ಕುಂದಾಪುರ: ಬಿಜೆಪಿ ಕಾರ್ಯಕ್ರಮದಲ್ಲಿ ಭೋಜನ- ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲು

ಕುಂದಾಪುರ, ಮಾ.31: ಬಿಜೆಪಿ ಕಾರ್ಯಕ್ರಮದಲ್ಲಿ ಕಾರ್ಯಕರ್ತರಿಗೆ ಭೋಜನ ವ್ಯವಸ್ಥೆ ಮಾಡುವ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿರುವ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ಬೈಂದೂರು ವಿಧಾನಸಭಾ ಕ್ಷೇತ್ರದ ಹೆಮ್ಮಾಡಿ ಗ್ರಾಮದಲ್ಲಿರುವ ಜಯಶ್ರೀ ಸಭಾಭವನದಲ್ಲಿ ಮಾ.30 ರಂದು ರವಿಚಂದ್ರ ಕೆ. ಎಂಬವರು ಬಿಜೆಪಿ ಅಭ್ಯರ್ಥಿ ಪರ ಕಾರ್ಯಕ್ರಮ ಆಯೋಜಿಸಿದ್ದು, ಈ ಕಾರ್ಯಕ್ರಮದಲ್ಲಿ ಸುಮಾರು 300 ಮಂದಿ ಭಾಗವಹಿಸಿದ್ದರು. ಕಾರ್ಯಕ್ರಮ ಮುಗಿದ ನಂತರ ಸಭೆಯಲ್ಲಿ ಭಾಗವಹಿಸಿದ ಕಾರ್ಯಕರ್ತರಿಗೆ ಚುನಾವಣೆ ನೀತಿ ಸಂಹಿತೆಗೆ ವಿರುದ್ಧವಾಗಿ ಮತ್ತು ಚುನಾವಣಾ ಅಧಿಕಾರಿಯವರ ಯಾವುದೇ ಪೂರ್ವ ಅನುಮತಿ ಪಡೆಯದೆ ಊಟದ ವ್ಯವಸ್ಥೆಯನ್ನು ಮಾಡಿರುವುದಾಗಿ ದೂರಲಾಗಿದೆ.

ಈ ಮೂಲಕ ಮತದಾನದ ಬಗ್ಗೆ ಪ್ರಭಾವ ಬೀರಿ, ಚುನಾವಣೆಯ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದು, ಈ ಕೃತ್ಯದಲ್ಲಿ ಜಯಶ್ರೀ ಸಭಾಭವನದ ಮೇಲ್ವಿಚಾರಕ ಕೂಡ ಭಾಗಿಯಾಗಿದ್ದಾರೆಂದು ಬೈಂದೂರು ವಿಧಾನಸಭಾ ಕ್ಷೇತ್ರದ ಪ್ಲೈಯಿಂಗ್ ಸ್ಕ್ವಾಡ್ ಅಧಿಕಾರಿ ಕಿರಣ ವಡ್ತ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!