ಇವಿಎಂ ನಲ್ಲಿ ಬಿಜೆಪಿಗೆ ಹೆಚ್ಚು ಮತ-ಪರಿಶೀಲಿಸಲು ಚುನಾವಣಾ ಆಯೋಗಕ್ಕೆ ಸುಪ್ರೀಂ ಸೂಚನೆ

ನವದೆಹಲಿ, ಏ.18: ಕಾಸರಗೋಡು ಅಣಕು ಮತದಾನದ ವೇಳೆ ಕಂಡುಬಂದ ದೋಷಗಳ ಬಗ್ಗೆ ಪರಿಶೀಲನೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಸೂಚನೆ ನೀಡಿದೆ.

ವಿದ್ಯುನ್ಮಾನ ಮತಯಂತ್ರದಲ್ಲಿ ಅಣಕು ಮತದಾನ ನಡೆಸುವ ಸಂದರ್ಭದಲ್ಲಿ ಬಿಜೆಪಿಗೆ ಹೆಚ್ಚು ಮತ ಲಭಿಸಿದ ಹಿನ್ನೆಲೆ ಸುಪ್ರೀಂ ಕೋರ್ಟ್ ಆರೋಪ ಪರಿಶೀಲಿಸುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ.
ಇವಿಎಂ-ವಿವಿಪ್ಯಾಟ್ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಹಾಗೂ ದೀಪಂಕರ್‌ ದತ್ತ ಅವರ ಪೀಠ ಮೌಖಿಕ ನಿರ್ದೇಶನ ನೀಡಿತು.ಸ್ವಯಂಸೇವಾ ಸಂಸ್ಥೆ ಎಡಿಆರ್ ಪರವಾಗಿ ಹಾಜರಾಗಿದ್ದ ನ್ಯಾಯವಾದಿ ಪ್ರಶಾಂತ್ ಭೂಷಣ್, ಕೇರಳದ ಕಾಸರಗೋಡು ಕ್ಷೇತ್ರದಲ್ಲಿಇವಿಎಂ ಮೂಲಕ ಅಣಕು ಮತದಾನ ಮಾಡುವ ಸಂದರ್ಭದಲ್ಲಿ ಬಿಜೆಪಿಗೆ ಒಂದು ಹೆಚ್ಚು ಮತ ದಾಖಲಾಗಿದ್ದನ್ನು ಮಾಧ್ಯಮವೊಂದು ಪ್ರಕಟಿಸಿದ್ದ ವರದಿಯನ್ನು ಸುಪ್ರೀಂ ಕೋರ್ಟ್ ಗಮನಕ್ಕೆ ತಂದರು.

ಇದನ್ನು ಗಮನಿಸಿದ ನ್ಯಾಯಮೂರ್ತಿ ಸಂಜೀವ್‌ ಖನ್ನಾ ಅವರು ಚುನಾವಣಾ ಆಯೋಗದ ಪರವಾಗಿ ಹಾಜರಾಗಿದ್ದ ಅಧಿಕಾರಿ ಮಣಿಂದರ್‌ ಸಿಂಗ್‌ ಅವರಿಗೆ ಪರಿಶೀಲನೆಗೊಳಪಡಿಸುವಂತೆ ನಿರ್ದೇಶನ ನೀಡಿದರು.ಬಿಜೆಪಿಗೆ ಹೆಚ್ಚುವರಿ ಮತ ದಾಖಲಾದ ಈ ವರದಿಯನ್ನು ಆಧರಿಸಿ ಕೇರಳದ ಕಾಸರಗೋಡು ಆಡಳಿತ ಪಕ್ಷ ಎಲ್‌ಡಿಎಫ್ ಹಾಗೂ ವಿಪಕ್ಷ ಯುಡಿಎಫ್ 4ಇವಿಎಂಗಳ ವಿರುದ್ಧ ಜಿಲ್ಲಾಧಿಕಾರಿಗೆ ದೂರು ನೀಡಿತ್ತು.ಇವಿಎಂನಲ್ಲಿ ದಾಖಲಾದ ಎಲ್ಲ ಮತಗಳನ್ನು ವಿವಿಪ್ಯಾಟ್‌ ಜತೆ ತಾಳೆ ಹಾಕಿ ನೋಡಬೇಕು ಹಾಗೂ ವಿವಿಪ್ಯಾಟ್‌ ಸ್ಲಿಪ್‌ಗಳನ್ನು (VVPAT Verification) ಬ್ಯಾಲೆಟ್‌ ಬಾಕ್ಸ್‌ನಲ್ಲಿ ಠೇವಣಿ ಮಾಡಲು ಆದೇಶಿಸಬೇಕು ಎಂದು ಕೋರಿ ಸಲ್ಲಿಸಿದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಲಯವು, ಪ್ರಕ್ರಿಯೆ ವಿವರಿಸುವಂತೆ ಚುನಾವಣೆ ಆಯೋಗಕ್ಕೆ ಸೂಚಿಸಿತು.ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಒಂದು ದಿನದ ಮೊದಲೇ ಸುಪ್ರೀಂ ಕೋರ್ಟ್‌ ಮಹತ್ವದ ಸೂಚನೆ ನೀಡಿದಂತಾಗಿದೆ.

Leave a Reply

Your email address will not be published. Required fields are marked *

error: Content is protected !!