಕೊಂಡರು.

Leave a Reply

Your email address will not be published. Required fields are marked *

error: Content is protected !!