ಪ್ರಜಾಪ್ರಭುತ್ವದ ತೊಟ್ಟಿಲನ್ನು ಕಸದ ಬುಟ್ಟಿಗೆ ಎಸೆಯುತ್ತಿರುವುದು ಯಾವ ನ್ಯಾಯ…?
ಭಾರತದಲ್ಲಿ ಸ್ಥಳೀಯ ಆಡಳಿತಕ್ಕೆ ತನ್ನದೇ ಆದ ಇತಿಹಾಸವಿದೆ ಮಹತ್ವವೂ ಇದೆ ಅದಕ್ಕೊಂದು ಜೀವಂತಿಕೆಯೂ ಇದೆ. ಪ್ರಾಚೀನ ಭಾರತದ ಆಡಳಿತದಿಂದ ಹಿಡಿದು ಬ್ರಿಟಿಷ್ ಆಡಳಿತ ಕಾಲದಲ್ಲೂ ಈ ಸ್ಥಳೀಯ ಆಡಳಿತವನ್ನು ಗುರುತಿಸಿ ಅದಕ್ಕೊಂದು ಸ್ವರೂಪವನ್ನು ನೀಡಿದ ಇತಿಹಾಸವು ನಮ್ಮಮುಂದಿದೆ.
ಸ್ವಾತಂತ್ರ್ಯದ ಅನಂತರದಲ್ಲಿ ಸಂವಿಧಾನದಲ್ಲಿ ಕೂಡಾ ಸ್ಥಳೀಯ ಆಡಳಿತ ಅಥಾ೯ತ ಗ್ರಾಮ ರಾಜ್ಯ ರಾಮ ರಾಜ್ಯ ಸ್ವರಾಜ್ಯ ಅನ್ನುವ ಗಾಂದೀಜಿಯವರ ಕನಸಿನ ಗ್ರಾಮ ಆಡಳಿತವನ್ನು ತರುವ ನಿಟ್ಟಿನಲ್ಲಿ ಭಾರತ ಸಂವಿಧಾನದ ಭಾಗ lV ಅನುಚ್ಛೇದ 40ರಲ್ಲಿ ಸ್ಥಳೀಯ ಆಡಳಿತದ ಕುರಿತಾಗಿ ಸ್ವಷ್ಟವಾಗಿ ಉಲ್ಲೇಖಿಸಲಾಗಿದೆ.
ಈ ನಿಟ್ಟಿನಲ್ಲಿ ಸ್ಥಳೀಯ ಸರ್ಕಾರವನ್ನು ರೂಪಿಸುವ ನಿಟ್ಟಿನಲ್ಲಿ ಕಾಲಕಾಲಕ್ಕೆ ಕೆಲವೊಂದು ಸಮಿತಿಗಳನ್ನು ರಚಿಸಿ ಅದರ ವರದಿಯನ್ನು ಆಧರಿಸಿ ಸ್ಥಳೀಯ ಸರ್ಕಾರ ಸ್ಥಾಪನೆ ಮಾಡುವ ಪ್ರಯೇೂಗವನ್ನು ಮುಂದುವರಿಸಿಕೊಂಡು ಬರಲಾಗಿದೆ.
1957ರಲ್ಲಿ ಬಲವಂತ ರಾಯ್ ಮೆಹತಾ ಕಮಿಟಿ 1977ರಲ್ಲಿ ಅಶೇೂಕ ಮೆಹತಾ ಕಮಿಟಿ, 1985 ರಲ್ಲಿ ಜಿ.ವಿ.ಕೆ.ರಾವ್ ಕಮಿಟಿ, 1988ರಲ್ಲಿ ಎಲ್.ಎಂ.ಸಿಂಗ್ನಿವಿ ಕಮಿಟಿ ರಚಿಸಿ ಈ ಎಲ್ಲಾ ಕಮಿಟಿಗಳು ನೀಡಿದ ವರದಿಯ ಆಧಾರದಲ್ಲಿ ಸ್ಥಳೀಯ ಆಡಳಿತವನ್ನು ಹಂತ ಹಂತವಾಗಿ ಪ್ರಯೇೂಗಾತ್ಮಕವಾಗಿ ಅನುಷ್ಠಾನ ಗೊಳಿಸಲಾಯಿತು. ಈ ಎಲ್ಲಾ ಗ್ರಾಮರಾಜ್ಯದ ಪ್ರಯೇೂಗಗಳು ಕೆಲವೊಂದು ನ್ಯೂನತೆಗಳಿಂದಾಗಿ ಸಂಪೂರ್ಣವಾದ ಯಶಸ್ವಿ ಕಾಣಲು ವಿಫಲವಾಯಿತು.
1992 ರಲ್ಲಿ ಸಂವಿಧಾನದಲ್ಲಿ 73 ಮತ್ತು 74 ನೇ ತಿದ್ದುಪಡಿ ತರುವುದರ ಮೂಲಕ ಪಂಚಾಯತ್ ರಾಜ್ಯ ವ್ಯವಸ್ಥೆಗೆ ಮರು ಜೀವ ನೀಡಿದ ಸಂಕ್ರಮಣ ಕಾಲ…
ಇದುವರೆಗೂ ಸ್ಥಳೀಯ ಆಡಳಿತ ವೆಂದರೆ ಅದೊಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧೀನದಲ್ಲಿರ ಬೇಕಾದ ಹಂಗಿನ ಸಂಸ್ಥೆ ಅನ್ನುವ ಕಾಟಾಚಾರದ ವ್ಯವಸ್ಥೆ ಅನ್ನಿಸಿಕೊಂಡಿತ್ತು. ಆದರೆ ಭಾರತದ ಸಂವಿಧಾನಕ್ಕೆ ಪ್ರಮುಖವಾಗಿ 73 ಮತ್ತು 74 ನೇ ಸಂವಿಧಾನ ತಿದ್ದುಪಡಿ ತರುವುದರ ಮೂಲಕ 11 ಮತ್ತು 12 ಎರಡು ಶೆಡ್ಯೂಲ್ಸಗಳನ್ನು ಸೇರಿಸುವುದರ ಮೂಲಕ ಗ್ರಾಮೀಣ ಮತ್ತು ನಗರ ವ್ಯಾಪ್ತಿಯಲ್ಲಿ ಸ್ಥಳೀಯ ಆಡಳಿತಕ್ಕೊಂದು ಶಾಶ್ವತವಾದ ಹೊಸ ದಿಕ್ಕನ್ನು ನೀಡುವ ಸಂವಿಧಾನದ ಬಲವನ್ನು ನೀಡುವ ಕ್ರಮಕ್ಕೆ ಭಾರತದ ಸಂಸತ್ತು ಸಾಕ್ಷ್ಯೀಯಾಯಿತು.
ಭಾರತದ ಆಡಳಿತ ವ್ಯವಸ್ಥೆಯಲ್ಲಿ ಮೂರು ಗಾಲಿಗಳನ್ನು ಗುರುತಿಸುವ ಅವಕಾಶ ನಮ್ಮದಾಯಿತು. (three tire system)ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಆಡಳಿತ. ಇದೊಂದು ಪರಿಪಕ್ವವಾದ ಒಕ್ಕೂಟ ವ್ಯವಸ್ಥೆ ಅನ್ನುವ ಮಟ್ಟಿಗೆ ನಾವು ಹೆಮ್ಮೆ ಪಡುವ ಸಂವಿಧಾನದ ಆಶಯವಾಗಿತ್ತು. ಅಂದರೆ ಕೇಂದ್ರ ರಾಜ್ಯ ಸರ್ಕಾರಗಳಿಗೆ ಹೇಗೆ ಜನ ಪ್ರತಿನಿಧಿಗಳು ಆಯ್ಕೆಗೊಳ್ಳುತ್ತಾರೆ, ಸರ್ಕಾರ ಹೇಗೆ ಐದು ವರುಷಗಳಿಗೊಮ್ಮೆ ರಚನೆಯಾಗುತ್ತೆ. ಅದೇ ತರದಲ್ಲಿ ಈ ಮೂರು ಚಕ್ರಗಳು ಯಾವುದೇ ಅಡೆತಡೆ ಇಲ್ಲದೆ ಸಾಂಗವಾಗಿ ಸಂವಿಧಾನದ ಚೌಕಟ್ಟಿನಲ್ಲಿ ಕಾರ್ಯ ನಿವ೯ಹಿಸಬಹುದೆಂಬ ನಂಬಿಕೆ ನಮ್ಮದಾಗಿತ್ತು.
ಪ್ರೊ.ಸುರೇಂದ್ರನಾಥ್ ಶೆಟ್ಟಿ ಕೊಕ್ಕರ್ಣೆ