ಕಾನೂನನ್ನು ಗೌರವಿಸದ ಪೊಲೀಸ್ ಅಧಿಕಾರಿಗೆ ಸಹಾನುಭೂತಿ ತೋರಿಸುವುದಿಲ್ಲ: ಹೈಕೋರ್ಟ್

ಬೆಂಗಳೂರು: ಆರೋಪಿಯೊಬ್ಬರಿಗೆ ನೀಡಲಾಗಿದ್ದ ನಿರೀಕ್ಷಣಾ ಜಾಮೀನಿನ ಪ್ರತಿಯನ್ನು ಹರಿದು, ನೆಲಕ್ಕೆ ಎಸೆದು, ಜಾಮೀನು ಮಂಜೂರು ಮಾಡಿದ ಸೆಷನ್ಸ್ ನ್ಯಾಯಾಧೀಶರನ್ನು ನಿಂದಿಸಿ ನ್ಯಾಯಾಂಗದ ಪ್ರತಿಷ್ಠೆಗೆ ಧಕ್ಕೆ ತಂದ ಆರೋಪದ ಮೇಲೆ ಇನ್ಸ್‌ಪೆಕ್ಟರ್ ಹರೀಶ್ ವಿ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ.

2021ರಲ್ಲಿ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಹರೀಶ್ ಸಬ್‌ಇನ್ಸ್‌ಪೆಕ್ಟರ್ ಆಗಿದ್ದಾಗ ಈ ಘಟನೆ ನಡೆದಿತ್ತು. ‘ಅರ್ಜಿದಾರರು ಪೊಲೀಸ್ ಅಧಿಕಾರಿಯಾಗಿದ್ದು, ನ್ಯಾಯಾಲಯದ ಆದೇಶವನ್ನು ಅವಮಾನಿಸಿದ್ದಾರೆ. ನ್ಯಾಯಾಲಯದ ಆದೇಶವನ್ನು ಹರಿದು, ಅದನ್ನು ನೆಲದ ಮೇಲೆ ಎಸೆದಿದ್ದಾರೆ ಮತ್ತು ನಿರೀಕ್ಷಣಾ ಜಾಮೀನು ನೀಡಿದ ಸೆಷನ್ಸ್ ನ್ಯಾಯಾಧೀಶರನ್ನು ಹೊಲಸು ಭಾಷೆಯಲ್ಲಿ ನಿಂದಿಸಿದ್ದಾರೆ. ಅಂತಹ ಪೋಲೀಸ್ ಅಧಿಕಾರಿಯನ್ನು ಕಾನೂನು ಪ್ರಕಾರ ವಿಚಾರಣೆಗೆ ಒಳಪಡಿಸಲಾಗುತ್ತದೆ ಮತ್ತು ಶಿಕ್ಷಿಸಲಾಗುತ್ತದೆ. ಪೊಲೀಸ್ ಇಲಾಖೆಯು ಅವರ ವಿರುದ್ಧ ಇಲಾಖಾ ವಿಚಾರಣೆಯನ್ನು ನಡೆಸಬೇಕು. ಕಾನೂನಿನ ಬಗ್ಗೆ ಗೌರವವಿಲ್ಲದ ಇಂತಹ ವ್ಯಕ್ತಿಗೆ ನ್ಯಾಯಾಲಯವು ಯಾವುದೇ ಸಹಾನುಭೂತಿ ತೋರಿಸಲು ಸಾಧ್ಯವಿಲ್ಲ. ಹೀಗಾಗಿ ಅವರ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸಲು ಆಗುವುದಿಲ್ಲ’ ಎಂದು ನ್ಯಾಯಮೂರ್ತಿ ಕೆ ನಟರಾಜನ್ ಅವರು ಹರೀಶ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದರು.

ಹರೀಶ್ ಅವರ ವರ್ತನೆಯನ್ನು ಮೊಬೈಲ್ ಫೋನ್‌ನಲ್ಲಿ ಚಿತ್ರೀಕರಿಸಿದ ಇಬ್ಬರು ವಕೀಲರು, ಘಟನೆಯ ಪ್ರತ್ಯಕ್ಷದರ್ಶಿ ಗಳಾಗಿದ್ದಾರೆ. ಆರೋಪಿ ಪೊಲೀಸ್ ಅಧಿಕಾರಿಯು ನ್ಯಾಯಾಲಯದ ಜೊತೆಗೆ ದೂರುದಾರ ನಾರಾಯಣ ಸ್ವಾಮಿ ಅಲಿಯಾಸ್ ಜೆಸಿಬಿ ನಾರಾಯಣ್ ಅವರ ಬಗ್ಗೆಯೂ ಅಸಭ್ಯವಾಗಿ ವರ್ತಿಸಿದ್ದಾರೆ. ಹೀಗಾಗಿ, ಅರ್ಜಿದಾರರು ವಿಚಾರಣೆಯನ್ನು ಎದುರಿಸಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಕೊಂಡಿರುವ ನಾರಾಯಣಸ್ವಾಮಿ ಅವರು ಸಲ್ಲಿಸಿರುವ ಖಾಸಗಿ ದೂರಿನ ಆಧಾರದ ಮೇಲೆ ಹರೀಶ್ ಅವರು ಜುಲೈ 30, 2021 ರಂದು ಆನೇಕಲ್‌ನ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ತಮ್ಮ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ಪ್ರಶ್ನಿಸಿದರು. ಜುಲೈ 10, 2021 ರಂದು ಪ್ರಕರಣವೊಂದರ ವಿಚಾರಣೆಗಾಗಿ ತನ್ನನ್ನು ಹುಳಿಮಾವು ಪೊಲೀಸ್ ಠಾಣೆಗೆ ಇನ್ಸ್‌ಪೆಕ್ಟರ್ ಕರೆದೊಯ್ದರು.ನಂತರಅವರನ್ನು ಕೋರಮಂಗಲದಲ್ಲಿರುವ ಡಿಸಿಪಿ ಕಚೇರಿಗೆ ಕರೆತಂದರು, ಅಲ್ಲಿ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು ಎಂದಿದ್ದಾರೆ.

ಆ ದಿನ ಸಂಜೆ 4 ಗಂಟೆ ಸುಮಾರಿಗೆ ನನ್ನನ್ನು ಬಂಧಿಸಲು ಹರೀಶ್ ಅವರು ಪೊಲೀಸ್ ಸಿಬ್ಬಂದಿಯೊಂದಿಗೆ ಡಿಸಿಪಿ ಕಚೇರಿಗೆ ಬಂದರು. ಸರ್ಜಾಪುರ ಪೊಲೀಸರು ದಾಖಲಿಸಿರುವ ಪ್ರಕರಣದಲ್ಲಿ ದೂರುದಾರರಿಗೆ ನಿರೀಕ್ಷಣಾ ಜಾಮೀನು ದೊರಕಿರುವ ಬಗ್ಗೆ ವಕೀಲರು ಹರೀಶ್‌ಗೆ ಮಾಹಿತಿ ನೀಡಿದರು. ಈ ವೇಳೆ ಜಾಮೀನು ಆದೇಶದ ಪ್ರತಿಯನ್ನು ಸ್ವೀಕರಿಸಿದ ಹರೀಶ್, ಅದನ್ನು ಹರಿದು ನೆಲಕ್ಕೆ ಎಸೆದರು. ತಮ್ಮ ಠಾಣೆಗೆ ತಾವೇ ನ್ಯಾಯಾಧೀಶರು ಎಂದ ಹರೀಶ್, ಜಾಮೀನು ನೀಡಿದ ನ್ಯಾಯಾಧೀಶರನ್ನು ಅಸಭ್ಯ ಭಾಷೆಯಲ್ಲಿ ನಿಂದಿಸಿದರು. ದೂರುದಾರರಿಗೆ ತಾವು ಜಾಮೀನು ನೀಡಬೇಕು ಹೊರತು ಯಾವುದೇ ನ್ಯಾಯಾಲಯವಲ್ಲ ಎಂದು ಹೇಳಿದರು.ದೂರುದಾರರನ್ನು ಠಾಣೆಗೆ ಕರೆದೊಯ್ದು ರಿವಾಲ್ವರ್‌ನಿಂದ ಬೆದರಿಸಿ ‘ಎನ್‌ಕೌಂಟರ್‌’ನಲ್ಲಿ ಮುಗಿಸಿ ಶವವನ್ನು ಹೂಳುವುದಾಗಿ ಹೇಳಿದರು ಎಂದು ನಾರಾಯಣಸ್ವಾಮಿ ದೂರಿದ್ದಾರೆ.

Leave a Reply

Your email address will not be published. Required fields are marked *

error: Content is protected !!