ಅಭಿವೃದ್ಧಿ ಪರ ಕೆಲಸಕ್ಕೆ ಬೆಂಬಲ ನೀಡಿ-ವಕೀಲರ ಸಂವಾದದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್

ಮಂಗಳೂರು: ಸಮಾಜದ ಮುಖ್ಯವಾಹಿನಿಯಲ್ಲಿ ಕೆಲಸ ಮಾಡುವ ವಕೀಲರು, ತಾವು ಅರಿತಿರುವ ವಿಚಾರವನ್ನು ಸಮಾಜಕ್ಕೆ ತಿಳಿಸುವ ಕೆಲಸ ಆಗಬೇಕಿದೆ. ಅಭಿವೃದ್ಧಿ ಪರ ಕೆಲಸ ಮಾಡುವವರಿಗೆ ಬೆಂಬಲ ನೀಡಬೇಕಾದ ಅಗತ್ಯವಿದೆ ಎಂದು ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಹೇಳಿದರು.

ಬುಧವಾರ ಸಂಜೆ ಓಷಿಯನ್ ಪರ್ಲ್’ನಲ್ಲಿ ನಡೆದ ವಕೀಲರ ಜೊತೆಗಿನ ಸಂವಾದದಲ್ಲಿ ಅವರು ಮಾತನಾಡಿದರು.

ದೇಶಾದ್ಯಂತ ಏನಾಗುತ್ತಿದೆ ಎಂಬ ವಿಚಾರ ನಿಮಗೆ ತಿಳಿದಿದೆ. ಇದನ್ನೆಲ್ಲಾ ನೋಡಿಕೊಂಡು ಸುಮ್ಮನೆ ಕೂರಬಾರದು. ಹಾಗೆಂದು ಮಾತನಾಡಿದರೆ, ದೇಶದ್ರೋಹಿಗಳು ಎಂಬಂತೆ ಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ನಮ್ಮಂತಹವರ ಪ್ರಯತ್ನ ತುಂಬಾ ಅಗತ್ಯ. ಹಾಗೆಂದು ಅಪಪ್ರಚಾರದ ಅವಶ್ಯಕತೆ ನಮಗಿಲ್ಲ. ಇದ್ದ ವಿಚಾರವನ್ನು ಜನರ ಮುಂದಿಡುವ ಕೆಲಸವನ್ನು ಮಾಡಬೇಕು ಎಂದರು.

ಈ ಬಾರಿ ಕಾಂಗ್ರೆಸ್ ಪಕ್ಷ ಅಭ್ಯರ್ಥಿಯಾಗಿ ತನ್ನನ್ನು ಘೋಷಿಸಿದೆ. ಇದು ವಕೀಲ ಸಮುದಾಯಕ್ಕೆ ಸಿಕ್ಕ ಅವಕಾಶ. ನಿಮ್ಮ ಬೇಡಿಕೆಗಳನ್ನು ಆದ್ಯತೆ ಮೇಲೆ ಈಡೇರಿಸಲಾಗುವುದು. ಅದರಲ್ಲೂ ಮಂಗಳೂರಿಗೆ ಹೈಕೋರ್ಟ್ ಪೀಠ ಬೇಕೆಂಬ ಬೇಡಿಕೆ ಇದ್ದು, ಇದರ ಬಗ್ಗೆ ತಾನು ಉತ್ಸಾಹಿತನಾಗಿದ್ದೇನೆ ಎಂದರು.

ಪ್ರಶ್ನಿಸುವ ಮನೋಭಾವ ಬೆಳೆಸಿ: ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಭಾರತದಲ್ಲಿ ಏನಾಗುತ್ತಿದೆ ಎಂಬ ಪ್ರಶ್ನೆ ವಿಶ್ವಾದ್ಯಂತ ಇದೆ. ಇದನ್ನು ಪ್ರಶ್ನಿಸುವ ಮನೋಭಾವ ನಮ್ಮಲ್ಲಿ ಬೆಳೆಯಬೇಕಿದೆ. ಆದ್ದರಿಂದ ಜನರಿಗೆ ಅರಿವು ಮೂಡಿಸುವ ಕೆಲಸ ಆಗಬೇಕು ಎಂದರು.

ವರ್ತಮಾನದ ಅರಿವು ವಕೀಲರಿಗಿದೆ: ಜಿಲ್ಲಾ ಚುನಾವಣಾ ಉಸ್ತುವಾರಿ ಬಿ. ರಮಾನಾಥ ರೈ ಮಾತನಾಡಿ, ವಕೀಲ ಸಮುದಾಯ ವರ್ತಮಾನದ ಆಗು ಹೋಗುಗಳ ಬಗ್ಗೆ ಅರಿವು ಹೊಂದಿರುವವರು.
ಇಂದು ಮಾತನಾಡಲು ಭಯ ಆಗುವಂತಹ ಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಅರಿವು ಇದ್ದವರು ಮಾತನಾಡಬೇಕು ಎಂದರು.

ವಿಷಮ ಪರಿಸ್ಥಿತಿ: ಎ.ಐ.ಎಲ್.ಯು.ನ ಯಶವಂತ್ ಮರೋಳಿ ಮಾತನಾಡಿ, ನಾವು ವಿ‌ಷಮ ಪರಿಸ್ಥಿತಿಯಲ್ಲಿದ್ದೇವೆ. ಸಂವಿಧಾನದ ಮೇಲೆ ಪ್ರಹಾರ ಆಗ್ತಾ ಇದೆ. ಇದೇ ಕಾರಣಕ್ಕೆ ವಕೀಲರ ವೇಗ ಕಡಿಮೆ ಆಗ್ತಾ ಇದೆ ಎಂದರು.

ನೋಟಾ ಬಗ್ಗೆ ಎಚ್ಚರ: ವಕೀಲ ಹನೀಫ್ ಮಾತನಾಡಿ, ಕಾಂಗ್ರೆಸಿನ ಮತ ನೋಟಾಕೆ ಹೋಗದಂತೆ ಎಚ್ಚರ‌‌ ವಹಿಸಿ ಎಂದರು.

ಪದ್ಮರಾಜ್ ಅವರಿಗೆ ವಕೀಲರ ಬೆಂಬಲ: ಬಾರ್ ಅಸೋಸಿಯೇಷನಿನ ಮಾಜಿ ಕಾರ್ಯದರ್ಶಿ ದಿನಕರ ಶೆಟ್ಟಿ ಮಾತನಾಡಿ, ವಕೀಲರೆಲ್ಲರ ಬೆಂಬಲ ಪದ್ಮರಾಜ್ ಅವರಿಗೆ ಇದೆ. ಸಂವಿಧಾನವನ್ನು ರಕ್ಷಿಸುವ ನಿಟ್ಟಿನಲ್ಲಿ ವಕೀಲರಿಗೂ ಚುನಾವಣೆಯ ಕೆಲ ಜವಾಬ್ದಾರಿ ನೀಡಬೇಕು ಎಂದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮೂಸಾ ಕುಂಞ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!