230 ಲೋಕಸಭಾ ಸ್ಥಾನಗಳಲ್ಲಿ ಮಾತ್ರ ಸ್ಪರ್ಧಿಸಿರುವ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ: ಬೊಮ್ಮಾಯಿ

ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ ಅವರು ತಂದೆಗೆ ತಕ್ಕ ಮಗ, ಜಗ ಮೆಚ್ಚಿದ ಮಗ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.

ಇಂದು ಬಿ.ವೈ ರಾಘವೇಂದ್ರ ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದ ಬೃಹತ್ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಂಗ್ರೆಸ್ ನವರು ಹೊಸ ಗ್ಯಾರೆಂಟಿ ಗಳನ್ನು ಘೊಷಣೆ ಮಾಡಿದ್ದಾರೆ. ಪ್ರತಿ ಮನೆ ಮಹಿಳೆಯರಿಗೆ ಒಂದು ಲಕ್ಷ ರೂ. ಕೊಡುವುದಾಗಿ ಹೇಳುತ್ತಿದ್ದಾರೆ.ಲೋಕಸಭೆಯಲ್ಲಿ 543 ಸ್ಥಾನಗಳಿವೆ. ಸಂಸತ್ತಿನಲ್ಲಿ ಸ್ಪಷ್ಟ ಬಹುಮತ ಪಡೆಯಲು 272 ಸ್ಥಾನಗಳು ಬೇಕು. ಕಾಂಗ್ರೆಸ್ ಲೋಕಸಭೆಗೆ ಸ್ಪರ್ಧೆ ಮಾಡಿರುವುದೇ 230 ಸ್ಥಾನಗಳು. ಅವರು ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಪರೀಕ್ಷೆಯಲ್ಲಿ ಪಾಸ್ ಆಗಲು ಕನಿಷ್ಠ 35 ಅಂಕಗಳು ಬೇಕು. ಆದರೆ, ಇವರು ಪರೀಕ್ಷೆ ಬರೆದಿರುವುದೇ 20 ಅಂಕಗಳಿಗೆ ಇವರು ಪಾಸ್ ಆಗಲು ಹೇಗೆ ಸಾಧ್ಯ ? ಕಾಂಗ್ರೆಸ್ ಪಕ್ಷ ಫೆಲ್ ಆಗುವ ಬೇಕಾಬಿಟ್ಟಿ ಪಕ್ಷ ಎಂದು ವಾಗ್ದಾಳಿ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿಯವರು ಕೊವಿಡ್ ಸಂದರ್ಭದಲ್ಲಿ ದೇಶದ ನೂರಾ ಮೂವತ್ತು ಕೋಟಿ ಜನರಿಗೆ ಮೂರು ಬಾರಿ ಲಸಿಕೆ ‌ಕೊಡಿಸಿ ಎಲ್ಲರ ಜೀವ ಉಳಿಸಿದ್ದಾರೆ. ಕೊವಿಡ್ ಸಂದರ್ಭದಲ್ಲಿ 10 ಕೆಜಿ ಅಕ್ಕಿ ಕೊಟ್ಟಿದ್ದಾರೆ. ಈಗಲೂ ಐದು ಕೆಜಿ ಅಕ್ಕಿಯನ್ನು ನರೇಂದ್ರ ಮೋದಿಯವರು ಉಚಿತವಾಗಿ ನೀಡುತ್ತಿದ್ದಾರೆ. ಪ್ರತಿಯೊಬ್ಬರ ಮನೆಗಳಿಗೂ ಗಂಗೆ ರೂಪದಲ್ಲಿ ಜಲ ಜೀವನ್ ಮಿಷನ್ ಯೋಜನೆ ಅಡಿಯಲ್ಲಿ ನಲ್ಲಿ ನೀರು ಕೊಡುತ್ತಿದ್ದಾರೆ. ಎಲ್ಲರಿಗೂ ಅನ್ನ, ನೀರು, ಲಸಿಕೆ ಕೊಟ್ಟು ಜೀವ ಉಳಿಸಿದ ನರೇಂದ್ರ ಮೋದಿಯವರ ಋಣ ತೀರಿಸಬೇಕು. ಎಲ್ಲರೂ ಕಮಲದ ಗುರುತಿಗೆ ಮತ ಹಾಕಿ, ಅವರ ಋಣ ತೀರಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ನಾಲ್ಕೂವರೆ ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರು. ಈ ಬಾರಿ ರಾಘವೇಂದ್ರ ಅವರನ್ನು ನಾಲ್ಕೂವರೆ ಲಕ್ಷಕ್ಕಿಂತಲೂ ಅಧಿಕ ಮತಗಳಿಂದ‌ ಆರಿಸಿ ಕಳುಹಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಗಳಾದ ಬಿ.ಎಸ್. ಯಡಿಯೂರಪ್ಪ, ಎಚ್. ಡಿ.ಕುಮಾರಸ್ವಾಮಿ, ಮಾಜಿ ಸಚಿವರಾದ ಸಿ.ಟಿ.ರವಿ, ಬೈರತಿ ಬಸವರಾಜ, ಆರಗ ಜ್ಞಾನೇಂದ್ರ, ಹರತಾಳು ಹಾಲಪ್ಪ, ಕುಮಾರ್ ಬಂಗಾರಪ್ಪ, ಶಾಸಕರಾದ ಶಾರದಾ ಪೂರ್ಯಾ ನಾಯಕ್ ಹಾಗೂ ಮತ್ತಿತರ ನಾಯಕರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!