ಕುಂದಾಪುರ: ಬಟ್ಟೆ ಅಂಗಡಿಯಲ್ಲಿ ಕಳವು ಪ್ರಕರಣ- ಅಪ್ರಾಪ್ತರು ಸಹಿತ ಐವರ ಬಂಧನ
ಕುಂದಾಪುರ, ಎ.4: ಎರಡು ದಿನಗಳ ಹಿಂದೆ ಗಂಗೊಳ್ಳಿಯ ಜಾಮೀಯಾ ಕಾಂಪ್ಲೆಕ್ಸ್ನಲ್ಲಿರುವ ಬಟ್ಟೆ ಅಂಗಡಿಯಲ್ಲಿ ಕಳವು ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಅಪ್ರಾಪ್ತರು ಸಹಿತ ಒಟ್ಟು ಐವರು ಆರೋಪಿಗಳನ್ನು ಗಂಗೊಳ್ಳಿ ಪೊಲೀಸರು ಬಂಧಿಸಿದ್ದಾರೆ.
ಗಂಗೊಳ್ಳಿಯ ಸುಲ್ತಾನ್ ಮೊಹಲ್ಲಾ ನಿವಾಸಿ ನದೀಮ್ (27), ಗಂಗೊಳ್ಳಿಯ ಜಾಮೀಯಾ ಮೊಹಲ್ಲಾ ನಿವಾಸಿ ಆರೀಫ್(18), ಭಟ್ಕಳದ ಚೌಥನಿ ರಸ್ತೆ ಸಮೀಪದ ನಿವಾಸಿ ರಯ್ಯಾನ್(18) ಬಂಧಿತ ಆರೋಪಿಗಳು. ಬಂಧಿತರಿಂದ ಮೊಬೈಲ್ ಫೋನ್, 52,000ರೂ. ನಗದು ಹಾಗೂ ಒಂದು ಬೈಕ್, ಒಂದು ಆಟೋರಿಕ್ಷಾವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಗಂಗೊಳ್ಳಿಯ ಜೆ.ಎಮ್ ರೋಡ್ ನಿವಾಸಿ ರಿಝ್ವಾನ್ ಎಂಬವರ ಎಂ.ಎಂ. ಕಲೆಕ್ಷನ್ ಬಟ್ಟೆ ಹಾಗೂ ಫ್ಯಾನ್ಸಿ ಅಂಗಡಿಗೆ ಮಾ.31ರ ಸಂಜೆ ನುಗ್ಗಿದ ಆರೋಪಿಗಳು ಅಂಗಡಿಯ ಕ್ಯಾಶ್ ಕೌಂಟರ್ನಲ್ಲಿದ್ದ 90,000ರೂ. ನಗದು ಹಾಗೂ ಮೊಬೈಲ್ ಫೋನ್ ಕಳವುಗೈದು ಪರಾರಿಯಾಗಿದ್ದರು. ರಿಝ್ವಾನ್ ಹಾಗೂ ಸಿಬ್ಬಂದಿ ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ ಅಂಗಡಿಗೆ ವಾಪಾಸ್ಸು ಬಂದು ನೋಡಿದಾಗ ಈ ಕಳವು ಪ್ರಕರಣ ಬೆಳಕಿಗೆ ಬಂದಿದೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ ಗಂಗೊಳ್ಳಿ ಠಾಣಾಧಿಕಾರಿ ಹರೀಶ್ ಆರ್.ನಾಯ್ಕ್ ಹಾಗೂ ಸಿಬ್ಬಂದಿ ಅಂಗಡಿಯೊಳಗಿನ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಕಳ್ಳತನ ನಡೆದ 48 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು.