ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಬಳಿ ಇದೆ 1 ಕೆಜಿ ಚಿನ್ನದ ಬಿಸ್ಕೆಟ್, 13.88 ಕೋಟಿ ರೂ. ಮೌಲ್ಯದ ಆಸ್ತಿ
ಬೆಂಗಳೂರು: ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಬುಧವಾರ ನಾಮಪತ್ರ ಸಲ್ಲಿಸಿದ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಸುಮಾರು 13.88 ಕೋಟಿ ರೂ.ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿದ್ದಾರೆ.
4.06 ಕೋಟಿ ಮೌಲ್ಯದ ಹೊಣೆಗಾರಿಕೆಯನ್ನೂ ಘೋಷಿಸಿದ್ದಾರೆ. ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆಯಾಗಿರುವ ಶೋಭಾ ಅವರ ಬಳಿ ಯಾವುದೇ ಕೃಷಿ ಜಮೀನು ಇಲ್ಲ ಮತ್ತು ಕಾರು ಸಹ ಇಲ್ಲ. ಅವರ ಅಫಿಡವಿಟ್ ಪ್ರಕಾರ ಕೇಂದ್ರ ಸಚಿವೆ ಕೇವಲ ದ್ವಿಚಕ್ರ ವಾಹನವನ್ನು ಮಾತ್ರ ಹೊಂದಿದ್ದಾರೆ.
ಕರಂದ್ಲಾಜೆ ಅವರು ಸುಮಾರು 9.23 ಕೋಟಿ ರೂ. ಮೌಲ್ಯದ ಚರ ಆಸ್ತಿಯನ್ನು ಮತ್ತು 6.78 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿಯನ್ನು ಘೋಷಿಸಿ ಕೊಂಡಿದ್ದಾರೆ. ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಿಂದ ಮಾಡಿದ ಸಾಲ 4.06ಕೋಟಿ ರೂ. ಇದೆ.
57 ವರ್ಷದ ಶೋಭಾ ಕರಂದ್ಲಾಜೆ ಅವರ ಬಳಿ 1 ಕೆಜಿ ಚಿನ್ನದ ಬಿಸ್ಕಟ್(68.40 ಲಕ್ಷ ಮೌಲ್ಯ) 650 ಗ್ರಾಂ ಚಿನ್ನದ ಆಭರಣಗಳಿವೆ. 1620 ಗ್ರಾಂ ಬೆಳ್ಳಿ ಆಭರಣ ಹಾಗೂ ಬೆಳ್ಳಿ ವಸ್ತುಗಳು ಇವೆ.
ಶೋಭಾ ಕರಂದ್ಲಾಜೆ ಅವರ ವಿರುದ್ಧ ಐದು ಕ್ರಿಮಿನಲ್ ಪ್ರಕರಣಗಳು ಬಾಕಿ ಇವೆ.